ಹಿಂದೆ ಸರಿದ ರೋಹಿತ್ ಶರ್ಮಾ, ಬುಮ್ರಾಗೆ ನಾಯಕತ್ವ, ಕನ್ನಡಿಗನಿಗೆ ಅವಕಾಶ; 5ನೇ ಟೆಸ್ಟ್ಗೆ ಟೀಮ್ ಇಂಡಿಯಾ ಪ್ಲೇಯಿಂಗ್ 11
India vs Australia 5th Test: ಆಸ್ಟ್ರೇಲಿಯಾ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಿದ್ದರೆ ತಂಡದಲ್ಲಿ ಯಾರೆಲ್ಲಾ ಅವಕಾಶ ಪಡೆದಿದ್ದಾರೆ? ಇಲ್ಲಿದೆ ವಿವರ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದು, ಊಟದ ವಿರಾಮಕ್ಕೆ ಅಗ್ರ ಕ್ರಮಾಂಕದ ಮೂವರನ್ನು ಕಳೆದುಕೊಂಡಿದೆ. ಆದರೆ, ಜನವರಿ 2ರಂದು ನಡೆದ ಬೆಳವಣಿಗೆಗಳು ನೀಡಿದ ಸುಳಿವಿನಂತೆ ರೋಹಿತ್ ಶರ್ಮಾ ಅವರು ಈ ಪಂದ್ಯದಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತೆ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯ ನಡೆಯುತ್ತಿದೆ.
ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆ
ರೋಹಿತ್ ಶರ್ಮಾ ಅಲಭ್ಯತೆಯ ಕಾರಣ ಕಳೆದ ಪಂದ್ಯದಲ್ಲಿ ಬೆಂಚ್ ಕಾದಿದ್ದ ಶುಭ್ಮನ್ ಗಿಲ್, ಮತ್ತೆ ಪ್ಲೇಯಿಂಗ್ 11ಗೆ ಸೇರ್ಪಡೆ ಆಗಿದ್ದಾರೆ. ಮತ್ತೊಂದೆಡೆ ಆಕಾಶ್ ದೀಪ್ ಅವರು ಗಾಯಗೊಂಡಿರುವ ಕಾರಣ ವೇಗಿ ಹರ್ಷಿತ್ ರಾಣಾಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಬದಲಿಗೆ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ಸಿಕ್ಕಿದೆ. ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಹೊಂದಿದ್ದ ಭಾರತ, ಮೂವರು ವೇಗಿಗಳು, ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡುತ್ತಿದೆ. ಇವರಿಗೆ ವೇಗದ ಆಲ್ರೌಂಡರ್ ಕೂಡ ಸಾಥ್ ಕೊಡಲಿದ್ದಾರೆ.
ಹಿಂದೆ ಸರಿದ ರೋಹಿತ್ ಶರ್ಮಾ
ಜನವರಿ 2ರ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರು ರೋಹಿತ್ ಆಡುವ ಬಗ್ಗೆ ಖಚಿತಪಡಿಸುವುದನ್ನು ನಿರಾಕರಿಸಿದ ಬಳಿಕ ಹುಟ್ಟಿದ ಅನುಮಾನ ಇದೀಗ ನಿಜವಾಗಿದೆ. ರೋಹಿತ್ ಅವರು ಪ್ರಾಕ್ಟೀಸ್ ಸೆಷನ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ತೀವ್ರ ಅಸಮಾಧಾನರಾಗಿ ಒಬ್ಬರೇ ಇರುವ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಇದರ ಬೆನ್ನಲ್ಲೇ ಸಂಜೆಯ ಹೊತ್ತಿಗೆ ತಾನೇ ಪಂದ್ಯದಿಂದ ಹಿಂದೆ ಸರಿಯುವುದಾಗಿ ಹೆಡ್ಕೋಚ್ ಗೌತಮ್ ಗಂಭೀರ್ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರಿಗೆ ತಿಳಿಸಿದ್ದರು.
ರೋಹಿತ್ ಟೆಸ್ಟ್ ಆಡುವುದಿಲ್ಲವೇ?
ಕೆಲವು ವರದಿಗಳ ಪ್ರಕಾರ, ರೋಹಿತ್ ಟೆಸ್ಟ್ ಕ್ರಿಕೆಟ್ ವೃತ್ತಿಜೀವನ ಬಹುತೇಕ ಅಂತ್ಯಗೊಂಡಿದೆ. ಮೆಲ್ಬೋರ್ನ್ ಟೆಸ್ಟ್ ಹಿಟ್ಮ್ಯಾನ್ ಅವರ ಕೊನೆಯ ಟೆಸ್ಟ್ ಎಂದು ಹೇಳಲಾಗುತ್ತಿದೆ. ಬಿಜಿಟಿ ಸರಣಿ ಬಳಿಕ ಅವರನ್ನು ಟೆಸ್ಟ್ ಸರಣಿಗಳಿಗೆ ಆಯ್ಕೆ ಮಾಡುವುದಿಲ್ಲವಂತೆ. ಈಗಾಗಲೇ ಟಿ20ಐಗೂ ವಿದಾಯ ಹೇಳಿರುವ ಅವರು, ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬಳಿಕ, ಏಕದಿನ ಕ್ರಿಕೆಟ್ ಭವಿಷ್ಯವೂ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.
ಐದನೇ ಟೆಸ್ಟ್ ಭಾರತದ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ನಾಯಕ), ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ಐದನೇ ಟೆಸ್ಟ್ ಆಸ್ಟ್ರೇಲಿಯಾ ಪ್ಲೇಯಿಂಗ್ 11
ಸ್ಯಾಮ್ ಕಾನ್ಸ್ಟಾಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.