ಅಶ್ವಿನ್, ಕುಲ್ದೀಪ್ ಸ್ಪಿನ್ ಮೋಡಿಗೆ ತತ್ತರಿಸಿದ ಇಂಗ್ಲೆಂಡ್; ಗೆಲುವಿನ ಸನಿಹದಲ್ಲಿ ಭಾರತ, ಸರಣಿ ಜಯಿಸಲು ಕಾತರ
IND vs ENG 4th Test : ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿದೆ. ಈ ಪಂದ್ಯವನ್ನು ಗೆಲ್ಲಲು ಭಾರತ ತಂಡಕ್ಕೆ ಕೇವಲ 152 ರನ್ಗಳ ಅಗತ್ಯ ಇದೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಭಾರತ ಗೆಲುವಿನ ಸನಿಹಕ್ಕೆ ಬಂದಿದೆ. ಪ್ರವಾಸಿ ತಂಡದ ಎದುರು 192 ರನ್ಗಳ ಅಲ್ಪ ಗುರಿ ಪಡೆದ ಟೀಮ್ ಇಂಡಿಯಾ, ಮೂರನೇ ದಿನದಂತ್ಯಕ್ಕೆ 8 ಓವರ್ಗಳಿಗೆ 40 ರನ್ ಗಳಿಸಿದೆ. ನಾಲ್ಕನೇ ದಿನದಾಟದಲ್ಲಿ ಗೆಲುವಿಗೆ 152 ರನ್ ಗಳಿಸಿದರೆ ಜಯದ ಗೆರೆ ದಾಟಲಿದೆ. ಸ್ಪಿನ್ನರ್ಗಳ ದಾಳಿಗೆ ವಿಲವಿಲ ಒದ್ದಾಡಿದ ಇಂಗ್ಲೆಂಡ್, 2ನೇ ಇನ್ನಿಂಗ್ಸ್ನಲ್ಲಿ 145 ರನ್ಗಳಿಗೆ ಕುಸಿತ ಕಂಡಿತು.
ಏಳು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ರೋಹಿತ್ ಪಡೆಗೆ ಧ್ರುವ್ ಜುರೆಲ್ ಆಸರೆಯಾದರು. ದ್ವಿತೀಯ ದಿನದಂದು 30 ರನ್ ಗಳಿಸಿದ್ದ ಜುರೆಲ್, ಶತಕದ ಅಂಚಿನಲ್ಲಿ ಎಡವಿದರು. ಆ ಮೂಲಕ ಬೃಹತ್ ಅಂತರದ ಹಿನ್ನಡೆ ತಗ್ಗಿಸಿದರು. 149 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 90 ರನ್ ಗಳಿಸಿ ಔಟಾದರು. ಇದರೊಂದಿಗೆ ತಂಡವನ್ನು 300ರ ಗಡಿ ದಾಟಿಸಿದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 353 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ 307 ರನ್ ಕಲೆ ಹಾಕಿತು. ಇದರೊಂದಿಗೆ 46 ರನ್ಗಳ ಹಿನ್ನಡೆ ಅನುಭವಿಸಿತು. ಇಷ್ಟು ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ದೊಡ್ಡ ಮೊತ್ತದ ಗುರಿ ನೀಡುವ ವಿಶ್ವಾಸ ಹೊಂದಿತ್ತು. ಆದರೆ ಅಶ್ವಿನ್, ಕುಲ್ದೀಪ್ ಯಾದವ್ ದಾಳಿಗೆ 145 ರನ್ಗಳಿಗೆ ಆಲೌಟ್ ಆಯಿತು
46 ರನ್ಗಳ ಮುನ್ನಡೆ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಗಳಿಸಿದ 145 ರನ್ ಸೇರಿ ಒಟ್ಟು 192 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆತಿಥೇಯರು, ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಗೆಲುವಿಗೆ ಇನ್ನೂ 152 ರನ್ ಬೇಕಿದೆ. ಸದ್ಯ ರೋಹಿತ್ ಶರ್ಮಾ 24, ಯಶಸ್ವಿ ಜೈಸ್ವಾಲ್ 16 ರನ್ ಗಳಿಸಿ ಅಜೇಯರಾಗಿದ್ದಾರೆ.
ಅಶ್ವಿನ್ ಮತ್ತು ಕುಲ್ದೀಪ್ ಸ್ಪಿನ್ ಮ್ಯಾಜಿಕ್
ಎರಡನೇ ಇನ್ನಿಂಗ್ಸ್ನಲ್ಲಿ ಬೃಹತ್ ರನ್ ಪೇರಿಸುವ ನಿರೀಕ್ಷೆ ಮತ್ತು ಕನಸಿನಲ್ಲಿದ್ದ ಇಂಗ್ಲೆಂಡ್ಗೆ ಆರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ತಣ್ಣೀರು ಹಾಕಿದರು. ಅಶ್ವಿನ್ 5 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ 28 ರನ್ಗಳ ಕಾಣಿಕೆ ನೀಡಿದ್ದ ಕುಲ್ದೀಪ್ ಬೌಲಿಂಗ್ನಲ್ಲಿ 4 ವಿಕೆಟ್ ಕಿತ್ತು ಗಮನ ಸೆಳೆದರು. ಇದರ ನಡುವೆಯೂ ಜಾಕ್ ಕ್ರಾವ್ಲಿ 60 ರನ್ ಸಿಡಿಸಿದರು. ಆ ಮೂಲಕ ಗರಿಷ್ಠ ಸ್ಕೋರರ್ ಆಗಿದ್ದಾರೆ.
ಮೊದಲ ಮೂರು ಪಂದ್ಯಗಳ ಫಲಿತಾಂಶ
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 28 ರನ್ಗಳಿಂದ ಗೆಲುವು ಸಾಧಿಸಿದ್ದ ಇಂಗ್ಲೆಂಡ್, ತದ ನಂತರ ವಿಶಾಖಪಟ್ಟಣಂ ಮತ್ತು ರಾಜ್ಕೋಟ್ನಲ್ಲಿ ಭಾರತದ ಎದುರಿಗೆ ಶರಣಾದವು. ಕ್ರಮವಾಗಿ 106 ಮತ್ತು 434 ರನ್ಗಳ ಅಂತರದಿಂದ ಸೋಲು ಅನುಭವಿಸಿತು. ಇದೀಗ 4ನೇ ಪಂದ್ಯದಲ್ಲೂ ಸೋಲಿನ ಅಂಚಿನಲ್ಲಿದೆ. ಈ ಟೆಸ್ಟ್ನಲ್ಲಿ ಪರಾಭವಗೊಂಡರೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಇಂಗ್ಲೆಂಡ್ ಕೈಚೆಲ್ಲಲಿದೆ.