ಹಾಲಿಗೆ ಬಿದ್ದ ನೊಣ ತೆಗೆದಂತೆ ರೋಹಿತ್ ಶರ್ಮಾ ಹೆಸರನ್ನು ತೆಗೆದುಬಿಟ್ಟರಲ್ಲ; ಅಧಿಕೃತ ತಂಡದ ಶೀಟ್‌ನಲ್ಲಿ ಹಿಟ್ಮ್ಯಾನ್ ಹೆಸರು ಕಾಣೆ!
Rohit Sharma: 17 ವರ್ಷಗಳ ಕಾಲ ಭಾರತ ತಂಡದ ಪರ ಆಡಿರುವ ರೋಹಿತ್ ಶರ್ಮಾ ಅವರ ಹೆಸರನ್ನು ಹಾಲಿಗೆ ಬಿದ್ದ ನೊಣ ತೆಗೆದಂತೆ ತೆಗೆದು ಹಾಕಲಾಗಿದೆ. ಹೌದು, ಅಧಿಕೃತ ತಂಡದ ಶೀಟ್‌ನಲ್ಲಿ ಹಿಟ್ಮ್ಯಾನ್ ಹೆಸರು ಕಾಣೆಯಾಗಿದೆ.
ಹಾಲಿಗೆ ಬಿದ್ದಿರುವ ನೊಣವನ್ನು ಹೇಗೆ ತೆಗೆದು ಬಿಸಾಡುತ್ತಾರೋ, ಅದೇ ರೀತಿ 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚಿರುವ ರೋಹಿತ್ ಶರ್ಮಾ ಹೆಸರನ್ನು ಸುಲಭವಾಗಿ ತೆಗೆದು ಹಾಕಲಾಗಿದೆ. ಹೌದು, ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಆಡುವ 11ರ ಬಳಗದ ಜತೆಗೆ 16 ಸದಸ್ಯರ ಅಧಿಕೃತ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಕಾಣೆಯಾಗಿದೆ. ಟೀಮ್ ಶೀಟ್‌ನಲ್ಲಿ ಮೀಸಲು ಆಟಗಾರರ ಪಟ್ಟಿಯಲ್ಲೂ ರೋಹಿತ್ ಹೆಸರು ಕಾಣಿಸಿಕೊಂಡಿಲ್ಲ. ಇದು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಟ್ಟಿದ್ದಕ್ಕಿಂತಲೂ ದೊಡ್ಡ ಸದ್ದು ಮಾಡುತ್ತಿದೆ. ತಂಡದ ಸದಸ್ಯರ ಅಧಿಕೃತ ಶೀಟ್ ಇದೀಗ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್‌ನ ಟಾಸ್ ನಂತರ ಬಿಸಿಸಿಐ ಹಂಚಿಕೊಂಡ ಭಾರತದ ಅಧಿಕೃತ ತಂಡದ ಶೀಟ್ನಿಂದ ರೋಹಿತ್ ಶರ್ಮಾ ಹೆಸರು ನಿಗೂಢವಾಗಿ ಕಣ್ಮರೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಾಯಕತ್ವ ವಹಿಸಿಕೊಂಡ ಜಸ್ಪ್ರೀತ್ ಬುಮ್ರಾ ಟಾಸ್ ಅವಧಿಯಲ್ಲಿ ಮಾತನಾಡಿ, 'ರೋಹಿತ್ ಅವರು ಸ್ವತಃ ಸರಣಿಯ ಅಂತಿಮ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ ಎಂದು ಹೇಳಿದರು. ಆದರೆ, ಶೀಟ್‌ನಲ್ಲಿ ರೋಹಿತ್ ವಿಶ್ರಾಂತಿ ಪಡೆದಿರುವುದು ನಿಜವೇ ಆದರೆ, ಬಿಸಿಸಿಐ ಯಾವುದೇ ಸಾಮಾಜಿಕ ಮಾಧ್ಯಮದ ಪೋಸ್ಟ್ ಹಂಚಿಕೊಂಡಿಲ್ಲ ಏಕೆ? ಎಂಬುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಪಂದ್ಯಕ್ಕೂ ಮುನ್ನಾ ದಿನವೇ ರೋಹಿತ್ ಶರ್ಮಾ ಐದನೇ ಟೆಸ್ಟ್ ಆಡದಿರುವ ಸುಳಿವು ಸಿಕ್ಕಿತ್ತು. ಮೊದಲ ಸುಳಿವು ಪತ್ರಿಕಾಗೋಷ್ಠಿಗೆ ಹೆಡ್ಕೋಚ್ ಗೌತಮ್ ಗಂಭೀರ್ ಬಂದದ್ದು. 2ನೇ ಸುಳಿವು ರೋಹಿತ್ ಪ್ಲೇಯಿಂಗ್ 11ನಲ್ಲಿ ಆಡುತ್ತಾರಾ ಎಂಬುದಕ್ಕೆ ಪಿಚ್ ನೋಡಿ ತಂಡ ಅಂತಿಮಗೊಳಿಸುತ್ತೇವೆ ಎಂದು ಗಂಭೀರ್ ಕೊಟ್ಟ ಹೇಳಿಕೆ. ಮೂರನೇ ಸುಳಿವು ರೋಹಿತ್ ಅಭ್ಯಾಸದಿಂದ ದೂರ ಉಳಿದಿದ್ದು. ನಾಲ್ಕನೇ ಸುಳಿವು ಅಭ್ಯಾಸದ ವೇಳೆ ಬುಮ್ರಾ-ಗಂಭೀರ್ ಮಾತ್ರ ಇದ್ದದ್ದು, ಐದನೇ ಸುಳಿವು ತಾನು ವಿಶ್ರಾಂತಿ ಪಡೆಯುತ್ತೇನೆ ಎಂದು ಗಂಭೀರ್ಗೆ ತಿಳಿಸಿದ್ದು. ಆದರೆ ಇದು ಬಹುತೇಕ ಖಚಿತಪಡಿಸಿತ್ತು. ಇದೀಗ ಇಂದು (ಜನವರಿ 3) ನಡೆದದ್ದು ಕೂಡ ಅದೇ.
ಇದು ಬಲವಂತದ ನಿವೃತ್ತಿಯೇ?
ಸಿಡ್ನಿ ಟೆಸ್ಟ್ ಪಂದ್ಯದ ಬೆಳಿಗ್ಗೆ ಜಸ್ಪ್ರೀತ್ ಬುಮ್ರಾ ಟಾಸ್ಗೆ ಬಂದ ತಕ್ಷಣ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ಎಲ್ಲರಿಗೂ ಸ್ಪಷ್ಟವಾಗಿತ್ತು. ರೋಹಿತ್ ಸ್ವತಃ ವಿಶ್ರಾಂತಿ ಪಡೆದಿದ್ದಾರೆ ಎಂದು ಬುಮ್ರಾ ಹೇಳಿದರು. ಇದೆಲ್ಲವೂ ಸರಿ ಎನಿಸುತ್ತದೆ. ಆದರೆ ಅವರ ಹೆಸರು ತಂಡದ ಶೀಟ್ನಿಂದಲೇ ನಾಪತ್ತೆಯಾಗಿರುವುದು ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವನ್ನು ಸ್ಪಷ್ಟಪಡಿಸುತ್ತದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಹಾಲಿನಿಂದ ನೊಣ ತೆಗೆದಂತೆ ರೋಹಿತ್ ಹೆಸರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಿದರೆ ತಪ್ಪೇನಲ್ಲ. ಹಾಗೆಯೇ ಇದನ್ನು ಬಲವಂತ ನಿವೃತ್ತಿ ಎಂದರೂ ತಪ್ಪಿಲ್ಲ. ಕಳಪೆ ಪ್ರದರ್ಶನ ನೀಡಿದ್ದರೆಂದ ಮಾತ್ರ ಅವಮಾನಿಸುವುದು ಸರಿಯಲ್ಲ.
ಆಸ್ಟ್ರೇಲಿಯಾ ವಿರುದ್ಧದ ಈ ಕೊನೆಯ ಟೆಸ್ಟ್ ಮುಕ್ತಾಯದ ನಂತರ ಮುಂದಿನ ಆರು ತಿಂಗಳ ಕಾಲ ಯಾವುದೇ ಟೆಸ್ಟ್ ಪಂದ್ಯವಿಲ್ಲ. ಕೆಲವು ವರದಿಗಳು ರೋಹಿತ್ ಟೆಸ್ಟ್ ವೃತ್ತಿಜೀವನ ಬಹುತೇಕ ಮುಗಿದಿದೆ ಎಂದೆಲ್ಲಾ ಬರೆದಿವೆ. ಸದ್ಯ ಪರಿಸ್ಥಿತಿ ನೋಡುತ್ತಿದ್ದರೆ, ರೋಹಿತ್ ಇನ್ಮುಂದೆ ಭಾರತ ಟೆಸ್ಟ್ ತಂಡದ ಭಾಗವಾಗುವುದು ಬಹುತೇಕ ಅನುಮಾನ ಎಂಬ ಸೂಚನೆಯೂ ಸಿಗುತ್ತಿದೆ. ಸಾಮಾನ್ಯವಾಗಿ, ಒಬ್ಬ ಆಟಗಾರನನ್ನು ಕೈಬಿಟ್ಟರೆ ಅವರ ಹೆಸರು ತಂಡದ ಶೀಟ್ನಲ್ಲಿರುತ್ತದೆ. ಆಕಾಶ್ ದೀಪ್ ಗಾಯಗೊಂಡಿರುವ ಕಾರಣ ಅವರ ಹೆಸರು ಶೀಟ್ನಲ್ಲಿಲ್ಲ ಎಂಬುದಕ್ಕೆ ಸ್ಪಷ್ಟ ಉತ್ತರ ಇದೆ. ಆದರೆ ರೋಹಿತ್ ಹೆಸರು ಏಕಿಲ್ಲ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅನುಮಾನ ಹುಟ್ಟಿಸಿದ ಟೀಮ್ ಮ್ಯಾನೇಜ್ಮೆಂಟ್ ನಡೆ!?
ವಿಶ್ರಾಂತಿ ಪಡೆದಿರುವ ಕಾರಣಕ್ಕೆ ಹೆಸರಿಲ್ಲ ಎನ್ನುವುದು ಹಲವರ ವಾದ. ಆದರೆ ಗಾಯಗೊಂಡರೆ ಅಥವಾ ತುರ್ತು ಕಾರಣದಿಂದ ತಂಡದಿಂದ ಬಿದ್ದರೆ ಮಾತ್ರ ಅಂತಹ ಆಟಗಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ. ಆದರೆ ಯಾವುದೇ ಕಾರಣ ಇಲ್ಲದಿದ್ದರೂ ವಿಶ್ರಾಂತಿ ಎಂಬ ಪಟ್ಟ ಕಟ್ಟಿರುವುದು ಅನುಮಾನ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಂತಹ ಆಟಗಾರನಿಗೆ ಈ ರೀತಿ ಅವಮಾನಿಸುವುದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಪ್ರಸ್ತುತ ಸರಣಿಯಲ್ಲಿ ರೋಹಿತ್ ಶರ್ಮಾ ಐದು ಇನ್ನಿಂಗ್ಸ್ಗಳಲ್ಲಿ ಗಳಿಸಿರುವುದು ಕೇವಲ 31 ರನ್ ಮಾತ್ರ. ಅವರು ಆಡಿದ ಕಳೆದ 8 ಟೆಸ್ಟ್ಗಳ 15 ಇನ್ನಿಂಗ್ಸ್ಗಳಲ್ಲಿ 10.93ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 164 ರನ್ ಗಳಿಸಿದ್ದಾರೆ. ಈ ಪೈಕಿ 31 ರನ್ಗಳು ಪ್ರಸ್ತುತ ನಡೆಯುತ್ತಿರುವ ಆಸೀಸ್ ಪ್ರವಾಸದಲ್ಲಿ ಬಂದಿರೋದು. ಇಲ್ಲಿ ಒಂದು ಸಲ ಮಾತ್ರ ಅವರು ಎರಡಂಕಿ ದಾಟಿದ್ದಾರೆ. ಮೆಲ್ಬೋರ್ನ್ನಲ್ಲಿ ವೈಫಲ್ಯದ ನಂತರ ರೋಹಿತ್ ಸರಾಸರಿ ಕೇವಲ 6.20 ಆಗಿತ್ತು. ಇದು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ (ಕನಿಷ್ಠ 5 ಇನ್ನಿಂಗ್ಸ್) ಪ್ರವಾಸಿ ನಾಯಕನ ಕನಿಷ್ಠ ಬ್ಯಾಟಿಂಗ್ ಸರಾಸರಿಯಾಗಿದೆ.