ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ ಜೊತೆಗಿನ ನಿರಂತರ ವಾಗ್ವಾದಗಳಿಂದ ಬೇಸತ್ತ ರೋಹಿತ್​ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಮಾಜಿ ನಾಯಕ ಗುಡ್​ಬೈ?

ಹಾರ್ದಿಕ್ ಪಾಂಡ್ಯ ಜೊತೆಗಿನ ನಿರಂತರ ವಾಗ್ವಾದಗಳಿಂದ ಬೇಸತ್ತ ರೋಹಿತ್​ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಮಾಜಿ ನಾಯಕ ಗುಡ್​ಬೈ?

Rohit Sharma to leave Mumbai Indians : ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಅತೃಪ್ತಿ ಹೊಂದಿದ್ದು, ಪರಸ್ಪರ ನಿರಂತರ ಜಗಳವಾಡುತ್ತಿದ್ದಾರೆ. ಹೀಗಾಗಿ ರೋಹಿತ್​ ಫ್ರಾಂಚೈಸಿ ಜತೆಗಿನ ಒಪ್ಪಂದ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಜೊತೆಗಿನ ನಿರಂತರ ವಾಗ್ವಾದಗಳಿಂದ ಬೇಸತ್ತ ರೋಹಿತ್​ ಶರ್ಮಾ
ಹಾರ್ದಿಕ್ ಪಾಂಡ್ಯ ಜೊತೆಗಿನ ನಿರಂತರ ವಾಗ್ವಾದಗಳಿಂದ ಬೇಸತ್ತ ರೋಹಿತ್​ ಶರ್ಮಾ

ಮುಂಬೈ ಇಂಡಿಯನ್ಸ್ (Mumbai Indians)​ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಅತ್ಯಂತ ಕೆಟ್ಟ ಆರಂಭ ಪಡೆದಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ತಂಡದಲ್ಲಿ ಆಟಗಾರರ ನಡುವೆ ಭಿನ್ನಾಭಿಪ್ರಾಯಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಮಾಜಿ ನಾಯಕ ರೋಹಿತ್​ ಶರ್ಮಾ (Rohit Sharma) ಮನಸ್ತಾಪ ಹೆಚ್ಚಾಗಿದೆ. ರೋಹಿತ್​ ಮತ್ತೆ ನಾಯಕನಾಗಬೇಕೆಂಬ ಕೂಗು ಸಹ ಜೋರಾಗಿದೆ. ಇದರ ಮಧ್ಯೆ ಎಂಐ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ರೋಹಿತ್​ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಸಿದ್ಧವಾಗಿದ್ದಾರೆ ಎಂದು ವರದಿಗಳಾಗಿವೆ. ನ್ಯೂಸ್ 24ರ ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಅತೃಪ್ತಿ ಹೊಂದಿದ್ದು, ಇಬ್ಬರು ಪರಸ್ಪರ ನಿರಂತರ ಜಗಳವಾಡುತ್ತಿದ್ದಾರೆ. ಹೀಗಾಗಿ ರೋಹಿತ್​ ಫ್ರಾಂಚೈಸಿ ಜತೆಗಿನ ಒಪ್ಪಂದ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

2011ರಲ್ಲಿ ಮುಂಬೈ ಸೇರಿದ್ದ ರೋಹಿತ್, ಫ್ರಾಂಚೈಸಿ ಪರ ಹೆಚ್ಚು ಪಂದ್ಯ (201) ಮತ್ತು 5000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಯಾವೊಬ್ಬ ಆಟಗಾರ ಎಂಐ ಪರ ಈ ದಾಖಲೆ ಹೊಂದಿಲ್ಲ. ತಂಡದ ಚುಕ್ಕಾಣಿ ಹಿಡಿದ ನಂತರ ಐದು ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅದ್ಭುತ ದಾಖಲೆಗಳ ಹೊರತಾಗಿಯೂ ಅವರನ್ನು ನಾಯಕತ್ವದಿಂದ ಕಿತ್ತು ಹಾಕಲಾಯಿತು. ಬದಲಿಗೆ ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಲಾಯಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಹಿನ್ನಡೆ ಎದುರಿಸಲು ಕಾರಣವಾಯಿತು.

ಅಭಿಮಾನಿಗಳ ಕೋಪವೂ ತಣ್ಣಗಾಗಿಲ್ಲ

ಹಾರ್ದಿಕ್​ಗೆ ಕ್ಯಾಪ್ಟನ್ಸಿ ನೀಡಿ ಹಲವು ತಿಂಗಳೇ ಕಳೆದರೂ ಅಭಿಮಾನಿಗಳ ಕೋಪ ಇನ್ನೂ ತಣ್ಣಗಾಗಿಲ್ಲ. ಮೈದಾನದಲ್ಲಿ 'ರೋಹಿತ್ ರೋಹಿತ್' ಘೋಷಣೆಗಳ ಕೂಗು ಹಾರ್ದಿಕ್​ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಲಿ ಮತ್ತು ಮಾಜಿ ಕ್ರಿಕೆಟರ್​ಗಳು ಅಭಿಮಾನಿಗಳಿಗೆ ಮನವಿ ಮಾಡಿದರೂ, ಕೂಗುವುದನ್ನು ಮಾತ್ರ ನಿಲ್ಲಿಸಿಲ್ಲ. ಇದು ಹಾರ್ದಿಕ್​ಗೆ ದೊಡ್ಡ ಮುಖಭಂಗವನ್ನುಂಟು ಮಾಡಿದೆ. ಮತ್ತೆ ರೋಹಿತ್​ಗೆ ನಾಯಕತ್ವ ನೀಡಿ ಎಂಬ ಅಭಿಯಾನ ಕೂಡ ಆರಂಭಿಸಿದ್ದಾರೆ.

ಅದೇ ವರದಿಯ ಪ್ರಕಾರ, ರೋಹಿತ್ ಮತ್ತು ಹಾರ್ದಿಕ್ ಪ್ರಮುಖ ನಿರ್ಧಾರಗಳ ಬಗ್ಗೆ ನಿರಂತರ ಜಗಳವಾಡುತ್ತಿರುತ್ತಾರೆ. ಇದು ತಂಡದ ವಾತಾವರಣಕ್ಕೆ ಅಡ್ಡಿಯಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ಎಂಐ ಆಟಗಾರರೊಬ್ಬರು ಮಾಹಿತಿ ನೀಡಿರುವ ಕುರಿತು ನ್ಯೂಸ್ 24 ಉಲ್ಲೇಖಿಸಿದೆ ಎಂದು ರಿಪಬ್ಲಿಕ್ ವರ್ಲ್ಡ್ ವರದಿ ಮಾಡಿದೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ರೋಹಿತ್ ಶರ್ಮಾ ಮುಂಬೈ ತಂಡ ತೊರೆಯಲು ಸಿದ್ಧರಾಗಿದ್ದಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಇವರಿಬ್ಬರ ವೈಮನಸ್ಸು ಮೈದಾನದಲ್ಲಿ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

ಮೈದಾನದಲ್ಲಿ ಮುಂಬೈ ಇಂಡಿಯನ್ಸ್‌ ಪ್ರದರ್ಶನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಸತತ 3 ಸೋಲಿನೊಂದಿಗೆ ಆರಂಭವಾದ ಮುಂಬೈ, ಗೆಲುವಿನ ಲಯಕ್ಕೆ ಮರಳಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಪ್ರತಿಕೂಲ ವಾತಾವರಣದ ಹೊರತಾಗಿ ಪಾಂಡ್ಯ, ಅನಗತ್ಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಿಗೆ ಹೊಸ ಚೆಂಡು ನೀಡದೆ, ತಾನೆ ಅಥವಾ ಅನಾನುಭವಿಗಳಿಂದ ಮೊದಲ ಓವರ್​​ ಬೌಲಿಂಗ್​ ಮಾಡಿಸುತ್ತಿದ್ದಾರೆ. ಈ ನಿರ್ಧಾರವು ಸಹ ಮುಂಬೈ ಅಭಿಮಾನಿಗಳಿಗೆ ತೃಪ್ತಿ ನೀಡಿಲ್ಲ.

ಮುಂದಿನ ವರ್ಷ ಐಪಿಎಲ್ ತೊರೆಯುವ ಸಾಧ್ಯತೆ?

ಪ್ರಸ್ತುತ ಮುಂಬೈ ಇಂಡಿಯನ್ಸ್ ರೋಹಿತ್​ ತೊರೆಯುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಅವರು ಪ್ರಸಕ್ತ ಆವೃತ್ತಿಯನ್ನೇ ತೊರೆಯುತ್ತಾರಾ ಎನ್ನುವುದರ ಕುರಿತು ಸ್ಪಷ್ಟತೆ ಇಲ್ಲ. ಇನ್ನೂ ಕೆಲವು ವರದಿಗಳು 2025ರ ಐಪಿಎಲ್ ಮೆಗಾ ಹರಾಜಿಗೆ ರೋಹಿತ್ ಶರ್ಮಾ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. 2024ರ ಐಪಿಎಲ್​ ಆವೃತ್ತಿಯಲ್ಲಿ ಸಂಪೂರ್ಣವಾಗಿ ಆಡಿದ ಬಳಿಕ ರೋಹಿತ್​ 2025ರ ಹರಾಜಿಗೆ ತಂಡವನ್ನು ತೊರೆಯಲಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಒಂದು ಗೆಲುವು ತಂಡದ ಸನ್ನಿವೇಶ ಬದಲಿಸಿದರೂ ಅಚ್ಚರಿ ಇಲ್ಲ. ನೀನೇಂತೀರಾ?

IPL_Entry_Point