ವಿರಾಟ್ ಕೊಹ್ಲಿ ದಾಖಲೆಯನ್ನು ಚಿಂದಿ ಉಡಾಯಿಸಿದ ರೋಹಿತ್; ಹಿಟ್ಮ್ಯಾನ್ ಇನ್ಮುಂದೆ ನಂ 1 ಕ್ಯಾಪ್ಟನ್
Rohit Sharma breaks Virat Kohlis Record: ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದು ಅತಿ ಹೆಚ್ಚು ರನ್ ಸಿಡಿಸಿದ ಭಾರತದ ಮೊದಲ ವಿಶ್ವದ ನಾಲ್ಕನೇ ನಾಯಕ ಎಂಬ ದಾಖಲೆ ಬರೆದಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ರೋಹಿತ್ ಶರ್ಮಾ (Rohit Sharma) ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ದಾಖಲೆಯನ್ನು ಚಿಂದಿ ಉಡಾಯಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಅತ್ಯಧಿಕ ರನ್ ಕಲೆ ಹಾಕಿದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು. ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು.
ಬೆಂಗಳೂರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ರೋಹಿತ್, ವಿರಾಟ್ ಅವರನ್ನು ಹಿಂದಿಕ್ಕಿದರು. ಬಲಗೈ ಆಟಗಾರ ರೋಹಿತ್, 44 ರನ್ ಗಳಿಸಿದ ವೇಳೆ ಈ ದಾಖಲೆ ಮುರಿದರು. ಏಕಾಂಗಿ ಹೋರಾಟ ನಡೆಸಿದ ರೋಹಿತ್ ವಿಶ್ವ ದಾಖಲೆಯ ಶತಕ ಸಿಡಿಸಿ ಕೊಹ್ಲಿ ಸೇರಿದಂತೆ ಹಲವರ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.
69 ಎಸೆತಗಳಲ್ಲಿ ರೋಹಿತ್ 121
ದಾಖಲೆಯ ಐದನೇ ಟಿ20 ಶತಕ ಸಿಡಿಸಿದ ರೋಹಿತ್, ಕೇವಲ 69 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ ಅಜೇಯ 121 ರನ್ ಬಾರಿಸಿದರು. ಈ ಮೂಲಕ ಅನೇಕ ದಾಖಲೆ ಸೃಷ್ಟಿಸಿದ ಹಿಟ್ಮ್ಯಾನ್ ಕೊಹ್ಲಿ ದಾಖಲೆಯನ್ನೂ ಬ್ರೇಕ್ ಮಾಡಿದರು. ನಾಯಕನಾಗಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.
ನಾಯಕನಾಗಿ ವಿರಾಟ್ 50 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1570 ರನ್ ಕಲೆ ಹಾಕಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ 44 ರನ್ ಗಳಿಸುತ್ತಿದ್ದಂತೆ ಈ ದಾಖಲೆಯನ್ನು ಮುರಿದರು. ರೋಹಿತ್ ಸದ್ಯ ಕ್ಯಾಪ್ಟನ್ ಆಗಿ 1,647 ರನ್ ಕಲೆ ಹಾಕಿದ್ದಾರೆ. 1,112 ರನ್ ಗಳಿಸಿರುವ ಎಂಎಸ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ ಎಂಬುದು ವಿಶೇಷ.
ಕೊಹ್ಲಿ 50 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 47.57ರ ಬ್ಯಾಟಿಂಗ್ ಸರಾಸರಿಯಲ್ಲಿ 1,570 ರನ್ ಗಳಿಸಿದ್ದರು. ಈ ಆಟದಲ್ಲಿ 13 ಅರ್ಧಶತಕಗಳು ಸಹ ಸೇರಿವೆ. ಸದ್ಯ ಈ ದಾಖಲೆ ಮುರಿದಿರುವ ರೋಹಿತ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ್ಯರೋನ್ ಫಿಂಚ್, ಬಾಬರ್ ಅಜಮ್, ಕೇನ್ ವಿಲಿಯಮ್ಸನ್ ಅವರ ನಂತರ ಸ್ಥಾನ ಪಡೆದಿದ್ದಾರೆ.
ಟಿ20ಯಲ್ಲಿ ನಾಯಕನಾಗಿ ಅತಿ ಹೆಚ್ಚು ರನ್
ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಆ್ಯರೋನ್ ಫಿಂಚ್ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ 2236 ರನ್‌ಗಳೊಂದಿಗೆ ತಮ್ಮ ವೃತ್ತಿಜೀವನ ಮುಗಿಸಿದ್ದಾರೆ. ಅವರ ನಂತರ ಬಾಬರ್ ಟಿ20ಐ ನಾಯಕರಾಗಿ 2195 ರನ್ ಗಳಿಸಿದ್ದಾರೆ. ಕೇನ್ ವಿಲಿಯಮ್ಸನ್ 3ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ನಾಯಕ 71 ಪಂದ್ಯಗಳಿಂದ 2125 ರನ್ ಗಳಿಸಿದ್ದಾರೆ.
ಟಿ20ಐ ಕ್ರಿಕೆಟ್ ಆಡುವುದನ್ನು ಮುಂದುವರೆಸಿರುವ ವಿಲಿಯಮ್ಸನ್, ಶೀಘ್ರದಲ್ಲೇ ಫಿಂಚ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ವಿಲಿಯಮ್ಸನ್ ಬಳಿಕ ರೋಹಿತ್ ಮತ್ತು ವಿರಾಟ್ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ 6ನೇ ಸ್ಥಾನದಲ್ಲಿದ್ದು, 1469 ರನ್ ಗಳಿಸಿದ್ದಾರೆ. ಮಾರ್ಗನ್ 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.
2017ರಲ್ಲಿ ನಾಯಕನಾಗಿದ್ದ ಕೊಹ್ಲಿ
2017ರ ಜನವರಿಯಲ್ಲಿ ಎಂಎಸ್ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ಕೊಹ್ಲಿ ವೈಟ್-ಬಾಲ್ ಕ್ರಿಕೆಟ್ಗೆ ನಾಯಕರಾದರು. ಐದು ವರ್ಷಗಳ ಕಾಲ ಧೋನಿಗೆ ಉಪನಾಯಕರಾಗಿದ್ದರು. ಕೊಹ್ಲಿ ನೇತೃತ್ವದಲ್ಲಿ ಭಾರತ ಒಂದು ಟಿ20 ವಿಶ್ವಕಪ್ ಆಡಿದೆ. ಮಾಜಿ ನಾಯಕ 2021ರ ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಟಿ20 ಕ್ರಿಕೆಟ್ಗೆ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದರು.
ತದನಂತರ ರೋಹಿತ್ ಶರ್ಮಾ ಹೆಗಲಿಗೆ ಈ ಜವಾಬ್ದಾರಿ ಸಿಕ್ಕಿತು. ಇದೀಗ ರೋಹಿತ್ ನಾಯಕನಾದ 54ನೇ ಪಂದ್ಯದಲ್ಲಿ ಮಾಜಿ ನಾಯಕನನ್ನು ಹಿಂದಕ್ಕೆ ತಳ್ಳಿದರು. ರೋಹಿತ್ 2017ರಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಾಯಕತ್ವದ ಗುಂಪಿಗೆ ಸೇರಿದ್ದರು. ಆ ವರ್ಷದ ನಂತರ ನಾಯಕತ್ವಕ್ಕೆ ಪದಾರ್ಪಣೆ ಮಾಡಿದರು. ಹಿಟ್ಮ್ಯಾನ್ ನಾಯಕತ್ವದಲ್ಲಿ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಭಾರತ ತಂಡ ಪ್ರವೇಶಿಸಿತ್ತು. ರೋಹಿತ್ ಈಗಲೂ ಟೀಮ್ ಇಂಡಿಯಾದ ಆಲ್ ಫಾರ್ಮ್ಯಾಟ್ ನಾಯಕ.