ಬೆನ್ ಸ್ಟೋಕ್ಸ್‌ ರನೌಟ್ ಬಳಿಕ ಶ್ರೇಯಸ್ ಅಯ್ಯರ್ ಸನ್ನೆ ಮಾಡಿದ್ದೇಕೆ; ಸೇಡಿನ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆನ್ ಸ್ಟೋಕ್ಸ್‌ ರನೌಟ್ ಬಳಿಕ ಶ್ರೇಯಸ್ ಅಯ್ಯರ್ ಸನ್ನೆ ಮಾಡಿದ್ದೇಕೆ; ಸೇಡಿನ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ

ಬೆನ್ ಸ್ಟೋಕ್ಸ್‌ ರನೌಟ್ ಬಳಿಕ ಶ್ರೇಯಸ್ ಅಯ್ಯರ್ ಸನ್ನೆ ಮಾಡಿದ್ದೇಕೆ; ಸೇಡಿನ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ

ಬೆನ್‌ ಸ್ಟೋಕ್ಸ್‌ ರನೌಟ್‌ ಆದಾಗ ಕೈ ಬೆರಳು ತೋರುತ್ತಾ ಔಟ್‌ ಎಂದು ಶ್ರೇಯಸ್ ಅಯ್ಯರ್ ಸನ್ನೆ ಮಾಡಿದರು. ಇದು ಬೆನ್‌ ಸ್ಟೋಕ್ಸ್‌ ಮೇಲೆ ಅಯ್ಯರ್‌ ಸೇಡು ತೀರಿಸಿದ ಪರಿ. ಭಾರತದ ಇನ್ನಿಂಗ್ಸ್‌ ವೇಳೆ ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ಹಿಡಿದ ಸ್ಟೋಕ್ಸ್‌, ಅಯ್ಯರ್‌ ವಿಕೆಟ್‌ ಪಡೆದಿದ್ದರು. ಆಗ ಇಂಗ್ಲೆಂಡ್‌ ನಾಯಕ ಬೆರಳು ತೋರಿಸಿ ಔಟ್‌ ಎಂದು ಸನ್ನೆ ಮಾಡಿದ್ದರು.

ಶ್ರೇಯಸ್ ಅಯ್ಯರ್ ಸನ್ನೆ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ
ಶ್ರೇಯಸ್ ಅಯ್ಯರ್ ಸನ್ನೆ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ (@shahieeeeee/X)

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್ ಅಯ್ಯರ್ (Shreyas Iyer) ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆದರೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಅಮೋಘ ಗೆಲುವಿನಲ್ಲಿ ಅಯ್ಯರ್‌ ಪಾತ್ರವಂತೂ ಇದ್ದೇ ಇದೆ. ಪಂದ್ಯದ 4ನೇ ದಿನದಾಟದಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಅವರನ್ನು ರನೌಟ್‌ ಮಾಡುವ ಮೂಲಕ, ಆಂಗ್ಲ ಬಳಗದ ಡೇಂಜರಸ್‌ ಆಟಗಾರನ ವಿಕೆಟ್‌ ಪಡೆಯುವಲ್ಲಿ ಅಯ್ಯರ್‌ ಪ್ರಮುಖ ಪಾತ್ರ ವಹಿಸಿದರು. ಅವರ ಅತ್ಯುತ್ತಮ ಫೀಲ್ಡಿಂಗ್ ಪ್ರಯತ್ನದಿಂದಾಗಿ ಭಾರತವು ಸುಲಭ ಜಯ ಸಾಧಿಸಿತು.

ಎರಡನೇ ಟೆಸ್ಟ್‌ನಲ್ಲಿ ಸೋಮವಾರದ ಅಂತಿಮ ಸೆಷನ್‌ನಲ್ಲಿ ಅದ್ಭುತ ರನ್ ಔಟ್ ಮಾಡಿದ ಅಯ್ಯರ್‌, ಇಂಗ್ಲೆಂಡ್ ಸೋಲಿಗೆ ಮುನ್ನುಡಿ ಬರೆದರು. ಇಂಗ್ಲೆಂಡ್‌ ತಂಡದ ಎರಡನೇ ಇನ್ನಿಂಗ್ಸ್‌ನ 53ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಆರ್ ಅಶ್ವಿನ್ ಎಸೆತವು ಬೆನ್ ಫೋಕ್ಸ್ ಬ್ಯಾಟ್‌ಗೆ ಇನ್‌ಸೈಡ್ ಎಡ್ಜ್ ಆಯ್ತು. ಸ್ಟೋಕ್ಸ್ ಮತ್ತು ಫೋಕ್ಸ್ ಹಿಂದೆ ಮುಂದೆ ನೋಡಿ ಒಂದು ರನ್‌ ಓಡಿದರು. ಅದು ಸುಲಭವಾಗಿ ಸಿಂಗಲ್‌ ಓಡುವಂತಿತ್ತು. ಆದರೆ, ಮಿಡ್‌ ವಿಕೆಟ್‌ನಲ್ಲಿ ನಿಂತಿದ್ದ ಅಯ್ಯರ್‌ ಯೋಚನೆಯೇ ಬೇರೆ ಆಗಿತ್ತು. ಕೈಗೆ ಬಂದ ಚೆಂಡನ್ನು ಒಂದು ಕೈಯಿಂದ ಎತ್ತಿಕೊಂಡು ಸ್ಟಂಪ್‌ಗಳತ್ತ ಹೊಡೆದರು. ಅಯ್ಯರ್‌ ಮಾಡಿದ ಥ್ರೋ ತನ್ನ ಬಳಿ ಬರುವುದಿಲ್ಲ ಎಂದೇ ಸ್ಟೋಕ್ಸ್ ಭಾವಿಸಿದ್ದರು. ಆದರೆ ಸ್ಟಂಪ್‌ಗಳಿಗೆ ನೇರವಾಗಿ ಬಡಿದ ಚೆಂಡು, ಸ್ಟೋಕ್ಸ್‌ ವಿಕೆಟ್‌ ಪಡೆಯಲು ನೆರವಾಯ್ತು.‌

ಇದನ್ನೂ ಓದಿ | ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲ; ಯು ಟರ್ನ್ ಹೊಡೆದ ರಾಹುಲ್ ದ್ರಾವಿಡ್

ಇದು ಪಂದ್ಯಕ್ಕೆ ಪ್ರಮುಖ ತಿರುವು ನೀಡಿತು. ಏಕೆಂದರೆ, ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಇಂಗ್ಲೆಂಡ್ ನಾಯಕನ ವಿಕೆಟ್‌ ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ಮೈದಾನದ ಎಲ್‌ಇಡಿ ಪರದೆ ಮೇಲೆ 'ಔಟ್' ಎಂದು ಕಾಣಿಸುತ್ತಿದ್ದಂತೆಯೇ ಟೀಮ್‌ ಇಂಡಿಯಾ ಬಳಗದಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಯಿತು. ಭಾರತೀಯ ಫೀಲ್ಡರ್‌ಗಳು ಕಿರುಚುತ್ತಾ ಓಡಾಡುತ್ತಿರುವಾಗ, ಮೈದಾನದ ಕ್ಯಾಮರಾಗಳು ಶ್ರೇಯಸ್ ಅಯ್ಯರ್ ಅವರತ್ತ ಜೂಮ್‌ ಮಾಡಿದವು. ರನೌಟ್‌ ಮಾಡಿದ ಖುಷಿಯಲ್ಲಿ ಅಯ್ಯರ್‌ ತಮ್ಮ ತೋರು ಬೆರಳನ್ನು ಮೇಲಕ್ಕೆ ತೋರಿಸುತ್ತಿದ್ದರು. ಅವರ ಮುಖದಲ್ಲಿ ತುಸು ಆಕ್ರೋಶ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

ಸೇಡು ತೀರಿಸಿಕೊಂಡ ಅಯ್ಯರ್‌

ಕೈ ಬೆರಳು ತೋರುತ್ತಾ ಔಟ್‌ ಎಂದು ಅಯ್ಯರ್ ಮಾಡಿದ ಸನ್ನೆಗೂ ಕಾರಣವಿದೆ. ಇದು ಬೆನ್‌ ಸ್ಟೋಕ್ಸ್‌ಗೆ ಅಯ್ಯರ್‌ ಕೊಟ್ಟ ಸ್ಪಷ್ಟ ಉತ್ತರವಾಗಿತ್ತು. ಪಂದ್ಯದ 3ನೇ ದಿನದಾಟದಂದು ಭಾರತದ ಇನ್ನಿಂಗ್ಸ್‌ ವೇಳೆ ಅಯ್ಯರ್‌ ಔಟಾಗಲು ಕಾರಣ ಸ್ಟೋಕ್ಸ್. ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ಹಿಡಿದ ಸ್ಟೋಕ್ಸ್‌, ಅಯ್ಯರ್‌ ವಿಕೆಟ್‌ ಪಡೆದಿದ್ದರು. ಆಗ ಇಂಗ್ಲೆಂಡ್‌ ನಾಯಕ ಬೆರಳು ತೋರಿಸಿ ಔಟ್‌ ಎಂದು ಸನ್ನೆ ಮಾಡಿದ್ದರು. ಕೊನೆಯ ಇನ್ನಿಂಗ್ಸ್‌ನಲ್ಲಿ ಸ್ಟೋಕ್ಸ್‌ ಔಟಾಗುತ್ತಿದ್ದಂತೆಯೇ ಅದೇ ರೀತಿ ಸನ್ನೆ ಮಾಡಿ ಸ್ಟೋಕ್ಸ್‌ಗೆ ತಕ್ಕ ಉತ್ತರ ನೀಡಿದ್ದಾರೆ.

ಅಯ್ಯರ್‌ಗೆ ನೆನಪಿಸಿದ್ದೇ ರೋಹಿತ್

ಆರಂಭದಲ್ಲಿ, ಸ್ಟೋಕ್ಸ್‌ಗೆ ತಿರುಗೇಟು ನೀಡುವ ಯೋಚನೆ ಅಯ್ಯರ್‌ಗೆ ಇರಲಿಲ್ಲ. ಆದರೆ, ನಾಯಕ ರೋಹಿತ್‌ ಶರ್ಮಾ ಇದನ್ನು ಅಯ್ಯರ್‌ಗೆ ನೆನಪಿಸಿದರು. ಬೆರಳು ತೋರಿಸುವ ಸನ್ನೆಯನ್ನು ನಾಯಕ ರೋಹಿತ್ ನೆನಪಿಸಿದ ನಂತರ, ಅಯ್ಯರ್ ತೋರುಬೆರಳು ತೋರಿ ಸೇಡು ತೀರಿಸಿಕೊಂಡರು.

ಇದನ್ನೂ ಓದಿ | ಜೈಸ್ವಾಲ್-ಗಿಲ್ ಜಾಗತಿಕ ಕ್ರಿಕೆಟ್ ಆಳುತ್ತಾರೆ; ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

ಸದ್ಯ ಐದು ಪಂದ್ಯಗಳ ಸರಣಿಯು 1-1 ಅಂತರದಲ್ಲಿ ಸಮಬಲಗೊಂಡಿದೆ. ಮೂರನೇ ಟೆಸ್ಟ್ ಪಂದ್ಯವು ಫೆಬ್ರುವರಿ 15ರಂದು ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner