ನಿವೃತ್ತಿ ಸದ್ಯಕ್ಕಿಲ್ಲ, ನಾನು ಪ್ರಬುದ್ಧ ಹಾಗೂ ಇಬ್ಬರು ಮಕ್ಕಳ ತಂದೆ; ಯಾವಾಗ ಏನು ಮಾಡಬೇಕೆಂದು ಗೊತ್ತು ಎಂದ ರೋಹಿತ್ ಶರ್ಮಾ
ನಾನು ಫಾರ್ಮ್‌ನಲ್ಲಿ ಇಲ್ಲದ ಕಾರಣ ಸದ್ಯ ಆಟದಿಂದ ಹೊರಗಿದ್ದೇನೆ. ಫಾರ್ಮ್ ಸಮಸ್ಯೆ ಶೀಘ್ರದಲ್ಲೇ ಸರಿ ಹೋಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಇದು ನಿವೃತ್ತಿಯ ನಿರ್ಧಾರವಲ್ಲ ಎನ್ನುವ ಮೂಲಕ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನಿವೃತ್ತಿ ಕುರಿತ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೆ, ಸಿಡ್ನಿ ಟೆಸ್ಟ್ ಪಂದ್ಯ ಆಡದಿರುವುದಕ್ಕೆ ಸೂಕ್ತ ಕಾರಣ ಬಹಿರಂಗಪಡಿಸಿದ್ದಾರೆ. ಫಾರ್ಮ್‌ನಲ್ಲಿ ಇಲ್ಲದ ಕಾರಣದಿಂದಾಗಿ, ತಾನಾಗಿಯೇ ಆಡುವ ಬಳಗದಿಂದ ಹೊರಬಂದಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಸಿಡ್ನಿ ಟೆಸ್ಟ್ ಪಂದ್ಯದ 2ನೇ ದಿನದ ಊಟದ ವಿರಾಮದ ಸಮಯದಲ್ಲಿ ಮಾತನಾಡಿದ ಅವರು, ತಮ್ಮ ಟೆಸ್ಟ್ ಭವಿಷ್ಯದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದರು. ಹೊಸ ವರ್ಷದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ, ಡ್ರೆಸ್ಸಿಂಗ್ ಕೋಣೆಯಲ್ಲಿ ಏನೇನಾಯ್ತು ಎಂಬುದರ ಕುರಿತು ವಿವರವಾಗಿ ಮಾತನಾಡಿದರು. ಅಲ್ಲದೆ ತಮ್ಮ ಭವಿಷ್ಯದ ಯೋಜನೆಗಳ ಕುರಿತು ಹೇಳಿದರು.
ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯುವ ನಿರ್ಧಾರದ ಬಗ್ಗೆ ಮಾತನಾಡಿದ ರೋಹಿತ್, “ನಾನಾಗಿಯೇ ಪಂದ್ಯದಿಂದ ಹೊರಗುಳಿದೆ” ಎಂದರು. ಕೋಚ್ ಮತ್ತು ಆಯ್ಕೆದಾರರೊಂದಿಗೆ ನಾನು ನಡೆಸಿದ ಮಾತುಕತೆ ಸರಳವಾಗಿತ್ತು. ನಾನು ಫಾರ್ಮ್‌ನಲ್ಲಿ ಇಲ್ಲ. ಹೀಗಾಗಿ ನಿರ್ಣಾಯಕ ಪಂದ್ಯಕ್ಕೆ ನಮಗೆ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರನ ಅಗತ್ಯವಿದೆ. ಹೀಗಾಗಿ ನಾನು ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಸದ್ಯ ತಂಡಕ್ಕೆ ಏನು ಬೇಕು ಎಂಬುದೇ ನನ್ನ ಮತ್ತು ತಂಡದ ಆದ್ಯತೆಯಾಗಿದೆ ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ.
ನಾವು ಸಿಡ್ನಿಗೆ ಬಂದ ನಂತರ, ತಂಡದಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡೆ. ಬ್ಯಾಟ್‌ನಿಂದ ಹೆಚ್ಚು ರನ್ ಗಳಿಸದ ಕಾರಣ ನಾನು ಹಿಂದೆ ಸರಿಯುವುದು ಮುಖ್ಯ ಎಂದು ನನ್ನ ಮನಸ್ಸಿನಲ್ಲಿ ಓಡಾಡುತ್ತಿತ್ತು. ಪರ್ತ್ ಟೆಸ್ಟ್ ಪಂದ್ಯವನ್ನು ನಾವು ಹೇಗೆ ಗೆದ್ದೆವು ಎಂಬುದು ಸ್ಪಷ್ಟವಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ನಮಗೆ 200 ರನ್ ಆರಂಭಿಕ ಜೊತೆಯಾಟ ಸಿಕ್ಕಿತು. ಅದುವೇ ನಮಗೆ ಪಂದ್ಯ ಗೆಲ್ಲಲು ನೆರವಾಯ್ತು. ಕೆಎಲ್ ರಾಹುಲ್ ಮತ್ತು ಜೈಸ್ವಾಲ್ ನಿಜವಾಗಿಯೂ ಉತ್ತಮವಾಗಿ ಆಡಿದರು ಎಂದರು.
ಮುಂದಿನ 6 ತಿಂಗಳು ಅಥವಾ 4 ತಿಂಗಳುಗಳಲ್ಲಿ ಏನಾಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಯಾವಾಗಲೂ ವಾಸ್ತವದಲ್ಲಿ ಇರುತ್ತೇನೆ. ಈ ಕ್ಷಣಕ್ಕೆ ಏನು ಮಾಡಬೇಕೆಂದು ಯೋಚಿಸುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.
ನಿವೃತ್ತಿ ಸದ್ಯಕ್ಕಿಲ್ಲ
ನಿವೃತ್ತಿ ಕುರಿತ ವ್ಯಾಪಕ ವದಂತಿ ಕುರಿತು ಮಾತನಾಡಿದ ಅವರು, ಇದು ನಿವೃತ್ತಿಯ ನಿರ್ಧಾರವಲ್ಲ. ನಾನು ಫಾರ್ಮ್‌ನಲ್ಲಿ ಇಲ್ಲದ ಕಾರಣ ಸದ್ಯ ಆಟದಿಂದ ಹೊರಗಿದ್ದೇನೆ. ಜೀವನವು ಪ್ರತಿದಿನ ಬದಲಾಗುತ್ತದೆ. ಹೀಗಾಗಿ ಫಾರ್ಮ್ ಸಮಸ್ಯೆ ಶೀಘ್ರದಲ್ಲೇ ಸರಿ ಹೋಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಸದಾ ನಾನಾಗಿರುತ್ತೇನೆ. ವಾಸ್ತವಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಯಾವಾಗ ಏನು ಮಾಡಬೇಕೆಂದು ನನಗೆ ಗೊತ್ತು
ನಾನು ಸಂವೇದನಾಶೀಲ, ಪ್ರಬುದ್ಧ ಹಾಗೂ ಇಬ್ಬರು ಮಕ್ಕಳ ತಂದೆ. ಹೀಗಾಗಿ ಯಾವಾಗ ಏನು ಮಾಡಬೇಕೆಂದು ನನಗೆ ಸ್ಪಷ್ಟವಾಗಿ ಗೊತ್ತು. ಭಾರತ ತಂಡಕ್ಕೆ ಏನು ಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ನಾವು ಅದನ್ನು ತಂಡ ಎಂದು ಕರೆಯುತ್ತೇವೆ. ಹೀಗಾಗಿ ತಂಡಕ್ಕೆ ಏನು ಬೇಕು ಎಂಬುದರ ಕುರಿತು ಯಾವಾಗಲೂ ಯೋಚಿಸಿ ನಿರ್ಧಾರಕ್ಕೆ ಬರಬೇಕು. ಇದು ನನ್ನ ವೈಯಕ್ತಿಕ ಆಲೋಚನೆ. ನಾನು ನನ್ನ ಕ್ರಿಕೆಟ್ ಬದುಕಿನಲ್ಲಿ ಹೀಗೆಯೇ ಆಡುತ್ತಾ ಬಂದಿದ್ದೇನೆ. ಕ್ರಿಕೆಟ್ ಹೊರತಾಗಿಯೂ ನಾನು ಹೀಗೆಯೇ ಇದ್ದೇನೆ. ಒಬ್ಬ ವ್ಯಕ್ತಿಯಾಗಿ ನಾನು ತುಂಬಾ ಪಾರದರ್ಶಕ ಮನುಷ್ಯ ಎಂದು ರೋಹಿತ್ ಹೇಳಿದ್ದಾರೆ.
ಬುಮ್ರಾ ಒಬ್ಬ ಅದ್ಭುತ ಆಟಗಾರ. 2013ರಲ್ಲಿ ನಾನು ಅವರನ್ನು ಮೊದಲ ಬಾರಿಗೆ ನೋಡಿದಂದಿನಿಂದ ಅವರ ಅಂಕಿ-ಅಂಶಗಳ ಗ್ರಾಫ್ ನಿಜವಾಗಿಯೂ ಎತ್ತರಕ್ಕೆ ಹೋಗಿದೆ. ನಾಯಕತ್ವದಲ್ಲಿ ಪ್ರತಿದಿನವೂ ಒಳ್ಳೆಯ ದಿನ ಆಗಿರುವುದಿಲ್ಲ. ಆಲೋಚನೆಗಳು ಮತ್ತು ಮನಸ್ಥಿತಿ ಒಂದೇ ಆಗಿರಬಹುದು. ಆದರೆ ಕೆಲವೊಮ್ಮೆ ಫಲಿತಾಂಶ ನಮ್ಮ ಪರವಾಗಿ ಕಾರ್ಯನಿರ್ವಹಿಸುವುದಿಲ್ಲ. ಬಹಳಷ್ಟು ಜನರು ನಮ್ಮನ್ನು ನಿರ್ಣಯಿಸುತ್ತಾರೆ ಎಂದು ನಮಗೆ ತಿಳಿದಿದೆ. ಆದರೆ ನಾನು ನನ್ನನ್ನು ಎಂದಿಗೂ ಅನುಮಾನಿಸುವುದಿಲ್ಲ. ನಾವೆಲ್ಲರೂ ಗೆಲ್ಲುವ ಮನಸ್ಥಿತಿಯೊಂದಿಗೆ ಆಡುತ್ತೇವೆ ಎಂದರು.