ರೋಹಿತ್ ಶರ್ಮಾ ಕೆಟ್ಟ ಪ್ರದರ್ಶನಕ್ಕೆ ಅಧಿಕ ತೂಕವೇ ಕಾರಣವಂತೆ; ವಿರಾಟ್ ಕೊಹ್ಲಿ ನೋಡಿ ಕಲಿಯಬೇಕಂತೆ
Rohit Sharma: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಅಧಿಕ ತೂಕ ಹೊಂದಿರುವ ಕಾರಣ ಕೆಟ್ಟ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹಿಟ್ಮ್ಯಾನ್ ಫಿಟ್ನೆಸ್ ಕುರಿತು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಡೇರಿಲ್ ಕುಲ್ಲಿನನ್ ಟೀಕಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಹಿಟ್ಮ್ಯಾನ್, ಆಸೀಸ್ ನೆಲದಲ್ಲಿ ಫಾರ್ಮ್ಗೆ ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಲ್ಲಿನ ಫಾಸ್ಟ್ ಆ್ಯಂಡ್ ಬೌನ್ಸಿ ಟ್ರ್ಯಾಕ್ನಲ್ಲಿ ಮತ್ತೆ ರನ್ ಗಳಿಸಲು ಪರದಾಟ ನಡೆಸುತ್ತಿರುವುದು ಆತಂಕ ಮೂಡಿಸಿದೆ. ಇದು ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಇದರ ನಡುವೆ ರೋಹಿತ್ ವೈಫಲ್ಯಕ್ಕೆ ಕಾರಣ ಏನೆಂದು ಇದೀಗ ಬಹಿರಂಗಗೊಂಡಿದೆ. ರೋಹಿತ್ ಶರ್ಮಾ ಕೆಟ್ಟ ಪ್ರದರ್ಶನಕ್ಕೆ ಅಧಿಕ ತೂಕವೇ ಕಾರಣವಂತೆ!
ಹೀಗಂತ, ಹೇಳಿರೋದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಡೇರಿಲ್ ಕುಲ್ಲಿನನ್. ಹೌದು, ರೋಹಿತ್ ಅವರ ಅಧಿಕ ತೂಕವೇ ಕೆಟ್ಟ ಪ್ರದರ್ಶನಕ್ಕೆ ಕಾರಣ ಎಂದು ಟೀಕೆ ಮಾಡಿದ್ದಾರೆ. ಡೇರಿಲ್ ಕಲ್ಲಿನನ್ ಅವರು ಭಾರತದ ನಾಯಕನ ಮೇಲೆ ತೀವ್ರ ದಾಳಿ ನಡೆಸಿದ್ದು, ಅವರನ್ನು ‘ಅಧಿಕ ತೂಕದ ವ್ಯಕ್ತಿ’ ಎಂದಿದ್ದಾರೆ. ವೇಗ ಮತ್ತು ಸ್ಪಿನ್ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಿದ್ದ ದಕ್ಷಿಣ ಆಫ್ರಿಕಾದ ಅತ್ಯಂತ ಪ್ರತಿಭಾನ್ವಿತ ಬ್ಯಾಟರ್ಗಳಲ್ಲಿ ಒಬ್ಬರೆಂದು ಕರೆಯಲ್ಪಡುವ ಕುಲ್ಲಿನನ್, ರೋಹಿತ್ ಅವರ ದೈಹಿಕ ಸ್ಥಿತಿಯ ಕುರಿತು ಟೀಕಿಸಿದ್ದಾರೆ. ಇದು ಅವರನ್ನು (ರೋಹಿತ್) ಇಡೀ ತಂಡಕ್ಕೆ ಹೊರೆಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.
ರೋಹಿತ್ ನಾಯಕತ್ವದಲ್ಲಿ ಭಾರತ ತನ್ನ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3 ಮತ್ತು ಕಳೆದ ವಾರ ಅಡಿಲೇಡ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ. ರೋಹಿತ್ ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಅಂಶ ಏನೆಂದರೆ ಅವರ ಸ್ವಂತ ಫಾರ್ಮ್. ಅವರು ಕಳೆದ 6 ಟೆಸ್ಟ್ಗಳಲ್ಲಿ 11.83ರ ಶೋಚನೀಯ ಸರಾಸರಿಯಲ್ಲಿ 142 ರನ್ ಗಳಿಸಿದ್ದಾರೆ. ಟೆಸ್ಟ್ ರ್ಯಾಂಕಿಂಗ್ನಲ್ಲಿ ದಯನೀಯ ಕುಸಿತ ಕಂಡಿದ್ದಾರೆ. ಸೆಪ್ಟೆಂಬರ್ನಲ್ಲಿ 5ನೇ ಶ್ರೇಯಾಂಕ ಹೊಂದಿದ್ದ ಹಿಟ್ಮ್ಯಾನ್ ಪ್ರಸ್ತುತ 31ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಹೋರಾಟದ ಬಗ್ಗೆ ಮಾತನಾಡಿದ ಕುಲ್ಲಿನನ್, ಅವರ ದೇಹ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.
ರೋಹಿತ್ಗೂ ಕೊಹ್ಲಿಗೂ ಹೋಲಿಸಿ ನೋಡಿ
ನೀವು ರೋಹಿತ್ ಶರ್ಮಾ ಅವರನ್ನೂ ನೋಡಿ, ವಿರಾಟ್ ಕೊಹ್ಲಿ ಅವರನ್ನೂ ಒಮ್ಮೆ ನೋಡಿ. ಇಬ್ಬರ ದೈಹಿಕ ಪರಿಸ್ಥಿತಿಯನ್ನೊಮ್ಮೆ ನೋಡಿ. ರೋಹಿತ್ ಅವರು ದೀರ್ಘಾವಧಿ ಕ್ರಿಕೆಟ್ನಲ್ಲಿ ಇರಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಕಠಿಣ ಪರಿಶ್ರಮ ಅತ್ಯಗತ್ಯ. ರೋಹಿತ್ ಅನ್ಫಿಟ್ ಆಗಿದ್ದಾರೆ. ಅವರು ಕೊಹ್ಲಿಯನ್ನು ನೋಡಿ ಕಲಿಯಬೇಕು. ಭಾರತದ ಇತರ ಆಟಗಾರರು ಸಹ ರೋಹಿತ್ಗಿಂತ ಉತ್ತಮ ಫಿಟ್ನೆಸ್ ಹೊಂದಿದ್ದಾರೆ. ಇದು ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ರೋಹಿತ್ ಅವರ ಸ್ವದೇಶ ಮತ್ತು ವಿದೇಶಿ ಪಿಚ್ಗಳಲ್ಲಿ ಬಂದಿರುವ ಅಂಕಿ-ಅಂಶಗಳ ಕುರಿತು ವಿವರ ನೀಡಿದ್ದಾರೆ.
ವಿದೇಶಿ ಪಿಚ್ಗಳಲ್ಲಿ ರನ್ ಗಳಿಸುತ್ತಿಲ್ಲ ಎಂದ ಕುಲ್ಲಿನನ್
37 ವರ್ಷದ ರೋಹಿತ್ ಭಾರತದಲ್ಲಿ ಮಾತ್ರ ಅಬ್ಬರಿಸುತ್ತಾರೆ, ವಿದೇಶಿ ಪಿಚ್ ಪಿಚ್ಗಳಲ್ಲಿ ಅವರ ಬ್ಯಾಟ್ ಸದ್ದು ಮಾಡುವುದಿಲ್ಲ ಎಂದು ಕುಲ್ಲಿನನ್ ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನೂ ಬಹಿರಂಗಪಡಿಸಿದ್ದಾರೆ. ರೋಹಿತ್ ಆಡಿರುವ 65 ಟೆಸ್ಟ್ ಪಂದ್ಯಗಳ ಪೈಕಿ ವಿದೇಶದಲ್ಲಿ 29 ಪಂದ್ಯಗಳನ್ನು ಆಡಿದ್ದು, 32.44 ಸರಾಸರಿಯಲ್ಲಿ 1622 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಗಳಿಸಿರುವ 10,866 ರನ್ಗಳಲ್ಲಿ ಕೇವಲ 3,703 ರನ್ ಮಾತ್ರ ವಿದೇಶಿ ನೆಲದಲ್ಲಿ ಬಂದಿವೆ ಎಂದು ಹೇಳಿದ್ದಾರೆ. ಫ್ಲ್ಯಾಟ್ ಟ್ರ್ಯಾಕ್ನಲ್ಲಿ ರನ್ ಗಳಿಸಲು ಪರದಾಡುತ್ತಾರೆ. ಇದಕ್ಕೆ ಭಾರತದ ಹೊರಗಿನ ದಾಖಲೆಗಳೇ ಸಾಕ್ಷಿ ಎಂದು ಹೇಳಿದ್ದಾರೆ.