ರೋಹಿತ್ ಶರ್ಮಾ ಹೆಸರಿನಲ್ಲಿ ಮುಜುಗರದ ದಾಖಲೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು!
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ ಹೆಸರಿನಲ್ಲಿ ಮುಜುಗರದ ದಾಖಲೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು!

ರೋಹಿತ್ ಶರ್ಮಾ ಹೆಸರಿನಲ್ಲಿ ಮುಜುಗರದ ದಾಖಲೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು!

Rohit Sharma: ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ರೆಗ್ಯುಲರ್ ಕ್ಯಾಪ್ಟನ್ ರೋಹಿತ್ ಶರ್ಮಾ ಸರಣಿಯ ಮಧ್ಯದಲ್ಲಿ ತಂಡದಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡು ತನ್ನ ಹೆಸರಿಗೆ ಬೇಡದ ದಾಖಲೆಯನ್ನು ಬರೆದುಕೊಂಡಿದ್ದಾರೆ.

ರೋಹಿತ್ ಶರ್ಮಾ ಹೆಸರಿನಲ್ಲಿ ಅವಮಾನಕರ ದಾಖಲೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು!
ರೋಹಿತ್ ಶರ್ಮಾ ಹೆಸರಿನಲ್ಲಿ ಅವಮಾನಕರ ದಾಖಲೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು! (BCCI - X)

ಭಾರತ ತಂಡದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಮುಜುಗರದ ಮತ್ತು ಅವಮಾನಕರ ದಾಖಲೆಗೆ ಒಳಗಾದ ಮೊದಲ ನಾಯಕ ಎಂಬ ಕುಖ್ಯಾತಿಗೆ ಹಿಟ್​​ಮ್ಯಾನ್ ಪಾತ್ರರಾಗಿದ್ದಾರೆ. ಅಲ್ಲದೆ, ವಿಶ್ವ ಕ್ರಿಕೆಟ್​ನಲ್ಲಿ ಈ ಕೆಟ್ಟ ದಾಖಲೆ ಬರೆದ ನಾಲ್ಕನೇ ಕ್ರಿಕೆಟಿಗ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದ ಬೆನ್ನಲ್ಲೇ ಈ ದಾಖಲೆಗೆ ಒಳಗಾಗಿದ್ದಾರೆ. 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ನಡೆಯುತ್ತಿದೆ. ಜಸ್ಪ್ರೀತ್ ಬುಮ್ರಾ ನಾಯಕತ್ವದ ಟೀಮ್ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯದಲ್ಲೂ ರನ್ ಗಳಿಸಲು ಪರದಾಡುತ್ತಿದೆ. ಪ್ರಮುಖ ಆಟಗಾರರೇ ರನ್ ಗಳಿಸದೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಆದರೆ, ಪಂದ್ಯಕ್ಕೂ ಮುನ್ನವೇ ನಿಯಮಿತ ನಾಯಕ ರೋಹಿತ್ ಶರ್ಮಾ ಸರಣಿಯ ಮಧ್ಯದಲ್ಲಿ ತಂಡದಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡು ತನ್ನ ಹೆಸರಿಗೆ ಬೇಡದ ದಾಖಲೆಯನ್ನು ಬರೆದುಕೊಂಡಿದ್ದಾರೆ. ಈ ಹಿಂದೆ ಯಾವುದೇ ಭಾರತೀಯ ನಾಯಕ ಇಂತಹ ದಾಖಲೆಗೆ ಒಳಗಾಗಿರಲಿಲ್ಲ.

ರೋಹಿತ್​ ಟೆಸ್ಟ್ ಸರಣಿಯ ಮಧ್ಯದಲ್ಲಿ ಪ್ಲೇಯಿಂಗ್ 11ನಿಂದ ಕೈಬಿಡಲ್ಪಟ್ಟ ಮೊದಲ ಭಾರತೀಯ ನಾಯಕ ಎಂಬ ಮುಜುಗರದ ದಾಖಲೆಗೆ ಪಾತ್ರರಾಗಿದ್ದಾರೆ. ನಿವೃತ್ತಿ ಅಥವಾ ಯಾವುದೇ ವೈಯಕ್ತಿಕ ಕಾರಣಗಳಿಂದ ಸರಣಿಯ ಮಧ್ಯದಲ್ಲಿ ನಾಯಕ ಬದಲಾದ ಅನೇಕ ಉದಾಹರಣೆಗಳು ಭಾರತೀಯ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಸೇರಿವೆ. ಆದರೆ, ತಂಡದಲ್ಲಿದ್ದಾಗ ಪ್ಲೇಯಿಂಗ್ ಇಲೆವೆನ್​​ನಿಂದ ಹೊರಗುಳಿದ ಘಟನೆ ನಡೆದಿದ್ದು ಇದೇ ಮೊದಲು. ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರೋಹಿತ್​, ಕೊನೆಯ ಟೆಸ್ಟ್​​ಗೆ ನಾಯಕನಾಗಿ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದಿಲ್ಲ. ಇದು ವಿಶ್ವ ಕ್ರಿಕೆಟ್​​ನಲ್ಲಿ ಸಂಭವಿಸಿದ ನಾಲ್ಕನೇ ಘಟನೆಯಾಗಿದೆ.

1974ರಲ್ಲಿ ನಡೆದಿತ್ತು ಇಂತಹ ಮೊದಲ ಪ್ರಕರಣ

1974ರ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್​ ತಂಡದ ನಾಯಕನಾಗಿದ್ದ ಮೈಕ್ ಡೆನ್ನೆಸ್ ಅವರು ನಾಲ್ಕನೇ ಟೆಸ್ಟ್​​ನಿಂದ ಹೊರಗುಳಿಯುವ ಮೂಲಕ ಈ ಕೆಟ್ಟ ದಾಖಲೆಗೆ ಪಾತ್ರರಾಗಿದ್ದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದಾರೆ. ಅವರು ನಾಯಕನಾಗಿ ಆಡುವ 11ರ ಬಳಗದಿಂದ ಹೆಸರನ್ನು ಕೈಬಿಡಲಾಗಿತ್ತು. ಅಂದು ಅವರ ಬದಲಿಗೆ ಜಾನ್ ಎಡ್ರಿಚ್ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರು. ಸರಣಿ ಮಧ್ಯೆಯೇ ನಾಯಕತ್ವ ಬದಲಾದ ನಂತರ ಇಂಗ್ಲೆಂಡ್ ಭರ್ಜರಿ ಕಂಬ್ಯಾಕ್ ಮಾಡಿತ್ತು.

ಪಾಕಿಸ್ತಾನ, ಶ್ರೀಲಂಕಾ ತಂಡದಲ್ಲೂ ಆಗಿತ್ತು ಬದಲಾವಣೆ

ಇಂತಹ ಎರಡನೇ ಪ್ರಕರಣ ನಡೆದಿದ್ದು ಸುಮಾರು 40 ವರ್ಷಗಳ ನಂತರ, ಅಂದರೆ 2014ರಲ್ಲಿ. ಆ ವರ್ಷ ಪಾಕಿಸ್ತಾನದ ಮಿಸ್ಬಾ-ಉಲ್-ಹಕ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮಧ್ಯದಲ್ಲಿ ಹೊರಗುಳಿದಿದ್ದರು. ಅವರ ಬದಲಿಗೆ ಶಾಹಿದ್ ಅಫ್ರಿದಿ ನಾಯಕತ್ವ ಪಡೆದಿದ್ದರು. ಅದೇ ವರ್ಷ, ದಿನೇಶ್ ಚಂಡಿಮಾಲ್ ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಟಿ20 ವಿಶ್ವಕಪ್​​ ಕೊನೆಯ 3 ಪಂದ್ಯಗಳಿಗೆ ಶ್ರೀಲಂಕಾ ತಂಡದಿಂದ ಹೊರಗುಳಿದಿದ್ದರು. ಬದಲಿಗೆ ಲಸಿತ್ ಮಾಲಿಂಗ ಜವಾಬ್ದಾರಿ ವಹಿಸಿಕೊಂಡು ತಂಡಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

ಇದೀಗ ರೋಹಿತ್​ ಶರ್ಮಾ ಅವರು ಐದನೇ ಟೆಸ್ಟ್​​ಗೂ ಮುನ್ನ ಪ್ಲೇಯಿಂಗ್​ 11ನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಅವರ ತ್ಯಾಗ ವ್ಯರ್ಥ ಆಗಬಾರದು ಎಂಬುದು ಭಾರತೀಯ ಕ್ರಿಕೆಟ್ ಫ್ಯಾನ್ಸ್ ಬಯಕೆ. ಜಸ್ಪ್ರೀತ್ ಬುಮ್ರಾ ಸಿಡ್ನಿ ಟೆಸ್ಟ್ ಗೆದ್ದು ಸರಣಿ 2-2 ಡ್ರಾದಲ್ಲಿ ಕೊನೆಗೊಳಿಸಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ. ಸರಣಿ ಡ್ರಾಗೊಂಡರೆ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಂತಾಗಲಿದೆ. ಜೊತೆಗೆ ಡಬ್ಲ್ಯುಟಿಸಿ ಫೈನಲ್ ತಲುಪುವ ಟೀಮ್ ಇಂಡಿಯಾದ ಭರವಸೆಯನ್ನು ಉಳಿಸಿಕೊಳ್ಳಲಿದೆ.

Whats_app_banner