ಈ ವಿಶ್ವಕಪ್ ಕೂಡ ಸೋತರೆ ರೋಹಿತ್ ಶರ್ಮಾ ಸಮುದ್ರಕ್ಕೆ ಹಾರುತ್ತಾರೆ; ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ
Sourav Ganguly on Rohit Sharma: ಟಿ20 ವಿಶ್ವಕಪ್ 2024 ಫೈನಲ್‌ನಲ್ಲಿ ಭಾರತ ಸೋತರೆ ರೋಹಿತ್ ಶರ್ಮಾ ಬಾರ್ಬಡೋಸ್ ಸಾಗರಕ್ಕೆ ಜಿಗಿಯುತ್ತಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಸರಿಸುಮಾರು 7 ತಿಂಗಳ ಅವಧಿಯಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತೊಂದು ವಿಶ್ವಕಪ್ ಫೈನಲ್‌ನಲ್ಲಿ (T20 World Cup 2024) ಭಾರತ ತಂಡವನ್ನು (Team India) ಮುನ್ನಡೆಸಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ 50 ಓವರ್‌ಗಳ ವಿಶ್ವಕಪ್ ಫೈನಲ್‌ನಲ್ಲಿ (ODI World Cup 2023) ಭಾರತ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. ಅಂದು ಕೋಟ್ಯಂತರ ಭಾರತೀಯ ಆಟಗಾರರ ಕನಸು ಭಗ್ನಗೊಂಡಿತ್ತು. ಇದೀಗ ಚುಟುಕು ವಿಶ್ವಕಪ್ನಲ್ಲಿ ಟ್ರೋಫಿ ಎತ್ತಿಹಿಡಿದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಕನಸು ಸಾಕಾರಗೊಳಿಸಲು ಸಜ್ಜಾಗಿದ್ದಾರೆ.
ರೋಹಿತ್ ಪಾಲಿಗೆ ಇದೇ ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ. ಹೀಗಾಗಿ ಅವರು ಈ ಟ್ರೋಫಿ ಎತ್ತಿ ಹಿಡಿದು ಚುಟುಕು ಕ್ರಿಕೆಟ್ಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದ್ದಾರೆ. ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಭರವಸೆಯಲ್ಲಿರುವ ಸೌತ್ ಆಫ್ರಿಕಾ ಕೂಡ ಭಾರಿ ಸಿದ್ಧತೆ ನಡೆಸಿದೆ. ಇದರ ನಡುವೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದು, ಭಾರತ ಟಿ20 ವಿಶ್ವಕಪ್ ಸೋತರೆ ರೋಹಿತ್ ಬಾರ್ಬಡೋಸ್ ಸಾಗರಕ್ಕೆ ಜಿಗಿಯುತ್ತಾರೆ ಎಂದು ಹೇಳಿದ್ದಾರೆ.
ಏಳು ತಿಂಗಳಲ್ಲಿ ಎರಡು ವಿಶ್ವಕಪ್ ಫೈನಲ್ ಸೋಲುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರ ನಾಯಕತ್ವದಲ್ಲಿ ಕಳೆದ ನವೆಂಬರ್‌ನಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ ಸೋತಿದೆ. ಈಗ ಚುಟುಕು ವಿಶ್ವಕಪ್ ಕೂಡ ಸೋಲುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ಒಂದು ವೇಳೆ ಏಳು ತಿಂಗಳಲ್ಲಿ ತನ್ನ ನಾಯಕತ್ವದಲ್ಲಿ ಎರಡು ಫೈನಲ್‌ಗಳಲ್ಲಿ ಸೋತರೆ ರೋಹಿತ್ ಬಹುಶಃ ಬಾರ್ಬಡೋಸ್ ಸಾಗರಕ್ಕೆ ಜಿಗಿಯುತ್ತಾರೆ ಎಂದು ಗಂಗೂಲಿ ಪಿಟಿಐಗೆ ತಿಳಿಸಿದ್ದಾರೆ.
ರೋಹಿತ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಬ್ಯಾಟಿಂಗ್ನಲ್ಲೂ ಅದ್ಭುತವಾಗಿ ಮುಂದುವರೆದಿದ್ದಾರೆ ಎಂದು ಭಾವಿಸುತ್ತೇನೆ. ಅವರು ಮುಕ್ತರಾಗಿ ಆಡಬೇಕು. ನಾನು ಅವರಿಗೆ ಶುಭ ಹಾರೈಸುತ್ತೇನೆ. ರೋಹಿತ್ ಅವರು ಗೆಲ್ಲಲಿ ಎಂದು ನಾನು ಬಯಸುತ್ತೇನೆ. ದೊಡ್ಡ ಟೂರ್ನಿಯನ್ನು ಗೆಲ್ಲಲು ಸ್ವಲ್ಪ ಅದೃಷ್ಟವನ್ನೂ ಹೊಂದಿರಲಿದ್ದಾರೆ ಎಂದು ಭಾವಿಸುತ್ತೇವೆ ಎಂದು ಸೇರಿಸಿದ್ದಾರೆ.
ನಾಯಕತ್ವ ಬೇಡ ಎಂದಿದ್ದರು ಎಂದ ಗಂಗೂಲಿ
ವಿರಾಟ್ ನಾಯಕತ್ವ ತೊರೆದ ನಂತರ ರೋಹಿತ್ ನಾಯಕನಾಗಿದ್ದಾಗ ನಾನು ಬಿಸಿಸಿಐ ಅಧ್ಯಕ್ಷನಾಗಿದ್ದೆ. ಹಾಗಾಗಿ ಆತನ ಕ್ಯಾಪ್ಟನ್ಸಿ ಕುರಿತು ನನಗೆ ಯಾವುದೇ ಅಚ್ಚರಿ ಇಲ್ಲ. ಅಲ್ಲದೆ, ರೋಹಿತ್ ನಾಯಕನಾಗಲು ಇಷ್ಟವೂ ಇರಲಿಲ್ಲ. ಸಾಕಷ್ಟು ಮನವೊಲಿಸಿದ ನಂತರ ಅದಕ್ಕೆ ತಂಡದ ಜವಾಬ್ದಾರಿ ಹೊರಲು ನಿರ್ಧರಿಸಿದ್ದರು. ಅವರ ನಾಯಕತ್ವದಲ್ಲಿ ಭಾರತದ ತಂಡದ ಅಭಿವೃದ್ಧಿ ತುಂಬಾ ಖುಷಿ ನೀಡಿದೆ ಎಂದು ಸೌರವ್ ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ಕಪ್ ಗೆಲ್ಲೋದು ಕಷ್ಟ ಎಂದ ಮಾಜಿ ನಾಯಕ
ರೋಹಿತ್ ತನ್ನ ನಾಯಕತ್ವದಲ್ಲಿ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾರೆ. ಇದೊಂದು ದೊಡ್ಡ ಸಾಧನೆಯೂ ಹೌದು. ಐಪಿಎಲ್ನಲ್ಲಿ ಪ್ರಶಸ್ತಿ ಕೂಡ ಗೆಲ್ಲೋದು ಒಮ್ಮೆ ಕಷ್ಟವಾಗುತ್ತದೆ. ನಾನು ಹೇಳಿದ್ದನ್ನು ತಪ್ಪು ತಿಳಿಯಬೇಡಿ. ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್ ಉತ್ತಮ ಎಂದು ನಾನಿಲ್ಲಿ ಹೇಳುತ್ತಿಲ್ಲ ಎಂದು ಮಾಜಿ ನಾಯಕ ತಿಳಿಸಿದ್ದಾರೆ. ಆದರೆ, ಐಪಿಎಲ್ ಪ್ರಶಸ್ತಿ ಗೆಲ್ಲಬೇಕೆಂದರೆ ನೀವು 16 ರಿಂದ 17 ಪಂದ್ಯ ಗೆಲ್ಲಬೇಕು. ಆದರೆ, ವಿಶ್ವಕಪ್ ಗೆಲ್ಲಬೇಕೆಂದರೆ 8 ರಿಂದ 9 ಪಂದ್ಯ ಗೆಲ್ಲಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ