ರೋಚಕ ಟೈ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ನಲ್ಲಿ ಅಚ್ಚರಿ ಹೇಳಿಕೆ ನೀಡಿದ ರೋಹಿತ್ ಶರ್ಮಾ: ಏನಂದ್ರು ನೋಡಿ
Rohit Sharma: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ರೋಚಕ ಟೈ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ (ಆಗಸ್ಟ್ 2) ಕೊಲಂಬೊದಲ್ಲಿ ನಡೆದಿದ್ದು, ಡ್ರಾದಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ರೋಚಕ ಪೈಪೋಟಿ ಕಂಡು ಬಂದಿತು. ಕೊನೆಯ ಹಂತದವರೆಗೆ ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಅಂತಿಮವಾಗಿ ಯಾವುದೇ ತಂಡವು ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ ತಂಡ ಗೆಲುವಿನ ಸಮೀಪ ಬಂದಿತ್ತು. ಪಂದ್ಯ ಗೆಲ್ಲಲು ಟೀಮ್ ಇಂಡಿಯಾಕ್ಕೆ 15 ಎಸೆತಗಳಲ್ಲಿ ಕೇವಲ 1 ರನ್ ಬೇಕಿತ್ತು. ಆದರೆ, ಅರ್ಷದೀಪ್ ಸಿಂಗ್ ಔಟಾಗುವ ಮೂಲಕ ಭಾರತ, ಲಂಕಾ ಗಳಿಸಿದ ರನ್ಗೆ ಆಲೌಟ್ ಆಯಿತು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ರೋಚಕ ಟೈ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾವು ಇನ್ನೂ ಕೊಂಚ ರನ್ ಕಲೆ ಹಾಕಬಹುದಿತ್ತು. ಆದರೆ, ಆ ಸ್ಕೋರ್ ತಲುಪಲು ಚೆನ್ನಾಗಿ ಬ್ಯಾಟ್ ಮಾಡಬೇಕು. ನಾವು ಕಷ್ಟದ ಸಂದರ್ಭ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೇವೆ. ಆದರೆ ಸ್ಥಿರವಾಗಿ ಆ ವೇಗದಲ್ಲಿ ಆಡಲಿಲ್ಲ’ ಎಂದು ಹೇಳಿದ್ದಾರೆ.
ನಿರಾಸೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ
‘ನಾವು ಬ್ಯಾಟಿಂಗ್ ಮೂಲಕ ಉತ್ತಮವಾಗಿ ಪ್ರಾರಂಭಿಸಿದ್ದೇವೆ. ಆದರೆ ಸ್ಪಿನ್ನರ್‌ಗಳು ಬೌಲ್ ಮಾಡಲು ಬಂದ ನಂತರ ಅಂದರೆ 10 ಓವರ್‌ಗಳ ಬಳಿಕ ಆಟ ಪ್ರಾರಂಭವಾಗಲಿದೆ ಎಂದು ನಮಗೆ ತಿಳಿದಿತ್ತು. ಆರಂಭದಲ್ಲಿ ನಾವು ಮೇಲುಗೈ ಸಾಧಿಸಿದ್ದೆವು. ನಂತರ ಒಂದೆರಡು ವಿಕೆಟ್ ಕಳೆದುಕೊಂಡ ಪರಿಣಾಮ ಆಟದಿಂದ ಹಿಂದೆ ಬಿದ್ದೆವು. ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಉತ್ತಮ ಜೊತೆಯಾಟ ಆಡಿ ಮತ್ತೆ ಪಂದ್ಯಕ್ಕೆ ಮರಳಿದೆವು. ಆದರೆ, ಕೊನೆಯಲ್ಲಿ ನಿರಾಶೆಯಾಯಿತು’
ಪಂದ್ಯ ಟೈ ಆದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರೋಹಿತ್, ‘14 ಎಸೆತಗಳಲ್ಲಿ ಗೆಲ್ಲಲು 1 ರನ್ ಬೇಕಾಗಿತ್ತು. ಈರೀತಿಯ ಸಂಗತಿಗಳು ಸಂಭವಿಸುತ್ತವೆ. ಶ್ರೀಲಂಕಾ ಉತ್ತಮವಾಗಿ ಆಡಿತು. ಕೊನೆಯಲ್ಲಿ ನ್ಯಾಯಯುತವಾದ ಫಲಿತಾಂಶ ಬಂದಿದೆ. ಪಿಚ್ ಕೂಡ ಹಾಗೆಯೇ ಇತ್ತು. ನಾವು ಬೌಲ್ ಮಾಡಿದಾಗ ಮೊದಲ 25 ಓವರ್ ಕಷ್ಟವಾಗಿತ್ತು, ಅವರಿಗೂ ಅದೇ ಆಗಿತ್ತು. ಆಟ ಮುಂದುವರೆದಂತೆ, ಎರಡೂ ತಂಡಗಳಿಗೆ ಸೀಮ್ ಬೌಲಿಂಗ್ನಲ್ಲಿ ಬ್ಯಾಟಿಂಗ್ ಸ್ವಲ್ಪ ಸುಲಭವಾಯಿತು. ನಾವು ಕೊನೆಯವರೆಗೂ ಹೋರಾಡಿದ ರೀತಿಗೆ ಹೆಮ್ಮೆ ಇದೆ. ಬೇರೆ ಬೇರೆ ಸಮಯಗಳಲ್ಲಿ ಎರಡೂ ತಂಡಗಳತ್ತ ಆಟ ಸಾಗಿತು. ಆದರೆ, ಆ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ’ ಎಂಬುದು ಹಿಟ್ಮ್ಯಾನ್ ಬೇಸರದ ಮಾತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ತಂಡದ ಪರ ದುನಿಯತ್ ವೆಲ್ಲಲಗಾ ಅಜೇಯ 67 ರನ್ ಸಿಡಿಸಿದರೆ, ಪಥುಮ್ ನಿಸ್ಸಂಕ 56 ರನ್ ಕಲೆಹಾಕಿದರು. ಭಾರತ ಪರ ಅರ್ಶ್ದೀಪ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 47.5 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ 58 ರನ್ ಗಳಿಸಿದರೆ, ಅಕ್ಷರ್ 33 ಮತ್ತು ರಾಹುಲ್ 31 ರನ್ ಕಲೆಹಾಕಿದರು. ಲಂಕಾ ಪರ ಹಸರಂಗ ಮತ್ತು ಅಸಲಂಕಾ ತಲಾ 3 ವಿಕೆಟ್ ಕಿತ್ತರು.
(ವರದಿ: ವಿನಯ್ ಭಟ್)
ಇದನ್ನೂ ಓದಿ: ಸಾರ್ವಕಾಲಿಕ ಏಕದಿನ ವಿಶ್ವಕಪ್ ಬೆಸ್ಟ್ ಪ್ಲೇಯಿಂಗ್ 11 ಕಟ್ಟಿದ ಮ್ಯಾಥ್ಯೂ ಹೇಡನ್; ವಿರಾಟ್ ಕೊಹ್ಲಿಗೆ ಇಲ್ಲ ಸ್ಥಾನ!