ರೋಹಿತ್​ ಶರ್ಮಾ ಟೆಸ್ಟ್ ಶತಕದ ಸಂಖ್ಯೆ 11, ಇಂಗ್ಲೆಂಡ್ ವಿರುದ್ಧವೇ ಮೂರು; ಭರ್ಜರಿ ಸೆಂಚುರಿ ಸಿಡಿಸಿದ ಹಿಟ್​ಮ್ಯಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾ ಟೆಸ್ಟ್ ಶತಕದ ಸಂಖ್ಯೆ 11, ಇಂಗ್ಲೆಂಡ್ ವಿರುದ್ಧವೇ ಮೂರು; ಭರ್ಜರಿ ಸೆಂಚುರಿ ಸಿಡಿಸಿದ ಹಿಟ್​ಮ್ಯಾನ್

ರೋಹಿತ್​ ಶರ್ಮಾ ಟೆಸ್ಟ್ ಶತಕದ ಸಂಖ್ಯೆ 11, ಇಂಗ್ಲೆಂಡ್ ವಿರುದ್ಧವೇ ಮೂರು; ಭರ್ಜರಿ ಸೆಂಚುರಿ ಸಿಡಿಸಿದ ಹಿಟ್​ಮ್ಯಾನ್

Rohit Sharma : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಶತಕ ಪೂರೈಸಿದ್ದಾರೆ.

ರೋಹಿತ್​ ಶರ್ಮಾ ಟೆಸ್ಟ್ ಶತಕದ ಸಂಖ್ಯೆ 11; ಸಂಕಷ್ಟದಲ್ಲೂ ಭರ್ಜರಿ ಸೆಂಚುರಿ ಸಿಡಿಸಿದ ಹಿಟ್​ಮ್ಯಾನ್
ರೋಹಿತ್​ ಶರ್ಮಾ ಟೆಸ್ಟ್ ಶತಕದ ಸಂಖ್ಯೆ 11; ಸಂಕಷ್ಟದಲ್ಲೂ ಭರ್ಜರಿ ಸೆಂಚುರಿ ಸಿಡಿಸಿದ ಹಿಟ್​ಮ್ಯಾನ್ (AP)

ಮೊದಲ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್​​ಗಳಲ್ಲಿ 50ರ ಗಡಿ ದಾಟಲು ವಿಫಲವಾಗಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma), ಮೂರನೇ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ತನ್ನ 57ನೇ ಟೆಸ್ಟ್​ ಕ್ರಿಕೆಟ್​ ಪಂದ್ಯದಲ್ಲಿ 11ನೇ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ನಾಯಕ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಕಷ್ಟದಲ್ಲಿ ಭರ್ಜರಿ ಹಿಟ್​ಮ್ಯಾನ್ ಶತಕ

ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 33ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರೋಹಿತ್​, ರವೀಂದ್ರ ಜಡೇಜಾ ಜೊತೆಗೂಡಿ ಭರ್ಜರಿ ಜೊತೆಯಾಟವಾಡಿದರು. ಅಲ್ಲದೆ, 52.3ನೇ ಓವರ್​​ನಲ್ಲಿ 157 ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್, ತಮ್ಮ ಶತಕವನ್ನು ಪೂರೈಸಿದರು. ಇದು ಅವರ 11ನೇ ಟೆಸ್ಟ್​ ಶತಕವಾಗಿದೆ.

11ನೇ ಟೆಸ್ಟ್ ಶತಕ, ಇಂಗ್ಲೆಂಡ್ ವಿರುದ್ಧವೇ ಮೂರು

57 ಪಂದ್ಯಗಳ 97 ಇನ್ನಿಂಗ್ಸ್​​ಗಳಲ್ಲಿ ಹಿಟ್​ಮ್ಯಾನ್ 11ನೇ ಬಾರಿಗೆ ನೂರರ ಗಡಿ ದಾಟಿದ್ದಾರೆ. ಅಲ್ಲದೆ, ಇಂಗ್ಲೆಂಡ್​ ವಿರುದ್ಧವೇ ಮೂರು ಸಲ ಮೂರಂಕಿ ( ಇಂದಿನ ಶತಕವೂ ಸೇರಿ) ಸಿಡಿಸಿರುವುದು ವಿಶೇಷ. 2021ರಲ್ಲಿ ಭಾರತದ ಪ್ರವಾಸದಲ್ಲೂ ಇಂಗ್ಲೆಂಡ್​ ವಿರುದ್ಧದ ಚೆನ್ನೈನಲ್ಲಿ 161 ರನ್ ಗಳಿಸಿದ್ದರು. ಅದೇ ವರ್ಷ ದಿ ಓವಲ್​​ ಮೈದಾನದಲ್ಲಿ ಆಂಗ್ಲರ ಎದುರು 127 ರನ್ ಬಾರಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ

ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ಫಾರ್ಮೆಟ್​​ನಲ್ಲೂ ರೋಹಿತ್​ ಒಟ್ಟಾರೆ 47ನೇ ಶತಕ ಸಿಡಿಸಿದ್ದಾರೆ. ಟೆಸ್ಟ್​ನಲ್ಲಿ 11, ಏಕದಿನದಲ್ಲಿ 31, ಟಿ20 ಕ್ರಿಕೆಟ್​ನಲ್ಲಿ 5 ಶತಕಗಳು ದಾಖಲಾಗಿವೆ. ಆ ಮೂಲಕ 47 ಶತಕ ಸಿಡಿಸಿದ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಕ್ರಿಯ ಆಟಗಾರರ ಪೈಕಿ ಅತ್ಯಧಿಕ ಅಂತಾರಾಷ್ಟ್ರೀಯ ಸೆಂಚುರಿ ಬಾರಿಸಿದವರಲ್ಲಿ ವಿರಾಟ್ ಕೊಹ್ಲಿ (80), ಡೇವಿಡ್ ವಾರ್ನರ್ (49) ನಂತರ ರೋಹಿತ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೋ ರೂಟ್​ 46 ಶತಕ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಜಡೇಜಾ-ರೋಹಿತ್ ಜುಗಲ್ಬಂದಿ

ರಾಜ್​ಕೋಟ್​ನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ (ಮೊದಲು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಎಂಬ ಹೆಸರಿತ್ತು) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 33 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್ 10, ಶುಭ್ಮನ್ ಗಿಲ್ 0, ರಜತ್ ಪಾಟೀದಾರ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ವೇಳೆ ಜೊತೆಗೂಡಿದ ರೋಹಿತ್​ - ಜಡೇಜಾ ಭರ್ಜರಿ ಜೊತೆಯಾಟವಾಡಿದರು. (ಈ ವರದಿ ಪ್ರಕಟಿಸುವ ವೇಳೆ 200ಕ್ಕೂ ಅಧಿಕ ರನ್​ಗಳ ಜೊತೆಯಾಟವಾಡಿದ್ದರು)

ಭಾರತ ಆಡುವ 11ರ ಬಳಗ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Whats_app_banner