ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೋಚ್ ವಿರುದ್ಧ ಬಂಡಾಯ, ರಾಜೀನಾಮೆ ನೀಡ್ತಾರಾ ಗಂಭೀರ್? 8 ವರ್ಷಗಳ ಹಿಂದೆ ನಡೆದಿತ್ತು ಇಂತಹದ್ದೇ ಘಟನೆ
ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಹೆಡ್ ಕೋಚ್ ಗೌತಮ್ ವಿರುದ್ಧ ಭಾರತ ತಂಡದ ಆಟಗಾರರು ಬಂಡಾಯ ಎದ್ದಿದ್ದಾರೆ. ಗಂಭೀರ್ ಅವರ ರಾಜೀನಾಮೆಗೆ ಒತ್ತಾಯಿಸಬಹುದು ಎಂದು ವರದಿಯಾಗಿದೆ. 8 ವರ್ಷಗಳ ಹಿಂದೆ ನಡೆದಿತ್ತು ಇಂತಹದ್ದೇ ಘಟನೆ ನಡದಿತ್ತು.

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಆರಂಭಕ್ಕೆ ಕೇವಲ 4 ವಾರಗಳಷ್ಟೇ ಬಾಕಿ ಉಳಿದಿವೆ. ಟೂರ್ನಿಯು ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಭಾರತ ತಂಡ (Indian Cricket Team) ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಆಡಲಿದೆ. ಆದರೆ, ಮಹತ್ವದ ಟೂರ್ನಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಹಲವು ವಿಷಯಗಳಿಗೆ ಸಂಬಂಧಿಸಿ ರೋಹಿತ್ ಶರ್ಮಾ (Rohit Sharma) ಮತ್ತು ಗೌತಮ್ ಗಂಭೀರ್ (Gautam Gambhir) ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಗಂಭೀರ್ರ ಕಟ್ಟುನಿಟ್ಟಿನ ವರ್ತನೆ ತಂಡದಲ್ಲಿ ಅವರ ವಿರುದ್ಧ ಬಂಡಾಯದ ವಾತಾವರಣ ಸೃಷ್ಟಿಸಿದೆ ಎಂದು ವರದಿಯಾಗಿದೆ. ಹೀಗಿರುವಾಗ ಗಂಭೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎಂಬ ವದಂತಿ ಎದ್ದಿವೆ. 8 ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ವೇಳೆಯೇ ಇಂತಹದ್ದೇ ಒಂದು ಘಟನೆ ನಡೆದಿತ್ತು.
ಗಂಭೀರ್ ರಾಜೀನಾಮೆಗೆ ಒತ್ತಾಯಿಸಬಹುದು?
ಗಂಭೀರ್ ಅವರಿಗೆ ತಂಡದ ಕಳಪೆ ಪ್ರದರ್ಶನಕ್ಕಿಂತ ತಂಡದ ಬಂಡಾಯವೇ ದೊಡ್ಡ ಸವಾಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಹುತೇಕ ಆಟಗಾರರು ಗಂಭೀರ್ ಅವರ ಕಾರ್ಯವೈಖರಿಗೆ ವಿರುದ್ಧ ನಿಂತಿದ್ದಾರೆ. ಅದರಲ್ಲೂ ಹಿರಿಯ ಆಟಗಾರರೇ ಹೆಚ್ಚು. ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಂಭೀರ್ ಮತ್ತು ಭಾರತೀಯ ನಾಯಕನ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ವರದಿಯಾಗಿತ್ತು. ಅಷ್ಟೇ ಅಲ್ಲ, ಗಂಭೀರ್ ಅವರು ಎಲ್ಲಾ ಆಟಗಾರರ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇದೀಗ ಬಿಸಿಸಿಐ ಬಳಿ ಕೇಳಿ 10 ನೂತನ ನಿಯಮಗಳನ್ನು ರೂಪಿಸಿದ್ದಾರೆ. ಇದು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ವರದಿಯಾಗಿದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲು ಕಂಡರೆ ಗಂಭೀರ್ ರಾಜೀನಾಮೆಗೆ ಒತ್ತಾಯಿಸಬಹುದು ಎಂದು ಹೇಳಲಾಗಿದೆ. 2017ರಲ್ಲಿ ಇಂತಹದ್ದೇ ಘಟನೆಯಲ್ಲಿ ಅನಿಲ್ ಕುಂಬ್ಳೆ ಚಾಂಪಿಯನ್ಸ್ ಟ್ರೋಫಿ ನಂತರ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು.
ಬಂಡಾಯ ಎದ್ದಿದ್ದ ವಿರಾಟ್ ಕೊಹ್ಲಿ
ಭಾರತ ತಂಡದ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಜೂನ್ 2016ರಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿದ್ದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಕುಂಬ್ಳೆ ಅವರನ್ನು ಹೆಡ್ಕೋಚ್ ಸ್ಥಾನಕ್ಕೆ ನೇಮಿಸಿದ್ದರು. ಆದರೆ ಕುಂಬ್ಳೆ ಮತ್ತು ಆಗಿನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಸು ಏರ್ಪಟ್ಟ ಕಾರಣ ಇಬ್ಬರ ನಡುವೆ ಜಗಳ ನಡೆದಿತ್ತು. ತಂಡಕ್ಕೆ ಸಂಬಂಧಿಸಿ ಎಲ್ಲಾ ವಿಷಯಗಳಲ್ಲೂ ಕುಂಬ್ಳೆ ಕಟ್ಟುನಿಟ್ಟಾಗಿ ಇರುತ್ತಿದ್ದರು ಎಂಬುದು ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಅವರ ಕೋಚಿಂಗ್‌ನಲ್ಲಿ ಯುವ ಆಟಗಾರರು ಸಾಕಷ್ಟು ತೊಂದರೆ ಅನುಭವಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿ ವೇಳೆ ಈ ವಿಷಯ ಚರ್ಚಾ ವಿಷಯವಾಗಿತ್ತು. ಈ ಬಗ್ಗೆ ಬಿಸಿಸಿಐಗೆ ಕೊಹ್ಲಿ ದೂರು ನೀಡಿದ್ದರು. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಸೋಲಿನ ನಂತರ ಕುಂಬ್ಳೆ ರಾಜೀನಾಮೆ ನೀಡಿದ್ದರು ಎಂದು ವರದಿಯಾಗಿತ್ತು. ಇದೀಗ ಗಂಭೀರ್ ವಿಷಯದಲ್ಲೂ ಅದೇ ಆಗಬಹುದು.
ಗಂಭೀರ್ ಅವಧಿಯಲ್ಲಿ ದೊಡ್ಡ ಸೋಲು
ಗಂಭೀರ್ ಕಳೆದ ವರ್ಷ ಅಂದರೆ ಆಗಸ್ಟ್ 2024ರಲ್ಲಿ ಭಾರತ ತಂಡದ ಹೆಡ್ಕೋಚ್ ಆಗಿ ಅಧಿಕಾರಕ್ಕೇರಿದರು. ಅಂದಿನಿಂದ ತಂಡದ ಪ್ರದರ್ಶನದಲ್ಲಿ ನಿರಂತರ ಕುಸಿದಿದೆ. ಇವರ ಅವಧಿಯಲ್ಲಿ ಭಾರತ ತಂಡ 27 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಏಕದಿನ ಸರಣಿಯಲ್ಲಿ ಸೋಲು ಕಂಡಿತ್ತು. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಆಗಿತ್ತು. ಇದಾದ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲೂ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನೂ 1-3 ಅಂತರದಿಂದ ಕಳೆದುಕೊಂಡಿತ್ತು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ರೇಸ್‌ನಿಂದಲೂ ತಂಡವು ಹೊರಬಿತ್ತು. ಇದೀಗ ಗಂಭೀರ್ ಮೇಲೆ ಒತ್ತಡ ಹೆಚ್ಚಾಗಿದೆ. ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಸೋತರೆ ಅವರಿಗೆ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂದು tv9hindi ವರದಿ ಮಾಡಿದೆ.
