ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯ; ವಿರಾಟ್-ರೋಹಿತ್ ಆಡುವುದು ವೈಯಕ್ತಿಕ ಆಯ್ಕೆ, ಇತರರಿಗೆ ಕಡ್ಡಾಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯ; ವಿರಾಟ್-ರೋಹಿತ್ ಆಡುವುದು ವೈಯಕ್ತಿಕ ಆಯ್ಕೆ, ಇತರರಿಗೆ ಕಡ್ಡಾಯ

ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯ; ವಿರಾಟ್-ರೋಹಿತ್ ಆಡುವುದು ವೈಯಕ್ತಿಕ ಆಯ್ಕೆ, ಇತರರಿಗೆ ಕಡ್ಡಾಯ

ದುಲೀಪ್‌ ಟ್ರೋಫಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಆಡುವ ಆಯ್ಕೆಯು ಆಟಗಾರರಿಗೆ ಬಿಟ್ಟದ್ದು ಎಂದು ಬಿಸಿಸಿಐ ಹೇಳಿದೆ. ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯ; ವಿರಾಟ್-ರೋಹಿತ್ ಆಡುವುದು ವೈಯಕ್ತಿಕ ಆಯ್ಕೆ
ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಪಂದ್ಯ; ವಿರಾಟ್-ರೋಹಿತ್ ಆಡುವುದು ವೈಯಕ್ತಿಕ ಆಯ್ಕೆ

ಭಾರತದಲ್ಲಿ ದೇಶೀಯ ಕ್ರಿಕೆಟ್‌ನ ಪ್ರಮುಖ ಟೂರ್ನಿ ದುಲೀಪ್‌ ಟ್ರೋಫಿ (Duleep Trophy) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮೊದಲ ಪಂದ್ಯವು ಅನಂತಪುರ ಬದಲಿಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (KSCA) ಭಾರತದ ದೇಶೀಯ ಕ್ರಿಕೆಟ್ ಋತುವಿನ ಆರಂಭಿಕ ಟೂರ್ನಿಯ ದುಲೀಪ್ ಟ್ರೋಫಿ ಪಂದ್ಯದ ಆಯೋಜನೆಗೆ ಸಜ್ಜಾಗಿದೆ. ಸೆಪ್ಟೆಂಬರ್ 5ರಿಂದ ಆರಂಭವಾಗುವ ರೆಡ್ ಬಾಲ್ ಟೂರ್ನಿಯ ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಕುರಿತು ಕೆಎಸ್‌ಸಿಎ ದೃಢಪಡಿಸಿದೆ. ಪಂದ್ಯಾವಳಿಯಲ್ಲಿ ಒಟ್ಟು ಆರು ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯವು ನಾಲ್ಕು ದಿನಗಳ ಕಾಲ ನಡೆಯಲಿದೆ.

ಪಂದ್ಯಾವಳಿಗೆ ಆಂಧ್ರಪ್ರದೇಶದ ಅನಂತಪುರವು ಆತಿಥ್ಯ ವಹಿಸಬೇಕಿತ್ತು. ಆದರೆ, ಸದ್ಯ ಮೊದಲ ಪಂದ್ಯವನ್ನು ಉದ್ಯಾನ ನಗರಿಗೆ ಸ್ಥಳಾಂತರ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳ 18ರಿಂದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಅದಕ್ಕೂ ಮುನ್ನ ನಾಲ್ಕು ತಂಡಗಳ ದುಲೀಪ್ ಟ್ರೋಫಿಯಲ್ಲಿ ಭಾರತದ ಸ್ಟಾರ್‌ ಆಟಗಾರರು ಆಡಲಿದ್ದಾರೆ. ಉನ್ನತ ಮಟ್ಟದ ಅಂತಾರಾಷ್ಟ್ರೀಯ ಮತ್ತು ದೇಶೀಯ ಆಟಗಾರರನ್ನು ಒಳಗೊಳ್ಳುವ ಟೂರ್ನಿಯು ಆಕರ್ಷಣೆ ಪಡೆದುಕೊಳ್ಳಲಿದೆ.

ನಾಲ್ಕು ತಂಡಗಳ ದುಲೀಪ್ ಟ್ರೋಫಿಯ, ಪ್ರಥಮ ದರ್ಜೆ ಸ್ವರೂಪದ ಸ್ಪರ್ಧೆಯಾಗಿದೆ. ಟೂರ್ನಿಯನ್ನು ಲೀಗ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪಂದ್ಯಾವಳಿಯು ಸೆಪ್ಟೆಂಬರ್ 22ರಂದು ಮುಕ್ತಾಯಗೊಳ್ಳುತ್ತದೆ.

ವಿರಾಟ್‌ -ರೋಹಿತ್‌ ಆಡುವುದು ಕಡ್ಡಾಯವಲ್ಲ

ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಕೂಡಾ ಭಾಗವಹಿಸುತ್ತಾರೆ ಎಂಬ ವರದಿಗಳಿದ್ದವು. ಆದರೆ, ಆಡುವ ಆಯ್ಕೆಯನ್ನು ಹಿರಿಯ ಆಟಗಾರರಿಗೆ ಬಿಸಿಸಿಐ ಬಿಟ್ಟುಬಿಟ್ಟಿದೆ. ಇವರೊಂದಿಗೆ ಜಸ್ಪ್ರೀತ್ ಬುಮ್ರಾ ಕೂಡಾ ಇಷ್ಟವಿದ್ದರೆ ಮಾತ್ರವೇ ಆಡಬಹುದು.

ಉಳಿದಂತೆ ದೇಶದ ಅಗ್ರ ಆಟಗಾರರಿಗೆ ಟೂರ್ನಿಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಆರ್ ಅಶ್ವಿನ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್‌ ಯಾದವ್‌, ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಬಹುತೇಕ ಅಂತಾರಾಷ್ಟ್ರೀಯ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇವರು ನಾಲ್ಕು ಪಂದ್ಯಗಳಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ಪಾಲ್ಗೊಳ್ಳಬಹುದು.‌

ಇಶಾನ್‌ ಕಿಶನ್‌ಗೆ ಕೊನೆಯ ಅವಕಾಶ

ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿರಂತರವಾಗಿ ಹೊರಗುಳಿದಿರುವ ಇಶಾನ್ ಕಿಶನ್, ನಾಲ್ಕು ತಂಡಗಳಲ್ಲಿ ಒಂದರಲ್ಲಿ ಆಡುವಂತೆ ಆಯ್ಕೆದಾರರು ನಿರೀಕ್ಷೆ ಇಟ್ಟಿದ್ದಾರೆ. ಇದು ಬಹುತೇಕ ಇಶಾನ್‌ ಪಾಲಿಗೆ ಕೊನೆಯ ಅವಕಾಶ ಆಗುವ ಸಾಧ್ಯತೆ ಇದೆ.

ಭಾರತದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಟೂರ್ನಿಯಲ್ಲಿ ಭಾಗವಹಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ರೋಹಿತ್ ಶರ್ಮಾ ಕೊನೆಯ ಬಾರಿಗೆ 2021ರಲ್ಲಿ ದೇಶೀಯ ಪಂದ್ಯದಲ್ಲಿ ಭಾಗವಹಿಸಿದ್ದರು. ಅತ್ತ ವಿರಾಟ್‌ ಕೊಹ್ಲಿ 2015ರ ನಂತರ ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

Whats_app_banner