IND vs SL: 2524 ದಿನಗಳ ಕಾಯುವಿಕೆಗೆ ಇಂದೇ ಕೊನೆ: 7 ವರ್ಷಗಳ ಬಳಿಕ ಸಿಂಹಳೀಯರ ನಾಡಲ್ಲಿ ರೋಹಿತ್-ಕೊಹ್ಲಿ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Sl: 2524 ದಿನಗಳ ಕಾಯುವಿಕೆಗೆ ಇಂದೇ ಕೊನೆ: 7 ವರ್ಷಗಳ ಬಳಿಕ ಸಿಂಹಳೀಯರ ನಾಡಲ್ಲಿ ರೋಹಿತ್-ಕೊಹ್ಲಿ

IND vs SL: 2524 ದಿನಗಳ ಕಾಯುವಿಕೆಗೆ ಇಂದೇ ಕೊನೆ: 7 ವರ್ಷಗಳ ಬಳಿಕ ಸಿಂಹಳೀಯರ ನಾಡಲ್ಲಿ ರೋಹಿತ್-ಕೊಹ್ಲಿ

Rohit Sharma and Virat Kohli: ಭಾರತ-ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಇಂದು (ಆಗಸ್ಟ್​ 2) ನಡೆಯಲಿದೆ. ಈ ಪಂದ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೈದಾನಕ್ಕಿಳಿದ ಕೂಡಲೇ ಕಳೆದ ಏಳು ವರ್ಷಗಳಿಂದ ನಡೆಯುತ್ತಿದ್ದ ಕಾಯುವಿಕೆಯೂ ಅಂತ್ಯವಾಗಲಿದೆ.

2524 ದಿನಗಳ ಕಾಯುವಿಕೆಗೆ ಇಂದೇ ಕೊನೆ: 7 ವರ್ಷಗಳ ಬಳಿಕ ಸಿಂಹಳೀಯರ ನಾಡಲ್ಲಿ ರೋಹಿತ್-ಕೊಹ್ಲಿ
2524 ದಿನಗಳ ಕಾಯುವಿಕೆಗೆ ಇಂದೇ ಕೊನೆ: 7 ವರ್ಷಗಳ ಬಳಿಕ ಸಿಂಹಳೀಯರ ನಾಡಲ್ಲಿ ರೋಹಿತ್-ಕೊಹ್ಲಿ

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್​ಸ್ವೀಪ್ ಮಾಡಿರುವ ಭಾರತ ತಂಡ ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ (ಆಗಸ್ಟ್ 2) ಆರಂಭವಾಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ವಿಶ್ವಕಪ್ 2024ರ ನಂತರ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸರಣಿಯ ಮೊದಲ ಪಂದ್ಯದೊಂದಿಗೆ ಭಾರತೀಯ ಅಭಿಮಾನಿಗಳ ಸುದೀರ್ಘ ಕಾಯುವಿಕೆಯೂ ಅಂತ್ಯವಾಗಲಿದೆ.

7 ವರ್ಷಗಳ ನಂತರ ಸಿಂಹಳೀಯರ ನಾಡಲ್ಲಿ ರೋಹಿತ್-ಕೊಹ್ಲಿ

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ. ಈ ಪಂದ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೈದಾನಕ್ಕಿಳಿದ ಕೂಡಲೇ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದ ಕಾಯುವಿಕೆಯೂ ಅಂತ್ಯವಾಗಲಿದೆ. ವಾಸ್ತವವಾಗಿ, 3 ಸೆಪ್ಟೆಂಬರ್ 2017ರ ನಂತರ ಈ ಇಬ್ಬರು ಸ್ಟಾರ್ ಆಟಗಾರರು ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಆಡುವುದು ಇದೇ ಮೊದಲ ಬಾರಿಗೆ. ಈ ಇಬ್ಬರೂ ಆಟಗಾರರು 2017ರ ದ್ವಿಪಕ್ಷೀಯ ಸರಣಿಯ ನಂತರ ಏಕದಿನ ಸರಣಿಗಾಗಿ ಶ್ರೀಲಂಕಾಕ್ಕೆ ಭೇಟಿ ನೀಡಿರಲಿಲ್ಲ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಕೊನೆಯ ಏಕದಿನ ಸರಣಿಯ ವೇಳೆ ಶ್ರೀಲಂಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವಿರಾಟ್ 5 ಪಂದ್ಯಗಳಲ್ಲಿ 110ರ ಸರಾಸರಿಯಲ್ಲಿ 330 ರನ್ ಗಳಿಸಿದ್ದರು. ಈ ಅವಧಿಯಲ್ಲಿ 1 ಅರ್ಧಶತಕ ಹಾಗೂ 2 ಶತಕ ಸಿಡಿಸಿದ್ದರು. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ಇದಲ್ಲದೇ ರೋಹಿತ್ 5 ಪಂದ್ಯಗಳಲ್ಲಿ 75.50 ಸರಾಸರಿಯಲ್ಲಿ 302 ರನ್ ಗಳಿಸಿದ್ದರು. ಈ ಸರಣಿಯಲ್ಲಿ ಅವರು 1 ಅರ್ಧಶತಕ ಮತ್ತು 2 ಶತಕ ಸಹ ಗಳಿಸಿದರು. ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಹಿಟ್​ಮ್ಯಾನ್ ಎರಡನೇ ಸ್ಥಾನದಲ್ಲಿ ನಿಂತರು.

ಹಾಗೆಯೆ ಕೊಹ್ಲಿ-ರೋಹಿತ್ ಇಬ್ಬರೂ ಕೊನೆಯ ಬಾರಿಗೆ 2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಈಗ 9 ತಿಂಗಳ ನಂತರ, ಈ ಎರಡೂ ದಿಗ್ಗಜರು ಈ ರೂಪದಲ್ಲಿ ಪುನರಾಗಮನ ಮಾಡುತ್ತಿದ್ದಾರೆ.

ಕೊಹ್ಲಿಗೆ ಲಂಕಾ ಫೇವರಿಟ್ ತಂಡ

ಅಚ್ಚರಿಯ ವಿಷಯ ಎಂದರೆ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ ಗಳಿಸಿದಷ್ಟು ಒಟ್ಟು ರನ್​ಗಳನ್ನು ಪ್ರಸ್ತುತ ಶ್ರೀಲಂಕಾ ತಂಡ ಈವರೆಗೆ ಗಳಿಸಲು ಸಾಧ್ಯವಾಗಿಲ್ಲ. ಅಂಕಿಅಂಶಗಳ ಬಗ್ಗೆ ಮಾತನಾಡುತ್ತಾ, ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 292 ಪಂದ್ಯಗಳಲ್ಲಿ 58.68 ರ ಅದ್ಭುತ ಸರಾಸರಿಯೊಂದಿಗೆ 13848 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ತಮ್ಮ ಹೆಸರಿಗೆ 50 ಶತಕಗಳನ್ನು ಸಹ ಹೊಂದಿದ್ದಾರೆ. ಶ್ರೀಲಂಕಾ ತಂಡದ ಏಕದಿನ ರನ್‌ಗಳು 12,885. ಅಂದರೆ ಶ್ರೀಲಂಕಾ ತಂಡದಲ್ಲಿರುವ 16 ಆಟಗಾರರು ಒಟ್ಟಾಗಿ ಕೊಹ್ಲಿಯಷ್ಟು ರನ್ ಗಳಿಸಲು ಕೂಡ ಸಾಧ್ಯವಾಗಲಿಲ್ಲ. ಇಡೀ ಶ್ರೀಲಂಕಾ ತಂಡ ವಿರಾಟ್ ಕೊಹ್ಲಿ ಅವರ ಏಕದಿನ ವೃತ್ತಿಜೀವನಕ್ಕಿಂತ 963 ರನ್ ಕಡಿಮೆ ರನ್ ಗಳಿಸಿದೆ.

ಅಯ್ಯರ್-ರಾಹುಲ್ ಕಣಕ್ಕೆ?

ಭಾರತ ಮತ್ತು ಶ್ರೀಲಂಕಾ ನಡುವಣ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಎಲ್ಲರ ಕಣ್ಣಿಡಲಿದ್ದಾರೆ. ಇವರಿಬ್ಬರು ಬಹಳ ದಿನಗಳ ನಂತರ ಭಾರತ ತಂಡದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಕೊನೆಯ ಪಂದ್ಯವನ್ನು ಟೀಮ್ ಇಂಡಿಯಾಗೆ ಫೆಬ್ರವರಿ 2024ರಲ್ಲಿ ಆಡಿದ್ದರು. ಅದು ಟೆಸ್ಟ್ ಪಂದ್ಯವಾಗಿತ್ತು. ಕೆಎಲ್ ರಾಹುಲ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಜನವರಿ 2024ರಲ್ಲಿ ಆಡಿದ್ದರು.

ಭಾರತ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

(ವರದಿ: ವಿನಯ್ ಭಟ್)

Whats_app_banner