ಟಿ20ಐ ಬೆನ್ನಲ್ಲೇ ಏಕದಿನ, ಟೆಸ್ಟ್ ಕ್ರಿಕೆಟ್ ನಿವೃತ್ತಿ ಕುರಿತು ತುಟಿ ಬಿಚ್ಚಿದ ರೋಹಿತ್ ಶರ್ಮಾ
Rohit Sharma: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟಿ20ಐ ಬೆನ್ನಲ್ಲೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಕುರಿತು ತುಟಿ ಬಿಚ್ಚಿದ್ದಾರೆ.

11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿದ ಭಾರತ ತಂಡ, 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ ಆಯಿತು. ಕಪಿಲ್ ದೇವ್ (Kapil Dev) ಮತ್ತು ಎಂಎಸ್ ಧೋನಿ (MS Dhoni) ನಂತರ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಭಾರತದ ಮೂರನೇ ನಾಯಕರಾದ ರೋಹಿತ್, ಫೈನಲ್ ಪಂದ್ಯದ ಬಳಿಕ ಟಿ20ಐ ವೃತ್ತಿಜೀವನ ಕೊನೆಗೊಳಿಸಿದರು. ಏಕದಿನ, ಟೆಸ್ಟ್ ಭವಿಷ್ಯದ ಕುರಿತು ಪ್ರಶ್ನೆಗಳು ಎದ್ದಿವೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಏಕದಿನ, ಟೆಸ್ಟ್ ವೃತ್ತಿಜೀವನ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಊಹಾಪೋಹಗಳು ಹರಡಿವೆ. ರೋಹಿತ್ ತನ್ನ ಭವಿಷ್ಯದ ಬಗ್ಗೆ ದೊಡ್ಡ ಸುಳಿವು ನೀಡಿದ್ದಾರೆ. ಟೆಕ್ಸಾಸ್ನ ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಟ್ಮ್ಯಾನ್ರನ್ನು 2027ರ ಏಕದಿನ ವಿಶ್ವಕಪ್ ಆಡುತ್ತೀರಾ ಎಂದು ಕೇಳಲಾಯಿತು. ಸ್ವಲ್ಪ ಸಮಯದವರೆಗೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವ ಇಂಗಿತವನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ವ್ಯಕ್ತಪಡಿಸಿದ್ದಾರೆ.
ಬಾರ್ಬಡೋಸ್‌ನಲ್ಲಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡ ಟಿ20ಐ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ನಂತರ ರೋಹಿತ್ ಜೊತೆಗೆ ಹಿರಿಯ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಕೂಡ ಟಿ20ಐ ಕ್ರಿಕೆಟ್ಗೆ ನಿವೃತ್ತ ಘೋಷಿಸಿದರು. ರೋಹಿತ್ 159 ಪಂದ್ಯಗಳಲ್ಲಿ 5 ಶತಕ, 32 ಅರ್ಧಶತಕಗಳೊಂದಿಗೆ 4,231 ರನ್ ಸಿಡಿಸಿದ್ದಾರೆ. ಸ್ವಲ್ಪ ದಿನಗಳ ಕಾಲ ಏಕದಿನ, ಟೆಸ್ಟ್ನಲ್ಲಿ ಆಟವನ್ನು ಮುಂದುವರಿಸಬೇಕು ಎಂದು ಹೇಳಿರುವ ರೋಹಿತ್, ಎರಡು ಸ್ವರೂಪಗಳಲ್ಲಿ ಸದ್ಯದಲ್ಲೇ ನಿವೃತ್ತಿಯಾಗುತ್ತಿಲ್ಲ ಎಂಬ ಸುಳಿವು ನೀಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಫೈನಲ್ ನಂತರ ರೋಹಿತ್ ಹೇಳಿದ್ದೇನು?
ಇದು ನನ್ನ ಕೊನೆಯ (ಟಿ20ಐ) ಪಂದ್ಯ ಆಗಿದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯ ಇಲ್ಲ. ನಾನು ಈ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ಟಿ20ಐ ಕ್ರಿಕೆಟ್ ಮೂಲಕ ನಾನು ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದೆ. ನಾನು ಕಪ್ ಗೆಲ್ಲಲು ಬಯಸಿದ್ದೆ. ಅದರಂತೆ ಟ್ರೋಫಿ ಗೆದ್ದಿದ್ದೇನೆ. ಇದನ್ನು ಪದಗಳಲ್ಲಿ ಹೇಳಲು ತುಂಬಾ ಕಷ್ಟ. ಇದು ನನಗೆ ತುಂಬಾ ಭಾವನಾತ್ಮಕ ಕ್ಷಣ. ನನ್ನ ಜೀವನದಲ್ಲಿ ಈ ಟ್ರೋಫಿಗಾಗಿ ನಾನು ತುಂಬಾ ಹತಾಶನಾಗಿದ್ದೆ. ನಾವು ಅಂತಿಮವಾಗಿ ಗೆರೆಯನ್ನು ದಾಟಿದ್ದಕ್ಕೆ ಸಂತೋಷವಾಗಿದೆ ಎಂದು ರೋಹಿತ್ ಫೈನಲ್ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.
37 ವರ್ಷದ ರೋಹಿತ್ ಪ್ರಸ್ತುತ ವಿಶ್ರಾಂತಿಯಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾಕ್ಕೆ ಭಾರತದ ಮುಂಬರುವ ಸೀಮಿತ ಓವರ್‌ಗಳ ಪ್ರವಾಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ವರದಿಯಲ್ಲಿ ರೋಹಿತ್ ಆಡಬೇಕೆಂದು ನೂತನ ಕೋಚ್ ಗಂಭೀರ್ ಒತ್ತಾಯಿಸಿದ್ದಾರೆ. ಭವಿಷ್ಯದ ಕುರಿತು ಯೋಚಿಸುವುದಿಲ್ಲ. ಆದರೆ ಸ್ವಲ್ಪ ಸಮಯದವರೆಗೂ ತಂಡದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನೀವು ಕೂಡ ನೋಡಲಿದ್ದೀರಿ ಎಂದು ರೋಹಿತ್ ಭಾನುವಾರ ಯುಎಸ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಟೆಸ್ಟ್, ಏಕದಿನದಲ್ಲಿ ರೋಹಿತ್ ಭರ್ಜರಿ ಪ್ರದರ್ಶನ
ರೋಹಿತ್ ಆರಂಭಿಕನಾಗಿ ಹಾಗೂ ನಾಯಕನಾಗಿ ಏಕದಿನ, ಟೆಸ್ಟ್ ಸ್ವರೂಪಗಳಲ್ಲಿ ಭಾರತ ತಂಡದ ಯೋಜನೆಗಳ ಅವಿಭಾಜ್ಯ ಅಂಗವಾಗಿ ಮುಂದುವರಿಯುತ್ತಾರೆ. ಕಳೆದ ವರ್ಷ ತವರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ರೋಹಿತ್, 120-ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ 597 ರನ್ ಸಿಡಿಸಿದ್ದರು. 2019 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್ ಆಗಿದ್ದು, 35 ಪಂದ್ಯಗಳಲ್ಲಿ 2552 ರನ್ ಗಳಿಸಿದ್ದಾರೆ. 2023-25ರ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ರೋಹಿತ್ 3 ಶತಕ, 1 ಅರ್ಧಶತಕ ಸಹಿತ 700 ರನ್ ಬಾರಿಸಿದ್ದಾರೆ.
