ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಕುರಿತ ಪ್ರಶ್ನೆ; ನಕ್ಕು ಸುಮ್ಮನಾದ ರೋಹಿತ್ ಶರ್ಮಾ, ಅದೆಲ್ಲಾ ಮ್ಯಾಟರೇ ಅಲ್ಲ ಎಂದ ಅಗರ್ಕರ್
Ajit Agarkar on Virat Kohli : ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಚರ್ಚೆಯ ಕುರಿತು ನಾಯಕ ರೋಹಿತ್ ಶರ್ಮಾ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಕ್ರಿಕೆಟ್ ವಲಯದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಅಂದರೆ ವಿರಾಟ್ ಕೊಹ್ಲಿ (Virat Kohli) ಸ್ಟ್ರೈಕ್ರೇಟ್. ಮಾಜಿ ಕ್ರಿಕೆಟರ್ಸ್ ಕೊಹ್ಲಿ ಅವರನ್ನು ಟೀಕಿಸಿದ್ದರು. ಎಸ್ಆರ್ಹೆಚ್ ವಿರುದ್ಧ 43 ಎಸೆತಗಳಲ್ಲಿ 52 ರನ್ ಗಳಿಸಿದ್ದ ನಂತರ ವಿರಾಟ್ ಈ ಟೀಕೆ ಎದುರಿಸಬೇಕಾಯಿತು. ಇದೀಗ ಇದಕ್ಕೆ ಸಂಬಂಧಿಸಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ (Ajit Agarkar) ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಟಿ20 ವಿಶ್ವಕಪ್ಗೆ (T20 World Cup 2024) ತಂಡ ಪ್ರಕಟಗೊಂಡ 2 ದಿನಗಳ ನಂತರ ಪತ್ರಿಕಾಗೋಷ್ಠಿ ನಡೆಸಿದ ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್, ಕೊಹ್ಲಿ ಸ್ಟ್ರೈಕ್ರೇಟ್ ಚರ್ಚೆಗಳ ಕುರಿತು ತುಟಿ ಬಿಚ್ಚಿದ್ದಾರೆ. ಜೂನ್ 1ರಿಂದ ಜೂನ್ 29ರ ತನಕ ನಡೆಯುವ ಮೆಗಾ ಈವೆಂಟ್ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (ಯುಎಸ್‌ಎ) ನಲ್ಲಿ ನಡೆಯಲಿದೆ. ಟಿ20 ವಿಶ್ವಕಪ್‌ನ 9ನೇ ಆವೃತ್ತಿಗೆ ನೇತೃತ್ವದ 15 ಜನರ ತಂಡವನ್ನು ಬಹಿರಂಗಪಡಿಸಲಾಗಿದೆ.
ಸ್ಟ್ರೈಕ್ರೇಟ್ ಚರ್ಚೆಯ ವಿಷಯವೇ ಅಲ್ಲ ಎಂದ ಅಜಿತ್ ಅಗರ್ಕರ್
ಮಾಧ್ಯಮ ಸಂವಾದದ ವೇಳೆ, ಪತ್ರಕರ್ತರೊಬ್ಬರು ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ನಾಯಕ ಮತ್ತು ಆಯ್ಕೆದಾರರನ್ನು ಕೇಳಿದ್ದಾರೆ. ಈ ಪ್ರಶ್ನೆ ಕೇಳಿದ ಬೆನ್ನಲ್ಲೇ ಭಾರತೀಯ ನಾಯಕ ನಕ್ಕು ಸುಮ್ಮನಾಗಿದ್ದಾರೆ. ಅವರ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 2021ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಅವರನ್ನು ಪ್ಲೇಯಿಂಗ್ XI ನಿಂದ ಕೈಬಿಡುವಂತೆ ವರದಿಗಾರರೊಬ್ಬರು ಕೇಳಿದಾಗ ಕೊಹ್ಲಿ ಇದೇ ರೀತಿಯ ಪ್ರತಿಕ್ರಿಯಿಸಿದ್ದನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
ತದನಂತರ ಪ್ರತಿಕ್ರಿಯಿಸಿದ ಅಜಿತ್ ಅಗರ್ಕರ್, ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಯಾವುದೇ ಕಳವಳ ಇಲ್ಲ. ಆಯ್ಕೆದಾರರಿಗೆ ಇದು ಚರ್ಚೆಯ ವಿಷಯವೇ ಅಲ್ಲ ಎಂದು ಹೇಳಿದ್ದಾರೆ. ಐಪಿಎಲ್-ಅಂತಾರಾಷ್ಟ್ರೀಯ ಕ್ರಿಕೆಟ್ ನಡುವೆ ವ್ಯತ್ಯಾಸವಿದೆ ಎಂದು ಸೂಚಿಸಿರುವ ಅವರು, ತಂಡಕ್ಕೆ ಕೊಹ್ಲಿಯ ಅನುಭವದ ಅಗತ್ಯವಿದೆ. ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ನಾವು ಚರ್ಚಿಸುವ ಅವಶ್ಯಕತೆಯೇ ಇಲ್ಲ. ಐಪಿಎಲ್‌ನಲ್ಲಿ ಫಾರ್ಮ್ನಲ್ಲಿ ಇರಲಿ, ಇಲ್ಲದಿರಲಿ ಅದು ಸಮಸ್ಯೆಯೇ ಅಲ್ಲ ಎಂದಿದ್ದಾರೆ.
ಐಪಿಎಲ್‌ಗೂ ವಿಶ್ವಕಪ್ಗೂ ಸಂಬಂಧ ಇಲ್ಲ. ವಿಶ್ವಕಪ್ ಐಪಿಎಲ್ಗಿಂತ ವಿಭಿನ್ನವಾಗಿದೆ. ಆದರೆ ನಮಗೆ ಅನುಭವ ಮುಖ್ಯ ಎಂದು ಹೇಳಿದ್ದಾರೆ. ಇದೇ ವೇಳೆ ರಿಂಕು ಸಿಂಗ್ ಮತ್ತು ಕೆಎಲ್ ರಾಹುಲ್ರನ್ನು ಕೈಬಿಡಲು ಕಾರಣ ತಿಳಿಸಿದ್ದಾರೆ. ರಿಂಕು ಕೈಬಿಟ್ಟಿದ್ದು ತುಂಬಾ ಕಠಿಣವಾದ ನಿರ್ಧಾರ ಎಂದ ಅಗರ್ಕರ್, ನಮಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಬೇಕಿದ್ದ ಕಾರಣ ರಾಹುಲ್ರನ್ನು ಕೈಬಿಡಲಾಯಿತು ಎಂದು ತಿಳಿಸಿದ್ದಾರೆ.
ಓಪನರ್ಸ್ ಬೇಕಿರಲಿಲ್ಲ ಎಂದ ಅಜಿತ್ ಅಗರ್ಕರ್
ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಓಪನಿಂಗ್ ಮಾಡುತ್ತಿದ್ದಾರೆ. ಆದರೆ ನಾವು ಹುಡುಕಿದ್ದು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು. ಈ ಕಾರಣಕ್ಕೆ ರಾಹುಲ್ರನ್ನು ಆಯ್ಕೆ ಮಾಡಲಿಲ್ಲ. ಹಾಗಾಗಿ, ಸ್ಯಾಮ್ಸನ್ ಮತ್ತು ಪಂತ್ ಅದಕ್ಕೆ ಸೂಕ್ತ ಎಂದು ನಾವು ಭಾವಿಸಿ ಸ್ಥಾನ ನೀಡಿದೆವು. ಸ್ಯಾಮ್ಸನ್ ಲೈನ್‌ಅಪ್‌ನಲ್ಲಿ ಎಲ್ಲಿ ಬೇಕಾದರೂ ಬ್ಯಾಟ್ ಮಾಡುತ್ತಾರೆ. ನಮಗೆ ಬೇಕಿರುವುದು ಸ್ಲಾಟ್‌ಗಳ ಬಗ್ಗೆಯೇ ಹೊರತು, ಯಾರು ಉತ್ತಮರು ಎಂಬುದರ ಬಗ್ಗೆ ಅಲ್ಲ ಎಂದು ಅಗರ್ಕರ್ ತಿಳಿಸಿದ್ದಾರೆ.