ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಪಂಚ್; ಭಾರತದ ಸೋಲಿಗೆ ರೋಹಿತ್-ಕೊಹ್ಲಿ ವೈಫಲ್ಯ ಸೇರಿ 5 ಕಾರಣಗಳು
Indias five reasons for loss: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 184 ರನ್ಗಳ ಅಂತರದಿಂದ ಸೋಲಿಗೆ ಶರಣಾಗಿದೆ. ಆದರೆ ಈ ಸೋಲಿಗೆ ಕಾರಣ ಏನೆಂಬುದನ್ನು ಈ ಮುಂದೆ ನೋಡೋಣ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಮತ್ತೊಂದು ಸೋಲಿಗೆ ಶರಣಾಗಿದೆ. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ 5ನೇ ದಿನದಾಟದಲ್ಲಿ 340 ರನ್ಗಳ ಗುರಿ ಬೆನ್ನಟ್ಟಲಾಗದೆ 184 ರನ್ಗಳ ಅಂತರದಿಂದ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದೀಗ ಪ್ರತಿಷ್ಠಿತ ಸರಣಿಯಲ್ಲಿ 2-1 ಅಂತರದಿಂದಲೂ ಹಿನ್ನಡೆ ಅನುಭವಿಸಿದೆ. ಹೀಗಾಗಿ ಸರಣಿ ಉಳಿವಿಗೆ ಮುಂದಿನ ಪಂದ್ಯ ಗೆಲ್ಲುವುದು ಅಗತ್ಯ. ಬ್ಯಾಟಿಂಗ್ನಲ್ಲಿ ಯಶಸ್ವಿ ಜೈಸ್ವಾಲ್, ನಿತೀಶ್ ರೆಡ್ಡಿ, ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದವರ ಪ್ರದರ್ಶನ ನೆಲ ಕಚ್ಚಿದ್ದ ಹಿನ್ನೆಲೆ ಮಹತ್ವದ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಹಾಗಾದರೆ ಪಂದ್ಯದಲ್ಲಿ ಭಾರತ ತಂಡದ ತಪ್ಪುಗಳೇನು?
1. ರೋಹಿತ್-ಕೊಹ್ಲಿ ಮತ್ತೆ ವಿಫಲ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರು ಅನುಭವಿಗಳು. ಆದರೆ ಅವರೇ ತಂಡದ ಹಿನ್ನಡೆಗೆ ಕಾರಣವಾಗುತ್ತಿರುವುದು ಬೇಸರದ ಸಂಗತಿ. ಪ್ರತಿ ಪಂದ್ಯದಲ್ಲೂ ಅವರ ಪ್ರದರ್ಶನ ಕಳೆಗುಂದುತ್ತಿದೆ. ರೋಹಿತ್ ಎರಡೂ ಇನ್ನಿಂಗ್ಸ್ಗಳಲ್ಲಿ ಎರಡಂಕಿ (3, 9) ದಾಟಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಇರಲಿ, ಅವರ ನಾಯಕತ್ವದಲ್ಲೂ ಧಮ್ ಇರಲಿಲ್ಲ. ಮತ್ತೊಂದೆಡೆ ವಿರಾಟ್ ಕೊಹ್ಲಿ ತನ್ನ ಹಳೆಯ ಬ್ಯಾಟಿಂಗ್ ಖದರ್ ಮರೆತಿದ್ದಾರೆ. 36 ಮತ್ತು 3 ರನ್ ಸಿಡಿಸಿದ ಕೊಹ್ಲಿ ಪದೆಪದೇ ಒಂದೇ ರೀತಿ ಔಟ್ ಆಗುತ್ತಿದ್ದಾರೆ. ಇದರಿಂದ ಇಬ್ಬರು ಹೊರಬರದಿದ್ದರೆ, ಅವರ ಟೆಸ್ಟ್ ವೃತ್ತಿಜೀವನ ಬೇಗನೇ ಅಂತ್ಯವಾಗುವುದು ನಿಶ್ಚಿತ.
ಬುಮ್ರಾ ಹೊರತುಪಡಿಸಿ ಮಿಂಚದ ಬೌಲರ್ಸ್
ಈ ಸರಣಿಯುದ್ದಕ್ಕೂ ಟೀಮ್ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚುತ್ತಿರುವುದು ಜಸ್ಪ್ರೀತ್ ಬುಮ್ರಾ ಮಾತ್ರ. ಅವರು 4 ಪಂದ್ಯಗಳಲ್ಲಿ 30 ವಿಕೆಟ್ ಕಿತ್ತಿದ್ದಾರೆ. ಎಂಸಿಜಿ ಮೈದಾನದಲ್ಲೂ ಅವರದ್ದೇ ಹವಾ ಇತ್ತು. ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ನಾಲ್ವರು 2 ಇನ್ನಿಂಗ್ಸ್ ಸೇರಿ ಪಡೆದಿದ್ದು 10 ವಿಕೆಟ್, ಬುಮ್ರಾ ಒಬ್ಬರೆ 9 ವಿಕೆಟ್ ಕಿತ್ತರು. ಬುಮ್ರಾ ಅವರಂತೆಯೇ ಅಬ್ಬರಿಸಿದ್ದರೆ ಪಂದ್ಯಕ್ಕೆ ತಿರುವು ಸಿಗುತ್ತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಸರಣಿಯಲ್ಲಿ ಬೌಲರ್ಗಳ ವೈಫಲ್ಯ ಎದ್ದು ಕಾಣುತ್ತಿದೆ.
3. ಕ್ಯಾಚ್ಗಳು ಡ್ರಾಪ್, 91/6 ಆಗಿದ್ದಾಗ ನಿಯಂತ್ರಿಸದ ಭಾರತ
ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡದ ಎಸಗಿದ ದೊಡ್ಡ ಪ್ರಮಾದ ಎಂದರೆ ಕ್ಯಾಚ್ಗಳನ್ನು ಡ್ರಾಪ್ ಮಾಡಿದ್ದು. ಯಶಸ್ವಿ ಜೈಸ್ವಾಲ್ ಅವರು ಸುಲಭವಾದ ಮೂರು ಕ್ಯಾಚ್ ಕೈ ಚೆಲ್ಲಿದರೆ, ಮೊಹಮ್ಮದ್ ಸಿರಾಜ್ ಕಷ್ಟಕರವಾದ ಕ್ಯಾಚ್ ಅನ್ನು ಬಿಟ್ಟರು. ಇದರ ಜೊತೆಗೆ ಆಸ್ಟ್ರೇಲಿಯಾ 91ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ವೇಳೆ ಪಂದ್ಯ ಗೆಲ್ಲಲು ದೊಡ್ಡ ಅವಕಾಶ ಹೊಂದಿತ್ತು. ಆದರೆ ಈ ವೇಳೆ ಆಸೀಸ್ ತಂಡವನ್ನು ನಿಯಂತ್ರಿಸಲು ಬೌಲರ್ಗಳು ವಿಫಲರಾದರು. ಅಲ್ಲದೆ, ತಂಡದ ಮೊತ್ತ 99 ಆಗಿದ್ದಾಗ ಮಾರ್ನಸ್ ಲಬುಶೇನ್ ಕ್ಯಾಚ್ ಡ್ರಾಪ್ ಮಾಡಲಾಗಿತ್ತು. ಇದೆಲ್ಲದರ ಪರಿಣಾಮ 234 ರನ್ ಗಳಿಸಲು ಸಾಧ್ಯವಾಯಿತು. ಹಾಗಾಗಿ 340 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
4. ರಿಷಭ್ ಪಂತ್ ಕೆಟ್ಟ ಶಾಟ್ ಆಯ್ಕೆ
ಸಂಕಷ್ಟದಲ್ಲಿದ್ದ ಸಮಯದಲ್ಲಿ ತಂಡವನ್ನು ರಕ್ಷಿಸುವ ಕೆಲಸಕ್ಕೆ ಕೈ ಹಾಕಬೇಕಿದ್ದ ರಿಷಭ್ ಪಂತ್ ಕೆಟ್ಟ ಶಾಟ್ಗಳ ಆಯ್ಕೆ ಮಾಡಿದ್ದು ಸಹ ಸೋಲಿಗೆ ಕಾರಣವಾಯಿತು. ಎರಡು ಇನ್ನಿಂಗ್ಸ್ಗಳಲ್ಲೂ ಇದನ್ನೇ ಮಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ 27 ರನ್ ಸಿಡಿಸಿದ್ದ ಸಮಯದಲ್ಲಿ ಸ್ಕೂಪ್ ಶಾಟ್ಗೆ ಕೈ ಸುಟ್ಟುಕೊಂಡರು. ಎರಡನೇ ಇನ್ನಿಂಗ್ಸ್ನಲ್ಲಿ 30 ರನ್ ಗಳಿಸಿದ್ದ ಸಮಯದಲ್ಲಿ ಮತ್ತೆ ಕೆಟ್ಟ ಹೊಡೆತಕ್ಕೆ ಕೈ ಹಾಕಿದರು. ಎರಡೂ ಇನ್ನಿಂಗ್ಸ್ಗಳಲ್ಲಿ ಅವರು ಬ್ಯಾಟಿಂಗ್ನಲ್ಲಿ ಸುಧಾರಿಸಿದ್ದರು. ಆದರೆ ತನಗೆ ತಾನೇ ಮಾಡಿಕೊಂಡ ಎಡವಟ್ಟುಗಳಿಂದ ತಂಡಕ್ಕೆ ದೊಡ್ಡ ನಷ್ಟವಾಯಿತು. ಒಂದು ವೇಳೆ ಕೆಟ್ಟ ಶಾಟ್ ಆಡದೆಯೇ ಇದ್ದಿದ್ದರೆ ಕೆಲ ಹೊತ್ತು ಕ್ರೀಸ್ನಲ್ಲಿ ಇರುತ್ತಿದ್ದರು. ಇವರು ಔಟಾದ ನಂತರ ಭಾರತ ತಂಡ ಬೇಗನೇ ಆಲೌಟ್ ಆಯಿತು.
5. ಜೈಸ್ವಾಲ್-ಆಕಾಶ್ ವಿವಾದಾತ್ಮಕ ನಿರ್ಧಾರ
ಯಶಸ್ವಿ ಜೈಸ್ವಾಲ್ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾಗಲೂ ಟೀಮ್ ಇಂಡಿಯಾ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸ್ಥಿತಿಯಲ್ಲಿತ್ತು. ಆದಾಗ್ಯೂ, ಯಶಸ್ವಿ ಅವರು ವಿವಾದಾತ್ಮಕ ಔಟ್ಗೆ ಬಲಿಯಾದರು. ಏಕೆಂದರೆ ಅಲ್ಟ್ರಾ ಎಡ್ಜ್ನಲ್ಲಿ ಬ್ಯಾಟ್ಗೆ ಚೆಂಡು ತಾಗದೆ ಇರುವುದು ಸ್ಪಷ್ಟವಾಗಿ ಕಂಡರೂ ಮೂರನೇ ಅಂಪೈರ್ ಔಟ್ ನೀಡಿದರು. ಜೈಸ್ವಾಲ್ 84 ರನ್ ಸಿಡಿಸಿ ಪಂದ್ಯವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಆದರೆ ಅಂಪೈರ್ ತೀರ್ಮಾನದಿಂದ ಪಂದ್ಯ ತಿರುವು ಪಡೆದುಕೊಂಡಿತು. ಆಕಾಶ್ ದೀಪ್ ಅವರದ್ದೂ ಹೀಗೆ ಆಯಿತು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope