ಕಟಕ್​​ನಲ್ಲಿ ರೋಹಿತ್​ ಶರ್ಮಾ ಅಟ್ಯಾಕ್; 2ನೇ ಏಕದಿನದಲ್ಲೂ ಇಂಗ್ಲೆಂಡ್ ಸೋಲಿಸಿ ಸರಣಿಗೆ ಮುತ್ತಿಕ್ಕಿದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಕಟಕ್​​ನಲ್ಲಿ ರೋಹಿತ್​ ಶರ್ಮಾ ಅಟ್ಯಾಕ್; 2ನೇ ಏಕದಿನದಲ್ಲೂ ಇಂಗ್ಲೆಂಡ್ ಸೋಲಿಸಿ ಸರಣಿಗೆ ಮುತ್ತಿಕ್ಕಿದ ಭಾರತ

ಕಟಕ್​​ನಲ್ಲಿ ರೋಹಿತ್​ ಶರ್ಮಾ ಅಟ್ಯಾಕ್; 2ನೇ ಏಕದಿನದಲ್ಲೂ ಇಂಗ್ಲೆಂಡ್ ಸೋಲಿಸಿ ಸರಣಿಗೆ ಮುತ್ತಿಕ್ಕಿದ ಭಾರತ

India vs England 2nd ODI: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ನಾಲ್ಕು ವಿಕೆಟ್​ಗಳಿಂದ ಗೆದ್ದಿರುವ ಟೀಮ್ ಇಂಡಿಯಾ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

ಕಟಕ್​​ನಲ್ಲಿ ರೋಹಿತ್​ ಶರ್ಮಾ ಅಟ್ಯಾಕ್; 2ನೇ ಏಕದಿನದಲ್ಲೂ ಇಂಗ್ಲೆಂಡ್ ಸೋಲಿಸಿ ಸರಣಿಗೆ ಮುತ್ತಿಕ್ಕಿದ ಭಾರತ
ಕಟಕ್​​ನಲ್ಲಿ ರೋಹಿತ್​ ಶರ್ಮಾ ಅಟ್ಯಾಕ್; 2ನೇ ಏಕದಿನದಲ್ಲೂ ಇಂಗ್ಲೆಂಡ್ ಸೋಲಿಸಿ ಸರಣಿಗೆ ಮುತ್ತಿಕ್ಕಿದ ಭಾರತ (Surjeet Yadav)

ರೋಹಿತ್​ ಶರ್ಮಾ (119) ಅವರ ಶತಕ ವೈಭವದಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲೂ ಅಮೋಘ ಗೆಲುವು ಸಾಧಿಸಿದೆ. ಒಂದು ಪಂದ್ಯ ಬಾಕಿ ಇರುವಂತೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಟಿ20 ಸರಣಿ ಸೋಲಿನ ಬಳಿಕ ಒಡಿಐ ಸಿರೀಸ್​​ನಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದ್ದ ಇಂಗ್ಲೆಂಡ್​ ಉತ್ತಮ ಪ್ರದರ್ಶನ ನಡುವೆಯೂ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದೆ. ಅಲ್ಲದೆ, 300+ ರನ್ ಸಿಡಿಸಿಯೂ ಸೋತಿರುವುದರಲ್ಲೂ ಕೆಟ್ಟ ದಾಖಲೆ ಬರೆದಿದೆ. ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದ ಸತತ 7 ಏಕದಿನ ಸರಣಿಯಾಗಿದೆ.

ಕಟಕ್​ನ ಬಾರಾಬತಿ ಕ್ರಿಕೆಟ್​ ಮೈದಾನದಲ್ಲೂ ನಾಲ್ಕು ವಿಕೆಟ್​ಗಳಿಂದಲೇ ಜಯಭೇರಿ ಬಾರಿಸಿರುವ ಭಾರತ, ಇನ್ನೂ 33 ಎಸೆತಗಳನ್ನು ಉಳಿಸಿಯೇ ಚೇಸ್ ಮಾಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 49.5 ಓವರ್​ಗಳಲ್ಲಿ 304 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್ ನಷ್ಟಕ್ಕೆ 44.3 ಓವರ್​ಗಳಲ್ಲಿ 308 ರನ್ ಗಳಿಸಿತು.

305 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 16.4 ಓವರ್​​ಗಳಲ್ಲಿ 136 ರನ್​ಗಳು ಹರಿದುಬಂದವು. ಅರ್ಧಶತಕ ಸಿಡಿಸಿ ಆರಂಭಿಕ ರೋಹಿತ್​​ ಶರ್ಮಾಗೆ ಸಾಥ್ ನೀಡುತ್ತಿದ್ದ ಶುಭ್ಮನ್ ಗಿಲ್ (52 ಎಸೆತ, 9 ಬೌಂಡರಿ, 1 ಸಿಕ್ಸರ್) ಜೆಮಿ ಓವರ್ಟನ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಬಳಿಕ ಕಣಕ್ಕಿಳಿದ ಕೊಹ್ಲಿ 5 ರನ್​​ಗೆ ಸುಸ್ತಾಗಿ ನಿರಾಸೆ ಮೂಡಿಸಿದರು. ಇದರ ನಡುವೆಯೂ ರೋಹಿತ್​ ಅಬ್ಬರ ನಿಲ್ಲಲಿಲ್ಲ. ತನ್ನ ವಿರುದ್ಧ ಕೇಳಿ ಬಂದಿದ್ದ ಟೀಕೆಗಳ ವಿರುದ್ಧ ಸಿಡಿದೆದ್ದ ಹಿಟ್​​ಮ್ಯಾನ್ ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದರು. 

119 ರನ್ ಸಿಡಿಸಿ ಅದ್ಭುತ ಪುನರಾಗಮನ

ಕಳಪೆ ಫಾರ್ಮ್​ ಕಾರಣ ತನ್ನನ್ನು ನಿಂದಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು. 76 ಎಸೆತಗಳಲ್ಲಿ 32ನೇ ಏಕದಿನ ಶತಕ ಪೊರೈಸಿದ ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ 3ನೇ ವಿಕೆಟ್​ಗೆ 70 ರನ್​ಗಳ ಪಾಲುದಾರಿಕೆ ನೀಡಿದರು. 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್​ ಸಹಿತ 119 ರನ್ ಚಚ್ಚಿದ ರೋಹಿತ್​, ಲಿವಿಂಗ್​ಸ್ಟನ್ ಬೌಲಿಂಗ್​ನಲ್ಲಿ ಕ್ಯಾಚಿತ್ತರು.

ರೋಹಿತ್ ಔಟಾಗುವ ಹೊತ್ತಿಗೆ ಭಾರತ ಸುಸ್ಥಿತಿಯಲ್ಲಿತ್ತು. ಚೇಸ್ ಮಾಡಬೇಕಾದ ಗುರಿ ಕೂಡ ಎಸೆತಗಳಿಗಿಂತ ಕಡಿಮೆ ಇತ್ತು. ತದನಂತರದ ಬ್ಯಾಟರ್ಸ್ ರೋಹಿತ್​ ಹಾಕಿಕೊಟ್ಟ ಹಾದಿಯಲ್ಲಿ ಸುಗಮವಾಗಿ ಸಾಗಿದರು. ಅಯ್ಯರ್​ ಮತ್ತೊಂದು ಅರ್ಧಶತಕ ಸನಿಹದಲ್ಲಿ ಎಡವಿದರು. 44 ರನ್ ಗಳಿಸಿ ರನೌಟ್ ಆದರು. ರಾಹುಲ್ ಸ್ಥಾನದಲ್ಲಿ ಮತ್ತೆ ಬಡ್ತಿ ಪಡೆದ ಅಕ್ಷರ್ ಪಟೇಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. 

ಅಜೇಯ 41 ರನ್ ಸಿಡಿಸಿದರೆ, ಕೆಎಲ್ ರಾಹುಲ್ (10), ಹಾರ್ದಿಕ್ ಪಾಂಡ್ಯ (10) ಮತ್ತೆ ನಿರಾಸೆ ಮೂಡಿಸಿದರು. ರವೀಂದ್ರ ಜಡೇಜಾ 11 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಅಜೇಯರಾದರು. ಭಾರತೀಯ ಬ್ಯಾಟರ್​​ಗಳ ಅಬ್ಬರಕ್ಕೆ ತತ್ತರಿಸಿದ ಇಂಗ್ಲೆಂಡ್ ಬೌಲರ್ಸ್, ಅಗತ್ಯ ಸಮಯಕ್ಕೆ ವಿಕೆಟ್ ಪಡೆಯಲು ವಿಫಲವಾದ ಹಿನ್ನೆಲೆ ಸೋಲಬೇಕಾಯಿತು.

ಡಕೆಟ್, ರೂಟ್ ಅರ್ಧಶತಕ ವ್ಯರ್ಥ

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಉತ್ತಮ ಆರಂಭ ಪಡೆಯಿತು. ಆರಂಭಿಕ ವಿಕೆಟ್​ಗೆ 81 ರನ್​ಗಳು ಹರಿದು ಬಂದವು. ಫಿಲ್ ಸಾಲ್ಟ್ 26 ರನ್ ಸಿಡಿಸಿದರೆ, ಬೆನ್ ಡಕೆಟ್ 65 ರನ್​ಗಳ ಅಮೋಘ ಕಾಣಿಕೆ ನೀಡಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿರಿಯ ಆಟಗಾರ ಜೋ ರೂಟ್ 69 ರನ್​ ಸಿಡಿಸಿ ಮಿಂಚಿದರು. ಆದರೆ ರೂಟ್ ಮತ್ತು ಡಕೆಟ್ ಅರ್ಧಶತಕ ವ್ಯರ್ಥವಾಯಿತು. 

ಹ್ಯಾರಿ ಬ್ರೂಕ್ 31, ಜೋಸ್ ಬಟ್ಲರ್ 34, ಲಿಯಾಮ್ ಲಿವಿಂಗ್​ಸ್ಟನ್ 41 ರನ್ ಸಿಡಿಸಿ ತಂಡದ ಮೊತ್ತವನ್ನು 300+ ಸ್ಕೋರ್ ಮಾಡಲು ನೆರವಾದರು. ಆದರೆ ಕೆಳ ಕ್ರಮಾಂಕದ ಬ್ಯಾಟರ್​​ಗಳು ವೈಫಲ್ಯ ಅನುಭವಿಸಿದರು. ಉಳಿದ ಆಟಗಾರರು ಜೆಮಿ ಓವರ್ಟನ್ 6, ಗಸ್ ಆಟ್ಕಿನ್ಸನ್ 3, ಆದಿಲ್ ರಶೀದ್​ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಭಾರತದ ಪರ ಜಡೇಜಾ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಕಿತ್ತರು. ಅಂತಿಮವಾಗಿ ಇಂಗ್ಲೆಂಡ್ 49.5 ಓವರ್​​ಗಳಲ್ಲಿ 304 ರನ್​ಗಳಿಗೆ ಆಲೌಟ್ ಆಯಿತು.

Whats_app_banner