ವೇಗದ ಶತಕದೊಂದಿಗೆ ಲಯಕ್ಕೆ ಮರಳಿದ ರೋಹಿತ್ ಶರ್ಮಾ; 32ನೇ ಏಕದಿನ ಸೆಂಚುರಿಗೆ ದಾಖಲೆಗಳು ನಿರ್ಮಾಣ
Rohit Sharma Record: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ 32ನೇ ಏಕದಿನ ಶತಕ ಪೂರೈಸಿದ್ದಾರೆ. ಆ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಸತತ ವೈಫಲ್ಯದಿಂದ ಕಂಗೆಟ್ಟಿದ್ದ ಮತ್ತು ವ್ಯಾಪಕ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 32ನೇ ಏಕದಿನ ಶತಕದೊಂದಿಗೆ ಕೊನೆಗೂ ಲಯಕ್ಕೆ ಮರಳಿದ್ದು, ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಅಲ್ಲದೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಫಾರ್ಮ್ ಕಂಡುಕೊಂಡಿದ್ದು ಭಾರತ ತಂಡಕ್ಕೆ ಬೂಸ್ಟ್ ಸಿಕ್ಕಂತಾಗಿದೆ. ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆರ್ಭಟಿಸಿದ ರೋಹಿತ್ ಶರ್ಮಾ 76 ಎಸೆತದಲ್ಲಿ 9 ಬೌಂಡರಿ, 7 ಸಿಕ್ಸರ್ ಸಹಿತ ನೂರು ರನ್ ಪೂರೈಸಿದರು. ಇದರೊಂದಿಗೆ ಹಲವು ದಾಖಲೆಗಳನ್ನೂ ನಿರ್ಮಿಸಿದ್ದಾರೆ.
ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ
ರೋಹಿತ್ರನ್ನು ಭಾರತ ತಂಡದಿಂದ ಕೈಬಿಡಬೇಕು, ಅವರಿಂದ ರನ್ ಬರುತ್ತಿಲ್ಲ, ಯುವ ಆಟಗಾರರಿಗೆ ಅವರು ದಾರಿ ಮಾಡಿಕೊಡಬೇಕು, ರೋಹಿತ್ ಯುಗಾಂತ್ಯ.. ಹೀಗೆ ಒಂದಾ ಎರಡಾ ಅನೇಕ ಟೀಕೆಗಳನ್ನು ಗುರಿಯಾಗಿದ್ದರು ಹಿಟ್ಮ್ಯಾನ್. ಇದೆಲ್ಲದಕ್ಕೂ ಇದೀಗ ಟಕ್ಕರ್ ನೀಡಿದ್ದಾರೆ. ತನ್ನ ಶಕ್ತಿ ಮತ್ತು ಸಾಮರ್ಥ್ಯ ಇನ್ನೂ ಕುಸಿದಿಲ್ಲ ಎಂದು ತನ್ನ ಪವರ್ ಹಿಟ್ಟಿಂಗ್ ಸಿಕ್ಸರ್ಗಳ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. 2023ರಲ್ಲಿ ಅಕ್ಟೋಬರ್ 11ರಂದು ಅಫ್ಘಾನಿಸ್ತಾನ ವಿರುದ್ಧ ತನ್ನ ಕೊನೆಯ ಏಕದಿನ ಶತಕ ಸಿಡಿಸಿದ್ದ ಹಿಟ್ಮ್ಯಾನ್, 1 ವರ್ಷ ಮೂರು ತಿಂಗಳು 29 ದಿನಗಳ ನಂತರ ಸೆಂಚುರಿ ಸಿಡಿಸಿದ್ದಾರೆ. ಆದರೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ವೈಫಲ್ಯ ಅನುಭವಿಸಿದ್ದರಿಂದ ಟೀಕೆ ಎದುರಿಸಬೇಕಾಗಿತ್ತು.
ರೋಹಿತ್ ಅತಿ ವೇಗದ ಏಕದಿನ ಶತಕ (ಎಸೆತಗಳಲ್ಲಿ)
63 vs ಆಫ್ರಿಕಾ, ದೆಹಲಿ, 2023
76 vs ಇಂಗ್ಲೆಂಡ್, ಕಟಕ್, 2025 *
82 vs ಇಂಗ್ಲೆಂಡ್, ನಾಟಿಂಗ್ಹ್ಯಾಮ್ 2018
82 vs ನ್ಯೂಜಿಲೆಂಡ್, ಇಂದೋರ್, 2023
84 vs ವೆಸ್ಟ್ ಇಂಡೀಸ್, ಗುವಾಹಟಿ, 2018
ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್, ಗೇಲ್ ದಾಖಲೆ ಬ್ರೇಕ್
305 ರನ್ಗಳ ಗುರಿ ಬೆನ್ನಟ್ಟುವ ವೇಳೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ಮೊದಲ ಸಿಕ್ಸರ್ ಬಾರಿಸುತ್ತಿದ್ದಂತೆ ಕ್ರಿಸ್ಗೇಲ್ ದಾಖಲೆ ಮುರಿದು ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದ ಹಿಟ್ಮ್ಯಾನ್ ತನ್ನ ಹೆಸರಿಗೆ 338 ಸಿಕ್ಸರ್ಗಳನ್ನು ಹಾಕಿಕೊಂಡಿದ್ದಾರೆ. ಪಂದ್ಯದಲ್ಲಿ ಮೊದಲ ಸಿಕ್ಸರ್ ಬಾರಿಸಿದ ಸಂದರ್ಭದಲ್ಲಿ ಗೇಲ್ ಸಿಡಿಸಿದ್ದ 331 ಸಿಕ್ಸರ್ ದಾಖಲೆಯನ್ನು ಮುರಿದರು.
ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು
351 ಸಿಕ್ಸರ್ - ಶಾಹಿದ್ ಅಫ್ರಿದಿ (ಪಾಕಿಸ್ತಾನ)
338 ಸಿಕ್ಸರ್ - ರೋಹಿತ್ ಶರ್ಮಾ* (ಭಾರತ)
331 ಸಿಕ್ಸರ್ - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
270 ಸಿಕ್ಸರ್ - ಸನತ್ ಜಯಸೂರ್ಯ (ಶ್ರೀಲಂಕಾ)
229 ಸಿಕ್ಸರ್ - ಎಂಎಸ್ ಧೋನಿ (ಭಾರತ)
220 ಸಿಕ್ಸರ್- ಇಯಾನ್ ಮಾರ್ಗನ್ (ಇಂಗ್ಲೆಂಡ್)
ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ದಾಖಲೆ
ನಾಯಕನಾಗಿಯೂ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಭಾರತ ತಂಡವನ್ನು ಅತಿ ಹೆಚ್ಚು ಒಡಿಐಗಳಲ್ಲಿ ಮುನ್ನಡೆಸಿದ 8ನೇ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದು ಅವರ ನಾಯಕತ್ವದಲ್ಲಿ ಭಾರತ ಆಡುತ್ತಿರುವ 50ನೇ ಏಕದಿನ ಇದಾಗಿದೆ. ಎಂಎಸ್ ಧೋನಿ 200, ಮೊಹಮ್ಮದ್ ಅಜರುದ್ದೀನ್ 174, ಸೌರವ್ ಗಂಗೂಲಿ 146, ವಿರಾಟ್ ಕೊಹ್ಲಿ 95, ರಾಹುಲ್ ದ್ರಾವಿಡ್ 79, ಕಪಿಲ್ ದೇವ್ 74, ಸಚಿನ್ ತೆಂಡೂಲ್ಕರ್ 73 ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು.
ಆರಂಭಿಕನಾಗಿ ಅತ್ಯಧಿಕ ರನ್
ರೋಹಿತ್ ಶರ್ಮಾ ಆರಂಭಿಕನಾಗಿ ಅತ್ಯಧಿಕ ರನ್ ಗಳಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಸಚಿನ್ 346 ಪಂದ್ಯಗಳಿಂದ 48.07 ಸರಾಸರಿಯಲ್ಲಿ 15,335 ರನ್ ಗಳಿಸಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶತಕ ಸಿಡಿಸಿದ ರೋಹಿತ್ 15404 ರನ್ಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ವೀರೇಂದ್ರ ಸೆಹ್ವಾಗ್ 321 ಪಂದ್ಯಗಳಿಂದ 41.90 ಸರಾಸರಿಯಲ್ಲಿ 15,758 ರನ್ ಗಳಿಸಿರುವ ಭಾರತೀಯ ಆರಂಭಿಕರಲ್ಲಿ ಪ್ರಮುಖ ಅಂತರರಾಷ್ಟ್ರೀಯ ರನ್ ಸ್ಕೋರರ್ ಆಗಿದ್ದಾರೆ.
