ಡಗೌಟ್​ನಲ್ಲೇ ಕುಳಿತು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದಿದ್ದು ಹೇಗೆ ರೋಹಿತ್ ಶರ್ಮಾ? ಇದು ಮಾಸ್ಟರ್​ಸ್ಟ್ರೋಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ಡಗೌಟ್​ನಲ್ಲೇ ಕುಳಿತು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದಿದ್ದು ಹೇಗೆ ರೋಹಿತ್ ಶರ್ಮಾ? ಇದು ಮಾಸ್ಟರ್​ಸ್ಟ್ರೋಕ್

ಡಗೌಟ್​ನಲ್ಲೇ ಕುಳಿತು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದಿದ್ದು ಹೇಗೆ ರೋಹಿತ್ ಶರ್ಮಾ? ಇದು ಮಾಸ್ಟರ್​ಸ್ಟ್ರೋಕ್

ಬ್ಯಾಟಿಂಗ್​ನಲ್ಲಿ ಫಾರ್ಮ್​​ ಕಳೆದುಕೊಂಡಿದ್ದರೂ ತಾನು ಯಾವತ್ತಿದ್ದರೂ ಚಾಂಪಿಯನ್ ಎಂಬುದನ್ನು ರೋಹಿತ್​ ಶರ್ಮಾ ಸಾಬೀತುಪಡಿಸಿದ್ದಾರೆ. ನಾಯಕತ್ವದಲ್ಲಿ ಡಗೌಟ್​ನಲ್ಲೇ ಕುಳಿತು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದಿದ್ದು ಹೇಗೆ? ಇಲ್ಲಿದೆ ವಿವರ.

ಡಗೌಟ್​ನಲ್ಲೇ ಕುಳಿತು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದಿದ್ದು ಹೇಗೆ ರೋಹಿತ್ ಶರ್ಮಾ? ಇದು ಮಾಸ್ಟರ್​ಸ್ಟ್ರೋಕ್
ಡಗೌಟ್​ನಲ್ಲೇ ಕುಳಿತು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಕಥೆ ಬರೆದಿದ್ದು ಹೇಗೆ ರೋಹಿತ್ ಶರ್ಮಾ? ಇದು ಮಾಸ್ಟರ್​ಸ್ಟ್ರೋಕ್ (X)

ಪ್ರಸಕ್ತ ಐಪಿಎಲ್​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟ್ ಸದ್ದು ಮಾಡುತ್ತಿಲ್ಲ. ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿರುವ ಹಿಟ್​ಮ್ಯಾನ್, ಕಳೆದ ವರ್ಷದಿಂದ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಯಮಿತ ಆಟಗಾರನಾಗಿ ಆಡುವ 11ರಲ್ಲಿ ಸ್ಥಾನ ಪಡೆಯುತ್ತಿಲ್ಲ. ಹೀಗಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚಾಂಪಿಯನ್ ಆಟಗಾರ ತಾನು ಯಾವತ್ತಿದ್ದರೂ ಚಾಂಪಿಯನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್​​ಗೆ ತಮ್ಮ ಅನುಭವ ಏಕೆ ಬೇಕು ಎಂದೂ ಸಾಬೀತುಪಡಿಸಿದ್ದಾರೆ. ನಿಜ ಹೇಳಬೇಕೆಂದರೆ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡದ ಸೋಲಿನ ಕಥೆ ಬರೆದಿದ್ದೇ ರೋಹಿತ್​ ಶರ್ಮಾ.

ಡಗೌಟ್​ನಲ್ಲಿ ಕುಳಿತಿದ್ದ ರೋಹಿತ್​ ಶರ್ಮಾ ಸರಿಯಾದ ಸಮಯಕ್ಕೆ ನಿಖರವಾದ ಸಲಹೆ ಸೂಚನೆಗಳನ್ನು ನೀಡಿದರು. ಪರಿಣಾಮ ಅಜೇಯ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಗೆಲುವಿನ ರಥ ನಿಲ್ಲಿಸಿತು. ತನ್ನ ಸ್ಥಾನಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರಣ್ ಶರ್ಮಾ ಅವರಿಗೆ ರೋಹಿತ್​ ವಿಶೇಷ ಸಲಹೆಗಳನ್ನು ನೀಡಿದರು. ಚೆಂಡನ್ನು ಬದಲಿಸುವಂತೆ ಸೂಚಿಸಿದರು. ಈ ಮಾಸ್ಟರ್ ಸ್ಟ್ರೋಕ್ ಇಡೀ ಆಟವನ್ನು ತಿರುಗಿಸಿತು. ಡೆಲ್ಲಿ ಇನ್ನಿಂಗ್ಸ್​ 14ನೇ ಓವರ್​​​ನಲ್ಲಿ ಪ್ರಾರಂಭವಾಗುವ ಮುನ್ನ ಕರಣ್​ಗೆ ಚೆಂಡು ಬದಲಿಸಲು ಸೂಚನೆ ಕೊಟ್ಟರು. ಐಪಿಎಲ್ ನಿಯಮಗಳ ಪ್ರಕಾರ, ಬೌಲಿಂಗ್ ತಂಡವು ರಾತ್ರಿ ಪಂದ್ಯದಲ್ಲಿ 10 ಓವರ್​ಗಳ ನಂತರ ಚೆಂಡನ್ನು ಬದಲಾಯಿಸಬಹುದು. ಇದರಿಂದ ಇಬ್ಬನಿಗೆ ಸಂಬಂಧಿಸಿ ಉಭಯ ತಂಡಗಳಿಗೂ ಸಮತೋಲನ ಸಿಗಲಿದೆ.

ಚೆಂಡು ಬದಲಿಸಿದ ಬೆನ್ನಲ್ಲೇ ಸ್ಥಿರವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕುಸಿತ ಆರಂಭಗೊಂಡಿತು. ಅದರಲ್ಲೂ ಕರಣ್ ಶರ್ಮಾ ಅವರೇ ಪಂದ್ಯದ ಚಿತ್ರಣ ಬದಲಿಸಿದರು. 4 ಓವರ್​ಗಳಲ್ಲಿ 36 ರನ್ ಬಿಟ್ಟುಕೊಟ್ಟ ಕರಣ್, ಪ್ರಮುಖ 3 ವಿಕೆಟ್ ಉರುಳಿಸಿದರು. ಅದರಲ್ಲೂ 33 ರನ್ ಗಳಿಸಿ ಮಿಂಚಿದ್ದ ಅಭಿಷೇಕ್ ಪೊರೆಲ್​  ಅವರನ್ನು ಔಟ್ ಮಾಡಿದ್ದು ಗೇಮ್​ ಚೇಂಜಿಂಗ್ ಕ್ಷಣ ಎನ್ನಬಹುದು. ಅಭಿಷೇಕ್ ಅವರು 89 ರನ್ ಬಾರಿಸಿದ್ದ ಕರುಣ್ ನಾಯರ್​ ಜೊತೆಗೆ 119 ರನ್​ಗಳ ಜೊತೆಯಾಟವಾಡಿದ್ದರು. ಇನ್​ಫಾರ್ಮ್ ಬ್ಯಾಟರ್ ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಕರಣ್ ಔಟ್ ಮಾಡಿದರು. ಘಟಾನುಘಟಿಗನ್ನೇ ಔಟ್ ಮಾಡಿದ್ದರ ಹಿನ್ನೆಲೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ರೋಹಿತ್​ ಕೊಟ್ಟಿರುವ ಸಲಹೆಗಳಿಂದ ಮುಂಬೈ 2ನೇ ಗೆಲುವು ದಾಖಲಿಸಲು ಸಾಧ್ಯವಾಯಿತು. ಲಯದಲ್ಲಿದ್ದ ಕರುಣ್ ನಾಯರ್​ಗೆ ಮಿಚೆಲ್ ಸ್ಯಾಂಟ್ನರ್ ಗೇಟ್ ಪಾಸ್ ನೀಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ತಿಲಕ್ ವರ್ಮಾ (59), ರಿಯಾನ್ ರಿಕೆಲ್ಟನ್ (41), ಸೂರ್ಯಕುಮಾರ್ ಯಾದವ್ (40) ಮತ್ತು ನಮನ್ ಧೀರ್ (38) ಅವರ ಬ್ಯಾಟಿಂಗ್ ತಂಡವು 200ರ ಗಡಿ ದಾಟಲು ನೆರವಾಯಿತು. ರೋಹಿತ್ ಶರ್ಮಾ ಕೇವಲ 18 ರನ್ ಸಿಡಿಸಿ ಔಟಾದರು.  ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 206 ರನ್​ಗಳ ಗುರಿ ಬೆನ್ನಟ್ಟಿತು. 3 ವರ್ಷಗಳ ನಂತರ ಐಪಿಎಲ್​ನಲ್ಲಿ ತಮ್ಮ ಮೊದಲ ಪಂದ್ಯ ಆಡಿದ ಕರುಣ್, 7 ವರ್ಷಗಳ ನಂತರ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಡೆಲ್ಲಿ 12 ಓವರ್​​ಗೆ 2 ವಿಕೆಟ್ ನಷ್ಟಕ್ಕೆ 135 ರನ್ ಕಲೆ ಹಾಕಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner