ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಆಘಾತ; ತಂಡದ ಪ್ರಮುಖ ಆಟಗಾರನಿಗೆ ಗಾಯ?
Rohit Sharma Injury: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ದೊಡ್ಡ ಆಘಾತವಾಗಿದೆ. ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಜೂನ್ 9ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ, ಈ ನಿರ್ಣಾಯಕ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಘಾತಕ್ಕೆ ಒಳಗಾಗಿದ್ದು, ನಾಯಕ ರೋಹಿತ್ ಶರ್ಮಾ ಮತ್ತೆ ಗಾಯಗೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಚೇತರಿಸಿಕೊಂಡಿದ್ದ ಹಿಟ್ಮ್ಯಾನ್ ಈಗ ಮತ್ತೆ ಇಂಜುರಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಜೂನ್ 5ರಂದು ನಡೆದ ಐರ್ಲೆಂಡ್ ಎದುರಿನ ಮಹತ್ವದ ಪಂದ್ಯದ ವೇಳೆ ರೋಹಿತ್ ಶರ್ಮಾ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಪಂದ್ಯದ ಮಧ್ಯೆಯೇ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದಿದ್ದರು. ಜೋಶುವಾ ಲಿಟಲ್ ಬೌಲಿಂಗ್ನಲ್ಲಿ ಚೆಂಡು ಬೌನ್ಸ್ ಆದಾಗ ರೋಹಿತ್ ಭುಜಕ್ಕೆ ತಗುಲಿತ್ತು. ಆಗ ವೈದ್ಯಕೀಯ ಸಿಬ್ಬಂದಿ ಮುನ್ನಚ್ಚರಿಕೆಯ ಭಾಗವಾಗಿ ರಿಟೈರ್ಡ್ ಹರ್ಟ್ ಆಗುವಂತೆ ಸೂಚಿಸಿದ್ದರು. ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಇನ್ನೂ ಭುಜ ನೋಯುತ್ತಿದೆ ಎಂದಿದ್ದರು.
ಅಭ್ಯಾಸದ ವೇಳೆ ಬೆರಳಿಗೆ ಗಾಯ
ಪಾಕ್ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಅಭ್ಯಾಸ ನಡೆಸುವ ವೇಳೆ ರೋಹಿತ್ ಹೆಬ್ಬೆರಳಿಗೆ ಗಾಯವಾಗಿದೆ. ಈ ಬೆನ್ನಲ್ಲೇ ಅಭ್ಯಾಸ ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಮಾಹಿತಿಗಳ ಪ್ರಕಾರ ರೋಹಿತ್ ಬೆರಳು ಊದಿಕೊಂಡಿದ್ದು, ಗಂಭೀರವಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಹುನಿರೀಕ್ಷಿತ ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎನ್ನುವ ಅನುಮಾನ ಮೂಡಿದೆ. ಆದರೆ ಪಂದ್ಯಕ್ಕೂ ಮುನ್ನ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಥ್ರೋ ಡೌನ್ ಸ್ಪೆಷಲಿಸ್ಟ್ ನುವಾನ್ ವಿರುದ್ಧ ಬ್ಯಾಟಿಂಗ್ ಅಭ್ಯಾಸ ನಡೆಸುವ ಅವಧಿಯಲ್ಲಿ ಚೆಂಡು ಪುಟಿದೆದ್ದು ಕೈಗೆ ಬಡಿದಿತ್ತು. ತಕ್ಷಣವೇ ಚಿಕಿತ್ಸೆ ಪಡೆದುಕೊಂಡರು. ಆದರೆ, ಚಿಕಿತ್ಸೆ ಪಡೆದ ಕೆಲವೇ ಕ್ಷಣಗಳಲ್ಲಿ ರೋಹಿತ್ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಭಿಮಾನಿಗಳ ಆತಂಕ ದೂರವಾಗಿದೆ. ಆದರೆ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಅವರು ಕಣಕ್ಕಿಳಿಯುವ ಕುರಿತು ಯಾವುದೇ ಯಾವುದೆ ಖಚಿತ ಮಾಹಿತಿ ಬಂದಿಲ್ಲ.
ರೋಹಿತ್ ಗಾಯಗೊಂಡರೆ, ನಾಯಕ ಯಾರು?
ಒಂದು ವೇಳೆ ರೋಹಿತ್ ಶರ್ಮಾ ಗಾಯಗೊಂಡರೆ ಯಾರು ನಾಯಕನಾಗಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಉಪನಾಯಕನಾಗಿರುವ ಹಾರ್ದಿಕ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆಯಲಿದ್ದಾರೆ. ಆದರೆ ರೋಹಿತ್ ಬಹುತೇಕ ಟ್ ಆಗಿದ್ದು, ಅವರೇ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ. ಪಾಕ್ ಪಂದ್ಯಕ್ಕೆ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರಾ ಅಥವಾ ಹಾರ್ದಿಕ್ ಪಾಂಡ್ಯ ನಾಯಯಕನಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ , ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
