ವಿರಾಟ್ ಕೊಹ್ಲಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ; ಟ್ರೋಫಿ ಗೆದ್ದ ಖುಷಿಯಲ್ಲೇ ನಿವೃತ್ತಿ
Rohit Sharma Announces Retirement : ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2024 (T20 World Cup 2024) ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 7 ರನ್ಗಳ ರೋಚಕ ಗೆಲುವು ಸಾಧಿಸಿ ಎರಡನೇ ಚುಟುಕು ಟ್ರೋಫಿಯನ್ನು ಗೆದ್ದುಕೊಂಡಿದೆ. ಭಾರತ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದೀಗ ಕೊಹ್ಲಿ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಇಬ್ಬರು ಸಹ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ.
ರೋಹಿತ್ ಶರ್ಮಾ ಹೇಳಿದ್ದೇನು?
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ 2024ರ ಟಿ20 ವಿಶ್ವಕಪ್‌ಗೆ ಮೆನ್ ಇನ್ ಬ್ಲೂ ತಂಡವನ್ನು ಮುನ್ನಡೆಸಿದ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಈ ನಿರ್ಧಾರ ಪ್ರಕಟಿಸಿದ್ದಾರೆ. 'ಇದು ನನ್ನ ಕೊನೆಯ ಟಿ20ಐ ಪಂದ್ಯವಾಗಿದೆ. ಇದೇ ನನ್ನ ಕೊನೆಯ ಆಟವಾಗಿದೆ. ನಾನು ಟಿ20ಐ ಕ್ರಿಕೆಟ್ ಆಡಲು ಪ್ರಾರಂಭಿಸಿದ ದಿನದಿಂದಲೂ ಈ ಸ್ವರೂಪವನ್ನು ಆನಂದಿಸುತ್ತಿದ್ದೇನೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಉತ್ತಮ ಸಮಯ. ನಾನು ಇದರ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಬಯಸಿದ್ದು ಇದನ್ನೇ. ಈಗ ಕಪ್ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.
ಗಮನಿಸಬೇಕಾದ ಸಂಗತಿ ಏನೆಂದರೆ, ವಿರಾಟ್ ಅವರಂತೆ ರೋಹಿತ್ ಭಾರತ ತಂಡದ ಪರ ಏಕದಿನ ಮತ್ತು ಟೆಸ್ಟ್ ಎರಡನ್ನೂ ಆಡುವುದನ್ನು ಮುಂದುವರಿಸುತ್ತಾರೆ. ಆದರೆ ಟಿ20ಐ ಕ್ರಿಕೆಟ್ನಲ್ಲಿ ಯುವಕರ ತಂಡ ಕಟ್ಟಲು ಬಿಸಿಸಿಐ ಚಿಂತಿಸಿದೆ. 2007ರ ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದಲ್ಲಿ ರೋಹಿತ್ ಕೂಡ ಸ್ಥಾನ ಪಡೆದಿದ್ದರು. ಈಗ 2 ಬಾರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
ರೋಹಿತ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಐ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈಗ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20ಐ ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ. ರೋಹಿತ್ 159 ಟಿ20ಐ ಪಂದ್ಯಗಳಲ್ಲಿ 32.05 ಸರಾಸರಿ ಮತ್ತು 140.89 ಸ್ಟ್ರೈಕ್ ರೇಟ್‌ನಲ್ಲಿ 4231 ರನ್ ಗಳಿಸುವ ಮೂಲಕ ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ತಮ್ಮ ವೃತ್ತಿಜೀವನ ಪೂರ್ಣಗೊಳಿಸಿದರು. ರೋಹಿತ್ (5), ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಅತ್ಯಧಿಕ ಶತಕ ಸಿಡಿಸಿದ ಆಟಗಾರರಾಗಿ ಜಂಟಿ ವಿಶ್ವದಾಖಲೆ ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಕೂಡ ನಿವೃತ್ತಿ
ರೋಹಿತ್ಗೂ ಮುನ್ನ ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ನಿವೃತ್ತಿಯ ಕುರಿತು ಮಾತನಾಡಿದರು. ಫೈನಲ್ನಲ್ಲಿ 76 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಅವರು, ಭಾರತದ ಪರ ಇದು ತಮ್ಮ ಕೊನೆಯ ಟಿ20 ಪಂದ್ಯ ಎಂದು ಹೇಳಿದ್ದಾರೆ. ಇದರೊಂದಿಗೆ ಚುಟುಕು ಸ್ವರೂಪಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗುವ ಸಲುವಾಗಿ ಈ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದು ನನ್ನ ಕೊನೆಯ ಟಿ20 ವಿಶ್ವಕಪ್. ನಾವು ನಿಖರವಾಗಿ ಸಾಧಿಸಲು ಬಯಸಿದ್ದು ಇದನ್ನೇ. ಕೆಲವೊಮ್ಮ ನಮ್ಮಿಂದ ರನ್ ಗಳಿಸಲು ಆಗುವುದಿಲ್ಲ. ಆದರೆ, ದೇವರು ದೊಡ್ಡವನು. ಭಾರತದ ಪರ ಇದು ನನ್ನ ಕೊನೆಯ ಟಿ20 ಪಂದ್ಯ. ನಾವು ಆ ಒಂದು ಕಪ್ ಗೆಲ್ಲಬೇಕೆಂದು ಸುದೀರ್ಘ ಸಮಯದಿಂದ ಬಯಸಿದ್ದೆವು. ಅದು ಕೊನೆಗೂ ಸಾಧ್ಯವಾಗಿದೆ. ಮುಂದಿನ ಪೀಳಿಗೆ ಟಿ20 ಸ್ವರೂಪವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಅವಕಾಶ ನೀಡುವ ಸಮಯ ಎಂದಿದ್ದಾರೆ.
