ಕೆಲವೊಬ್ಬರು ಮಾತ್ರವಲ್ಲ, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು; ರೋಹಿತ್ ಶರ್ಮಾ ಖಡಕ್‌ ಹೇಳಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಲವೊಬ್ಬರು ಮಾತ್ರವಲ್ಲ, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು; ರೋಹಿತ್ ಶರ್ಮಾ ಖಡಕ್‌ ಹೇಳಿಕೆ

ಕೆಲವೊಬ್ಬರು ಮಾತ್ರವಲ್ಲ, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕು; ರೋಹಿತ್ ಶರ್ಮಾ ಖಡಕ್‌ ಹೇಳಿಕೆ

ಪ್ರತಿಯೊಬ್ಬ ಆಟಗಾರರು ದೇಶಿಯ ಕ್ರಿಕೆಟ್‌ ಆಡುವುದು ಮುಖ್ಯ. ಇದು ಕೇವಲ ಕೆಲವು ಕ್ರಿಕೆಟಿಗರಿಗೆ ಮಾತ್ರವಲ್ಲ. ದೇಶೀಯ ಕ್ರಿಕೆಟ್ ಆಡಲು ಸಾಧ್ಯವಿರುವಾಗ ಆಡುವುದು ಪ್ರತಿಯೊಬ್ಬ ಆಟಗಾರನ ಜವಾಬ್ದಾರಿ ಎಂದು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ಆಡಬೇಕು ಎಂದ ರೋಹಿತ್ ಶರ್ಮಾ
ಪ್ರತಿಯೊಬ್ಬ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ಆಡಬೇಕು ಎಂದ ರೋಹಿತ್ ಶರ್ಮಾ (AFP)

ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ದೇಶೀಯ ಕ್ರಿಕೆಟ್‌ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಅದರಲ್ಲೂ ಇಶಾನ್‌ ಕಿಶನ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರನ್ನು ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಹೊರಗಿಟ್ಟ ಬಳಿಕ ಇದು ಮತ್ತಷ್ಟು ಹೆಚ್ಚಾಗಿದೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದ ಬಳಿಕ ಮಾತನಾಡಿದ್ದ‌ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ, ಟೆಸ್ಟ್ ಕ್ರಿಕೆಟ್‌ ಆಡುವ ಹಸಿವು ಹೊಂದಿರುವ ಆಟಗಾರರನ್ನು ಮಾತ್ರ ಭಾರತ ಬೆಂಬಲಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಆ ಮೂಲಕ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲು ಹಿಂದೇಟು ಹಾಕಿದ್ದ ಇಶಾನ್ ಮತ್ತು ಶ್ರೇಯಸ್ ಅವರ ನಿಲುವನ್ನು ಹಿಟ್‌ಮ್ಯಾನ್‌ ವಿರೋಧಿಸಿದ್ದರು. ಇದೀಗ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ಗೂ ಮುಂಚಿತವಾಗಿ ರೋಹಿತ್‌ ಮತ್ತೆ ದೇಶೀಯ ಕ್ರಿಕೆಟ್‌ ಕುರಿತು ಧ್ವನಿ ಎತ್ತಿದ್ದಾರೆ.

ಈ ಕುರಿತು ಬಹಳ ಸಮಯದಿಂದ ಚರ್ಚೆ ನಡೆಯುತ್ತಿದೆ. ಆಟಗಾರರು ಆಟಕ್ಕೆ ಲಭ್ಯವಿದ್ದಾಗ, ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಲಭ್ಯವಿರಬೇಕು. ಅವರು ವಿಶ್ರಾಂತಿ ಪಡೆಯಲು ಬಯಸಿದರೆ ಅಥವಾ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ವೈದ್ಯಕೀಯ ತಂಡವು ಪ್ರಮಾಣಪತ್ರ ನೀಡದ ಹೊರತು, ದೇಶೀಯ ಕ್ರಿಕೆಟ್‌ನಿಂದ ತಪ್ಪಿಸಬಾರದು. ಆಟವಾಡಲು ಲಭ್ಯವಿದ್ದರೆ, ಫಿಟ್ ಆಗಿದ್ದರೆ, ನೀವು ಚೆನ್ನಾಗಿದ್ದರೆ ಹೋಗಿ ದೇಶಿಯ ಕ್ರಿಕೆಟ್‌ ಆಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ಕೇವಲ ಕೆಲವು ಕ್ರಿಕೆಟಿಗರಿಗೆ ಮಾತ್ರವಲ್ಲ. ದೇಶೀಯ ಕ್ರಿಕೆಟ್ ಆಡಲು ಸಾಧ್ಯವಿರುವಾಗ ಆಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ," ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ.

"ಈ ವಾರ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯವನ್ನು ನಾವು ನೋಡಿದ್ದೇವೆ. ನಾನು ಮುಂಬೈ ಮತ್ತು ತಮಿಳುನಾಡು ಪಂದ್ಯ ನೋಡಿದೆ. ಖಂಡಿತವಾಗಿಯೂ ಪಂದ್ಯ ಕುತೂಹಲಕಾರಿಯಾಗಿ ನಡೆಯುತ್ತಿದೆ. ನಾವು ದೇಶೀಯ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡುವುದು ಮುಖ್ಯ ಎಂಬುದು ನನ್ನ ಅಭಿಪ್ರಾಯ. ಇದು ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹಿಟ್‌ಮ್ಯಾನ್‌ ಹೇಳಿದ್ದಾರೆ.

ಇದನ್ನೂ ಓದಿ | ಮಳೆಯೂ, ಚಳಿಯೂ; ಭಾರತ-ಇಂಗ್ಲೆಂಡ್ 5ನೇ ಟೆಸ್ಟ್‌ಗೆ ಹಲವು ಅಡೆತಡೆ; ಧರ್ಮಶಾಲಾ ಟೆಸ್ಟ್‌ ಹವಾಮಾನ ಮುನ್ಸೂಚನೆ ಹೀಗಿದೆ

ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಧರ್ಮಶಾಲಾದಲ್ಲಿ ಮಾರ್ಚ್‌ 7ರ ಗುರುವಾರದಿಂದ ನಡೆಯುತ್ತಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಪಂದ್ಯ ಗೆಲುವಿನೊಂದಿಗೆ ಸರಣಿಯನ್ನು 4-0 ಅಂತರದಿಂದ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.

ಐದನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ಐದನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ

ಜಾಕ್ ಕ್ರಾಲೆ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಟಾಮ್ ಹಾರ್ಟ್ಲೆ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್.‌

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ; ರಾಬಿನ್ಸನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner