ಇಂಗ್ಲೆಂಡ್ ಸರಣಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೇ 7ರ ಬುಧವಾರ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಕ್ಷಣದಿಂದಲೇ ಜಾರಿಗೆ ಬರುವಂತೆ ಐಪಿಎಲ್ ಮಧ್ಯೆಯೇ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ಸರಣಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್‌ನಿಂದ ಹಿಂದೆ ಸರಿಯುವುದಾಗಿ ಇನ್ಸ್ಟಾಗ್ರಾಂ ಸ್ಟೋರಿಯ ಮೂಲಕ ಪ್ರಕಟಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ಘೋಷಿಸಿದ್ದಾರೆ. 2013ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಹಿಟ್ಮ್ಯಾನ್ ಆಡಿರುವ 67 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಮತ್ತು 18 ಅರ್ಧಶತಕಗಳೊಂದಿಗೆ 40.57 ಸರಾಸರಿಯಲ್ಲಿ 4301 ರನ್ ಗಳಿಸಿದ್ದಾರೆ.
'ಎಲ್ಲರಿಗೂ ನಮಸ್ಕಾರ, ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಭಾರತವನ್ನು ದೀರ್ಘ ಕಾಲದ ಸ್ವರೂಪದಲ್ಲಿ ಪ್ರತಿನಿಧಿಸುವುದು ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ. ಈ ಪ್ರಯಾಣದುದ್ದಕ್ಕೂ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಾನು ನೀಲಿ ಬಣ್ಣವನ್ನು ಧರಿಸುವುದನ್ನು ಮುಂದುವರಿಸುತ್ತೇನೆ ಮತ್ತು ಏಕದಿನಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಟೆಸ್ಟ್ ಕ್ಯಾಪ್ ಜೊತೆಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಜಿಟಿ ಸರಣಿಯಲ್ಲಿ ಕಳಪೆ ಪ್ರದರ್ಶನ
ಕಳೆದ ವರ್ಷ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. ಬಾಂಗ್ಲಾದೇಶ ವಿರುದ್ಧದ ಸರಣಿ, ತವರಿನಲ್ಲಿ ನ್ಯೂಜಿಲೆಂಡ್ ಎದುರು ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಅದರಲ್ಲೂ ಬಿಜಿಟಿ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳ 5 ಇನ್ನಿಂಗ್ಸ್ಗಳಲ್ಲಿ ಕೇವಲ 31 ರನ್ ಗಳಿಸಿದ್ದರು. ಪರಿಣಾಮ ಪ್ರತಿಷ್ಠಿತ ಸರಣಿಯನ್ನು ಕಳೆದುಕೊಳ್ಳುವಂತಾಗಿತ್ತು. ಅಲ್ಲದೆ, ಅವರೇ ಸ್ವತಃ ಅಂತಿಮ ಹಾಗೂ ಸಿಡ್ನಿ ಟೆಸ್ಟ್ನಿಂದ ಹೊರಗುಳಿದಿದ್ದರು. ಇದು ನಿವೃತ್ತಿಯ ಮುನ್ಸೂಚನೆಯನ್ನು ನೀಡಿತ್ತು.
ನಾಯಕನಾಗಿ ರೋಹಿತ್ ಶರ್ಮಾ ದಾಖಲೆ
ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ರೋಹಿತ್ ಉತ್ತಮ ದಾಖಲೆ ಹೊಂದಿದ್ದರೂ ಏಳು-ಬೀಳು ಅನುಭವಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತವನ್ನು ಮುನ್ನಡೆಸಿದ್ದರೂ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಕಹಿ ಸೋಲು ಎದುರಿಸಿದರು. ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಸರಣಿಯನ್ನೂ ಕಳೆದುಕೊಂಡರು. ಹಿಟ್ಮ್ಯಾನ್ 24 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿದ್ದು, 12 ಗೆಲುವು, 9 ಸೋಲು ಕಂಡಿದ್ದಾರೆ. ಉಳಿದ 3 ಪಂದ್ಯಗಳು ಡ್ರಾನಲ್ಲಿ ಅಂತ್ಯಕಂಡಿವೆ.
ಇಂಗ್ಲೆಂಡ್ ಸರಣಿಗೂ ಮುನ್ನ ವಿದಾಯ
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಆಡುತ್ತಿರುವ ರೋಹಿತ್ ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಮಹತ್ವದ ಸರಣಿಗೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದಾಗಿಯೂ ಕೆಲವು ವರದಿಗಳು ತಂಡದಲ್ಲಿ ಸ್ಥಾನ ಪಡೆದರೂ ನಾಯಕತ್ವದಿಂದ ವಜಾಗೊಳ್ಳಲಿದ್ದಾರೆ ಎಂದು ಬಿತ್ತರಿಸಿದ್ದವು. ಇನ್ನೂ ಕೆಲವು ವರದಿಗಳು ರೋಹಿತ್ ಆಯ್ಕೆಯೇ ಕಷ್ಟ ಎಂದು ಹೇಳಿದ್ದವು. ಆದರೀಗ ಅವರೇ ಸ್ವತಃ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.
ಇಂಗ್ಲೆಂಡ್ ಸರಣಿಗೆ ನೂತನ ನಾಯಕ ಯಾರಾಗಬಹುದು?
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐದು ಟೆಸ್ಟ್‌ಗಳ ಸರಣಿಗೆ ಭಾರತಕ್ಕೆ ಹೊಸ ಟೆಸ್ಟ್ ನಾಯಕನ ಆಯ್ಕೆಯಿದ್ದು, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಸಂಭಾವ್ಯ ನಾಯಕರಾಗಿದ್ದಾರೆ. ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಪ್ರಸ್ತುತ ರಾಹುಲ್ ಮತ್ತು ಬುಮ್ರಾ ಹೊರತುಪಡಿಸಿ ಉಳಿದ ಮೂವರು ಐಪಿಎಲ್ನಲ್ಲಿ ವಿವಿಧ ತಂಡಗಳಿಗೆ ನಾಯಕತ್ವ ವಹಿಸಿದ್ದಾರೆ. ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ನಂತರ 2022 ರಲ್ಲಿ ಭಾರತದ ಟೆಸ್ಟ್ ನಾಯಕನಾಗಿ ರೋಹಿತ್ ಅಧಿಕಾರ ವಹಿಸಿಕೊಂಡಿದ್ದರು.