ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್, ರಣಜಿ ಟ್ರೋಫಿ ಆಡಬೇಕು; ಮಾಜಿ ಕ್ರಿಕೆಟಿಗರ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್, ರಣಜಿ ಟ್ರೋಫಿ ಆಡಬೇಕು; ಮಾಜಿ ಕ್ರಿಕೆಟಿಗರ ಸಲಹೆ

ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್, ರಣಜಿ ಟ್ರೋಫಿ ಆಡಬೇಕು; ಮಾಜಿ ಕ್ರಿಕೆಟಿಗರ ಸಲಹೆ

ಭಾರತ ತಂಡದ ಆಯ್ಕೆದಾರರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಬೆಂಬಲಿಸುವುದಾದರೆ, ಅವರಿಬ್ಬರೂ ಮೊದಲು ಕೌಂಟಿ ಕ್ರಿಕೆಟ್ ಆಡಬೇಕೆಂದು ಸಂಜಯ್ ಮಂಜ್ರೇಕರ್ ಒತ್ತಾಯಿಸಿದ್ದಾರೆ. ಇದೇ ವೇಳೆ, ರೋಹಿತ್‌ ಶರ್ಮಾ ರಣಜಿ ಟ್ರೋಫಿಯಲ್ಲಿ ಆಡಬೇಕೆಂದು ಸುನಿಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ.

ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಬೇಕು; ಮಾಜಿ ಕ್ರಿಕೆಟಿಗರ ಸಲಹೆ
ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಬೇಕು; ಮಾಜಿ ಕ್ರಿಕೆಟಿಗರ ಸಲಹೆ (AFP)

ಭಾರತ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟರ್‌ಗಳು, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ದಿಗ್ಗಜರೆಂದು ಕರೆಸಿಕೊಳ್ಳುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟ್‌ ಸದ್ದು ಮಾಡುತ್ತಿಲ್ಲ. ಸರಣಿಯ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮರಳಿದ ನಂತರ ಒಂದೇ ಒಂದು ಪಂದ್ಯದಲ್ಲಿ ರೋಹಿತ್‌ ಶರ್ಮಾ ಸಾಮರ್ಥ್ಯ ಪ್ರದರ್ಶಿಸಿಲ್ಲ. ಪ್ರಸ್ತುತ ನಡೆಯುತ್ತಿರುವ ಪ್ರವಾಸದಲ್ಲಿ ರೋಹಿತ್ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ 10 ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಅಂತಿಮವಾಗಿ ಸಿಡ್ನಿ ಟೆಸ್ಟ್‌ ಪಂದ್ಯದ ಆಡುವ ಬಳಗದಿಂದ ಹೊರಗುಳಿದಿದ್ದಾರೆ.

ಅತ್ತ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಆಕರ್ಷಕ ಶತಕ ಗಳಿಸಿದ್ದರು.‌ ಆಸೀಸ್‌ ನೆಲದಲ್ಲಿ ಮತ್ತೊಮ್ಮೆ ಕಿಂಗ್‌ ಅಬ್ಬರ ಆರಂಭವಾಯ್ತು. ಆದರೆ ಅಂದಿನಿಂದ, ಅವರ ಫಾರ್ಮ್‌ ಸಂಪೂರ್ಣ ಕಳಪೆಯಾಗಿದೆ. ಶಾಟ್ ಆಯ್ಕೆಯಲ್ಲಿ ಗೊಂದಲದಿಂದಿದ್ದಾರೆ. ಆಫ್ ಸ್ಟಂಪ್‌ನ ಹೊರಗಿನ ಎಸೆತಗಳು ಅವರನ್ನು ಅಸ್ಥಿರಗೊಳಿಸುತ್ತಿದ್ದು, ಪ್ರತಿ ಬಾರಿಯೂ ಒಂದೇ ರೀತಿ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಎದುರಾಳಿ ತಂಡ ಕೂಡಾ ಅವರ ದೌರ್ಬಲ್ಯದ ಲಾಭ ಪಡೆಯುತ್ತಿದೆ.

ಕೊಹ್ಲಿ ಹಾಗೂ ರೋಹಿತ್‌ ಫಾರ್ಮ್‌ ಸದ್ಯ ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ಹಾಗೂ ಅಭಿಮಾನಿಗಳ ಕಾಳಜಿಯಾಗಿದೆ. ಈ ನಡುವೆ ಮಾಜಿ ಕ್ರಿಕೆಟಿಗರು ದಿಗ್ಗಜ ಆಟಗಾರರಿಗೆ ಮಹತ್ವದ ಸಲಹೆ ನೀಡುತ್ತಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಕೊಹ್ಲಿಯ ಪ್ರಸ್ತುತ ಫಾರ್ಮ್ ಅನ್ನು ಮೌಲ್ಯಮಾಪನ ಮಾಡಿದ್ದಾರೆ. ಸ್ಟಾರ್‌ ಆಟಗಾರನಿಗೆ ತಾಂತ್ರಿಕ ಸಮಸ್ಯೆ ಇದೆ ಎಂದು ಅಭಿಪ್ರಾಯಪಟ್ಟರು. “ಕೊಹ್ಲಿ ಫಿಟ್‌ ಆಟಗಾರ. ಅವರು ಮೈದಾನಕ್ಕೆ ಬಂದಾಗಲೆಲ್ಲಾ ತಮ್ಮಿಂದ ಸಾಧ್ಯವಾದ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಈಗೀಗ ಅವರಲ್ಲಿದ್ದ ವಿಶ್ವಾಸ ಕ್ಷೀಣಿಸುತ್ತಿದೆ. ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಸ್ಪಷ್ಟವಾಗಿ ತಾಂತ್ರಿಕ ಸಮಸ್ಯೆ ಕಾಣುತ್ತಿದೆ. ಈಗ ಆತ್ಮವಿಶ್ವಾಸದ ಕೊರತೆಯೂ ಇದೆ” ಎಂದು ಹೇಳಿದ್ದಾರೆ.

ಕೌಂಟಿ ಕ್ರಿಕೆಟ್ ಆಡಿ

ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯ ನಂತರ ಟೆಸ್ಟ್ ಸರಣಿ ಆಡಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಆಯ್ಕೆದಾರರು ರೋಹಿತ್‌ ಹಾಗೂ ಕೊಹ್ಲಿ ಆಯ್ಕೆ ಮಾಡುವುದು ಬಹುತೇಕ ಖಚಿತ. ಹೀಗಾಗಿ ರೋಹಿತ್ ಮತ್ತು ಕೊಹ್ಲಿ 'ಕೌಂಟಿ ಕ್ರಿಕೆಟ್ ಆಡಬೇಕು' ಎಂದು ಮಂಜ್ರೇಕರ್ ಒತ್ತಾಯಿಸಿದ್ದಾರೆ.

“ಇಂಗ್ಲೆಂಡ್‌ನಲ್ಲಿ ಮುಂದಿನ ಸರಣಿ ಆಡುವುದು ವಿರಾಟ್‌ಗೆ ಅಷ್ಟು ಸುಲಭವಲ್ಲ. ಅಲ್ಲಿನ ಪಿಚ್‌ ಸ್ಥಿತಿ ಹೆಚ್ಚೂ ಕಡಿಮೆ ಆಸ್ಟ್ರೇಲಿಯದ್ದೇ ಆಗಿರುತ್ತದೆ. ಆಫ್ ಸ್ಟಂಪ್ ಹೊರಗೆ ಸ್ವಿಂಗ್ ಚೆಂಡುಗಳು ಇರುತ್ತವೆ. ರೋಹಿತ್ ಮತ್ತು ವಿರಾಟ್ ಇಬ್ಬರೂ ಮುಂದುವರಿಯಲು ಬಯಸಿದರೆ ಮತ್ತು ಆಯ್ಕೆದಾರರು ಕೂಡಾ ಆಯ್ಕೆ ಮಾಡುವುದಾದರೆ, ಇಬ್ಬರೂ ಕೌಂಟಿ ಕ್ರಿಕೆಟ್ ಆಡುವುದು ಒಳ್ಳೆಯದು. ಅವರು ಮುಂದಿನ ಸವಾಲಿಗೆ ಸಿದ್ಧರಿದ್ದಾರೆಯೇ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕೆಂದು ನಾನು ಬಯಸುತ್ತೇನೆ,” ಎಂದು ಅವರು ಹೇಳಿದರು.

ರಣಜಿ ಟ್ರೋಫಿ ಆಡಲು ಸಲಹೆ ನೀಡಿದ ಗವಾಸ್ಕರ್

ರೋಹಿತ್‌ ಶರ್ಮಾ ಟೆಸ್ಟ್ ತಂಡಕ್ಕೆ ಮರಳಲು ಬಯಸಿದರೆ ರಣಜಿ ಟ್ರೋಫಿಯ ನಾಕೌಟ್ ಪಂದ್ಯಗಳನ್ನು ಆಡಬೇಕೆಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. “ರಣಜಿ ಟ್ರೋಫಿಯಲ್ಲಿ ಮುಂಬೈ ನಾಕೌಟ್ ಹಂತಕ್ಕೆ ಅರ್ಹತೆ ಪಡೆದರೆ, ರೋಹಿತ್ ಕೆಲವು ಪಂದ್ಯಗಳನ್ನು ಆಡಬೇಕು. ರಣಜಿ ಟ್ರೋಫಿಯಲ್ಲಿ ಆಡುವುದು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ” ಎಂದು ಗವಾಸ್ಕರ್ ಹೇಳಿದ್ದಾರೆ.

Whats_app_banner