IND vs ENG: 48ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ; ರಾಹುಲ್‌ ದ್ರಾವಿಡ್‌ ವಿಶ್ವದಾಖಲೆ ಸರಿಗಟ್ಟಿದ ಹಿಟ್‌ಮ್ಯಾನ್‌-rohit sharma slams 48th international century in india vs england 5th test equals rahul dravid record ind vs eng jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng: 48ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ; ರಾಹುಲ್‌ ದ್ರಾವಿಡ್‌ ವಿಶ್ವದಾಖಲೆ ಸರಿಗಟ್ಟಿದ ಹಿಟ್‌ಮ್ಯಾನ್‌

IND vs ENG: 48ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ; ರಾಹುಲ್‌ ದ್ರಾವಿಡ್‌ ವಿಶ್ವದಾಖಲೆ ಸರಿಗಟ್ಟಿದ ಹಿಟ್‌ಮ್ಯಾನ್‌

Rohit Sharma: ಇಂಗ್ಲೆಂಡ್‌ ವಿರುದ್ಧ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಟೆಸ್ಟ್‌ ಸ್ವರೂಪದಲ್ಲಿ12ನೇ ಶತಕ ಬಾರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್‌ ಸಿಡಿಸಿದ 48ನೇ ಶತಕ. ಆ ಮೂಲಕ ಅವರು ದಿಗ್ಗಜ ಸಾಧಕರ ದಾಖಲೆ ಪಟ್ಟಿಯನ್ನು ಸೇರಿಕೊಂಡಿದ್ದಾರೆ.

48ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ
48ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ (REUTERS)

ಧರ್ಮಶಾಲಾ ಟೆಸ್ಟ್‌ನಲ್ಲಿ (India vs England 5th Test) ಭಾರತ ಅತ್ಯುತ್ತಮ ಸ್ಥಿತಿಯಲ್ಲಿದೆ. 2ನೇ ದಿನದಾಟದ ಮೊದಲ ಸೆಷನ್‌ನಲ್ಲಿ ಟೀಮ್‌ ಇಂಡಿಯಾ ವಿಕೆಟ್‌ ಕಳೆದುಕೊಳ್ಳದೆ ಆಟ ಮುಂದುವರೆಸಿದೆ. ಈನಡುವೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಟೆಸ್ಟ್ ವೃತ್ತಿಜೀವನದ 12ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ, ನಾಯಕ ಯಾವುದೇ ವಿಶೇಷ ಸಂಭ್ರಮಾಚರಣೆ ನಡೆಸಿಲ್ಲ. ಕೇವಲ ಡಗೌಟ್‌ ಹಾಗೂ ಅಭಿಮಾನಿಗಳತ್ತ ಬ್ಯಾಟ್‌ ತೋರಿಸಿ ಸರಳವಾಗಿ ಖುಷಿಪಟ್ಟರು. ಪ್ರಸ್ತುತ ಟೆಸ್ಟ್‌ ಸ್ವರೂಪದಲ್ಲಿ ಉತ್ತಮ ಫಾರ್ಮ್ ಮುಂದುವರಿಸಿದ ನಾಯಕ, ಇಂಗ್ಲೆಂಡ್‌ ವಿರುದ್ಧದ ಪ್ರಸಕ್ತ ಸರಣಿಯಲ್ಲಿ 2ನೇ ಶತಕ ಗಳಿಸಿದರು. ಮೊದಲ ಸೆಷನ್‌ ಅಂತ್ಯಕ್ಕೆ ಪ್ರಸಕ್ತ ಸರಣಿಯಲ್ಲಿ‌ 399 ರನ್‌ ಪೂರ್ಣಗೊಳಿಸಿರುವ ಅವರು, ಇನ್ನೊಂದು ರನ್‌ ಗಳಿಸಿದರೆ 400 ರನ್‌ ಪೂರ್ಣಗೊಳಿಸಲಿದ್ದಾರೆ.

ಮೊದಲನೇ ದಿನದಾಟಕ್ಕೆ 30 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 135 ರನ್‌ ಕಲೆ ಹಾಕಿದ್ದ ಭಾರತ, ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ 264 ರನ್‌ ಗಳಿಸಿದೆ. ಅಲ್ಲದೆ 46 ರನ್‌ಗಳ ಮುನ್ನಡೆಯಲ್ಲಿದೆ. ನಾಯಕ ರೋಹಿತ್‌ ಹಾಗೂ ಶುಭ್ಮನ್‌ ಗಿಲ್‌ ಇಬ್ಬರೂ ಶತಕ ಸಿಡಿಸಿ ಮಿಂಚಿದ್ದಾರೆ. ಉಭಯ ಬ್ಯಾಟರ್‌ಗಳ ನಡುವೆ 236 ಎಸೆತಗಳಲ್ಲಿ 160‌ ರನ್‌ ಕಲೆ ಹಾಕಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 52 ರನ್‌ ಗಳಿಸಿದ್ದ ರೋಹಿತ್ ಶರ್ಮಾ, ಇಂದು ಮತ್ತೆ ತಮ್ಮ ಅಜೇಯ ಆಟ ಮುಂದುವರೆಸಿದರು. ರಕ್ಷಣಾತ್ಮಕ ಆಟದೊಂದಿಗೆ ಆಕ್ರಮಣಕಾರಿಯಾಗಿಯೂ ಬ್ಯಾಟ್‌ ಬೀಸಿದರು.

ಇದನ್ನೂ ಓದಿ | IND vs ENG: ಜೈಸ್ವಾಲ್‌-ರೋಹಿತ್ ಶರ್ಮಾ ಶತಕದ ಜೊತೆಯಾಟ; ಮೊದಲ ದಿನದಾಟದ ಅಂತ್ಯಕ್ಕೆ ಸುಸ್ಥಿತಿಯಲ್ಲಿ ಭಾರತ

ರಾಜ್‌ಕೋಟ್‌ ಟೆಸ್ಟ್‌ನಲ್ಲಿ 131 ರನ್ ಗಳಿಸಿದ್ದ ಹಿಟ್‌ಮ್ಯಾನ್‌, ರಾಂಚಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 55 ರನ್ ಗಳಿಸಿದ್ದರು. ಇದೀಗ ಅವರು ಸರಣಿಯಲ್ಲಿ ಮೂರನೇ ಬಾರಿಗೆ 50ಕ್ಕೂ ಅಧಿಕ ರನ್‌ ಗಳಿಸಿದರು. ಇದೀಗ ಧರ್ಮಶಾಲಾ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕ ಹಿಟ್‌ಮ್ಯಾನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 48 ಶತಕ ಸಿಡಿಸಿದ ಸಾಧನೆ ಮಾಡಿದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಮೂರನೇ ಭಾರತೀಯ ಎಂಬ ದಾಖಲೆ ಬರೆದರು. ಟೀಮ್‌ ಇಂಡಿಯಾ ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಕೂಡಾ 48 ಶತಕ ಗಳಿಸಿದ್ದಾರೆ. ಇದೀಗ ಭಾರತದ ನಾಯಕ ದ್ರಾವಿಡ್‌ ದಾಖಲೆಯನ್ನು ಹಿಟ್‌ಮ್ಯಾನ್ ಸರಿಗಟ್ಟಿದ್ದಾರೆ.‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯರು

  • 100 - ಸಚಿನ್ ತೆಂಡೂಲ್ಕರ್
  • 80 - ವಿರಾಟ್ ಕೊಹ್ಲಿ
  • 48 - ರೋಹಿತ್ ಶರ್ಮಾ
  • 48 - ರಾಹುಲ್ ದ್ರಾವಿಡ್
  • 38 - ವೀರೇಂದ್ರ ಸೆಹ್ವಾಗ್
  • 38 - ಸೌರವ್ ಗಂಗೂಲಿ

ಅಂತಾರಾಷ್ಟ್ರೀಯ ಶತಕಗಳ ಲೆಕ್ಕದಲ್ಲಿ ಇತ್ತೀಚೆಗೆ ಹಿಟ್‌ಮ್ಯಾನ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನಾಯಕನಾಗಿ ಹೆಚ್ಚು ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸಿದ್ದಾರೆ. 2021ರಿಂದ ಟೆಸ್ಟ್ ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯನಿದ್ದರೆ ಅದು ರೋಹಿತ್‌ ಶರ್ಮಾ.

2021ರಿಂದ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯರು

  • 6 - ರೋಹಿತ್ ಶರ್ಮಾ
  • 4 - ಶುಭ್ಮನ್ ಗಿಲ್
  • 3 - ಯಶಸ್ವಿ ಜೈಸ್ವಾಲ್
  • 3 - ರಿಷಬ್ ಪಂತ್
  • 3 - ರವೀಂದ್ರ ಜಡೇಜಾ
  • 3 - ಕೆಎಲ್ ರಾಹುಲ್

ಇದನ್ನೂ ಓದಿ | ಒಂದೇ ಸರಣಿಯಲ್ಲಿ 700 ರನ್; ಸುನಿಲ್ ಗವಾಸ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಯಶಸ್ವಿ ಜೈಸ್ವಾಲ್

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)