ರೋಹಿತ್ ಬೇಡ, ಕೊಹ್ಲಿ ಬೇಕು; ಇಂಗ್ಲೆಂಡ್ ವಿರುದ್ಧ ಸೋಲಿನ ಬಳಿಕ ಎದ್ದಿದೆ ಭಾರತ ಟೆಸ್ಟ್ ನಾಯಕತ್ವದ ಚರ್ಚೆ
Rohit Sharma or Virat Kohli: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಅವರ ಕಳಪೆ ನಾಯಕತ್ವಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಸೋಲಿನ ನಂತರ ಭಾರತ ತಂಡದಲ್ಲಿ ನಾಯಕತ್ವದ ಚರ್ಚೆ ಆರಂಭಗೊಂಡಿದೆ. ನಮಗೆ ರೋಹಿತ್ ಶರ್ಮಾ (Rohit Sharma) ಬೇಡ, ವಿರಾಟ್ ಕೊಹ್ಲಿ (Virat Kohli) ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಪರ ವಿರೋಧದ ಡಿಬೇಟ್ಗಳು ಆರಂಭಗೊಂಡಿವೆ.
ತವರಿನಲ್ಲಿ ರೋಹಿತ್ ಶರ್ಮಾ ಅವರ ಕಳಪೆ ನಾಯಕತ್ವಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ಅಷ್ಟು ಧಮ್ ಇಲ್ಲ. ಕಾರ್ಯತಂತ್ರಗಳು ಹೇಳಿಕೊಳ್ಳುವಂತಿಲ್ಲ ಎಂಬುದು ಹಲವರ ವಾದ
ಇದೇ ವೇಳೆ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ತಂಡಕ್ಕೆ ಮತ್ತೆ ನಾಯಕನನ್ನಾಗಿ ನೇಮಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಎದುರಾಳಿ ತಂಡಗಳು ಮೈದಾನಕ್ಕಿಳಿಯಲು ಕೂಡ ಭಯಪಡುತ್ತವೆ. ದೇಶ-ವಿದೇಶಗಳಲ್ಲಿ ಭಾರತ ತಂಡವನ್ನು ಎಲೆ ಎತ್ತಿ ಓಡಾಡುವಂತೆ ಮಾಡಿದ ಗತ್ತು ಅವರೇ ಎಂಬುದು ಮತ್ತೊಂದು ವರ್ಗದ ವಾದ.
ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ನಾಯಕತ್ವದಲ್ಲಿ ತವರಿನಲ್ಲಿ ಭಾರತ ಸೋತಿರುವ ದಾಖಲೆಗೂ, ಹಾಗೆಯೇ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಭಾರತ ಸೋತಿರುವ ದಾಖಲೆಗೂ ಹೋಲಿಕೆ ಮಾಡಲಾಗುತ್ತಿದೆ. ಈ ಇಬ್ಬರ ಅಂಕಿ-ಅಂಶಗಳ ಸಮೇತ ಯಾರು ಬೆಸ್ಟ್ ಕ್ಯಾಪ್ಟನ್ ಎಂಬ ಚರ್ಚೆಗಳಲ್ಲಿ ಅಭಿಮಾನಿಗಳು ತೊಡಗಿದ್ದಾರೆ.
ಕೊನೆಯ ಮೂರು ಪಂದ್ಯಗಳಲ್ಲಿ ರೋಹಿತ್ ದಾಖಲೆ
ರೋಹಿತ್ ತವರಿನಲ್ಲಿ ನಾಯಕತ್ವ ವಹಿಸಿದ ಕೊನೆಯ 3 ಟೆಸ್ಟ್ಗಳಲ್ಲಿ ಭಾರತ ಎರಡಲ್ಲಿ ಸೋತಿದೆ. ಭಾರತದಲ್ಲಿ 1 ವರ್ಷದ ಅವಧಿಗೂ ಮುನ್ನವೇ ರೋಹಿತ್ ನಾಯಕತ್ವದಲ್ಲಿ 2 ಪಂದ್ಯಗಳಲ್ಲಿ ಸೋತಿದ್ದಾರೆ. ಕಳೆದ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿ 3ನೇ ಪಂದ್ಯ ಸೋಲು, 4ನೇ ಪಂದ್ಯ ಡ್ರಾ ಸಾಧಿಸಿದ್ದ ಭಾರತ, ಈಗ ಇಂಗ್ಲೆಂಡ್ ಎದುರು ಸೋತಿದೆ.
8 ವರ್ಷಗಳಲ್ಲಿ ಸೋತಿದ್ದೇ ಎರಡು
ವಿರಾಟ್ ಕೊಹ್ಲಿ 2013ರಿಂದ 2021ರವರೆಗೆ ಟೆಸ್ಟ್ ನಾಯಕತ್ವ ವಹಿಸಿದ್ದರು. ಆದರೆ 8 ವರ್ಷಗಳ ಅವಧಿಯಲ್ಲಿ ಭಾರತದ ನೆಲದಲ್ಲಿ ಅವರ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಸೋತಿದ್ದು ಎರಡೇ ಪಂದ್ಯ. ಅಷ್ಟರ ಮಟ್ಟಿಗೆ ಪರಾಕ್ರಮ ಮೆರೆದಿದ್ದರು. ಅಲ್ಲದೆ, ಪ್ರವಾಸಿ ತಂಡಗಳ ಎದುರು ಹಿಡಿತ ಸಾಧಿಸಿದ್ದರು.
ತವರಿನಲ್ಲಿ ಇಬ್ಬರ ದಾಖಲೆ ಹೇಗಿದೆ?
ರೋಹಿತ್ ಶರ್ಮಾ ತವರಿನಲ್ಲಿ 7 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, 4 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. 1 ಡ್ರಾ, 2 ಸೋಲು ಕಂಡಿದೆ. ಗೆಲುವಿನ ಶೇ 50+ ರಷ್ಟು ಹೊಂದಿದ್ದಾರೆ. ಆದರೆ ತವರಿನಲ್ಲಿ ಕೊಹ್ಲಿ, 31 ಪಂದ್ಯಗಳನ್ನು ಮುನ್ನಡೆಸಿ 24 ಗೆಲುವು, 5 ಡ್ರಾ, 2 ಸೋಲು ಮಾತ್ರ ಕಂಡಿದ್ದು, 77.41ರಷ್ಟು ಗೆಲುವಿನ ಶೇಕಡವಾರು ಕಂಡಿದ್ದಾರೆ.
ಒಟ್ಟಾರೆ ನಾಯಕತ್ವದಲ್ಲಿ ಇಬ್ಬರ ಅಂಕಿ-ಅಂಶ
- ವಿರಾಟ್ ಕೊಹ್ಲಿ ಒಟ್ಟಾರೆ 68 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿದ್ದು, 40 ಗೆಲುವು ಸಾಧಿಸಿದ್ದು, ಕೇವಲ 17 ಸೋಲು, 11 ಡ್ರಾ ಸಾಧಿಸಿದ್ದಾರೆ.
- ರೋಹಿತ್ ಒಟ್ಟು 12 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಗೆಲುವು 6, ಸೋಲು 4, ಡ್ರಾ 2 ಪಂದ್ಯಗಳಲ್ಲಿ ಸಾಧಿಸಿದ್ದಾರೆ. ಗೆಲುವಿನ ಶೇಕಡವಾರು 50ರಷ್ಟು.
- ಎಂಎಸ್ ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಗೆಲುವು, 18 ಸೋಲು, 15 ಡ್ರಾ ಸಾಧಿಸಿದ್ದಾರೆ. ಗೆಲುವಿನ ಶೇಕಡವಾರು 45ರಷ್ಟು.