ಮುಂದಿನ ಸೂಪರ್‌ಸ್ಟಾರ್: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕದ ನಂತರ ರೋಹಿತ್ ಶರ್ಮಾ ಹಳೆಯ ಟ್ವೀಟ್ ವೈರಲ್
Rohit Sharma On Yashasvi Jaiswal: ಇಂಗ್ಲೆಂಡ್ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿರುವ ಯಶಸ್ವಿ ಜೈಸ್ವಾಲ್ ಅವರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ಗುಣಗಾನ ಮಾಡಿದ್ದ ಹಳೆಯ ಪೋಸ್ಟ್ವೊಂದು 162 ವಾರಗಳ ನಂತರ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ (India vs England 2nd Te) ಮೊದಲ ದಿನದಾಟದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅತ್ಯುತ್ತಮ ಪ್ರದರ್ಶನ ನೀಡಿದರು. ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಇಂಗ್ಲೆಂಡ್ ಬೌಲರ್‌ಗಳನ್ನು ಅದ್ಭುತವಾಗಿ ಎದುರಿಸಿದ ಜೈಸ್ವಾಲ್, ಏಕಾಂಗಿ ಹೋರಾಟ ನಡೆಸಿದರು. ಭಾರತ ತನ್ನ ಮೊದಲ ದಿನದಾಟಕ್ಕೆ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದೆ.
ಜೈಸ್ವಾಲ್ ದ್ವಿಶತಕದತ್ತ
ಆರಂಭಿಕ ಆಟಗಾರ ಜೈಸ್ವಾಲ್, ಮತ್ತೊಂದು ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಮೊದಲ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ್ದ 22 ವರ್ಷದ ಎಡಗೈ ಬ್ಯಾಟರ್, ಎರಡನೇ ಟೆಸ್ಟ್ನಲ್ಲಿ ಶತಕ ಸಿಡಿಸಿ ಡಬಲ್ ಸೆಂಚುರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. 257 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಸಹಿತ 179 ರನ್ ಕಲೆ ಹಾಕಿ ಅಜೇಯರಾಗಿ ಉಳಿದಿದ್ದಾರೆ. ಅನುಭವಿಗಳ ಮಧ್ಯೆ ಅನಾನುಭವಿ ಬ್ಯಾಟರ್ ಮಿಂಚುವ ಮೂಲಕ ಟೀಮ್ ಮ್ಯಾನೇಜ್ಮೆಂಟ್ ನಂಬಿಕೆ ಉಳಿಸಿಕೊಂಡರು.
ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣ ಭಾರತ ತಂಡಕ್ಕೆ ಆಯ್ಕೆಯಾದ ಯಶಸ್ವಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶಸ್ಸು ಕಾಣುತ್ತಿದ್ದಾರೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ್ದ ಯಂಗ್ ಬ್ಯಾಟರ್, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಈಗ ತನ್ನ 6ನೇ ಟೆಸ್ಟ್ನಲ್ಲಿ ಮತ್ತೊಂದು ಸೆಂಚುರಿಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.
ರೋಹಿತ್ ಹಳೆಯ ಪೋಸ್ಟ್ ವೈರಲ್
ಆಂಗ್ಲರನ್ನು ಏಕಾಂಗಿಯಾಗಿ ಬೇಟೆಯಾಡುತ್ತಿರುವ ಜೈಸ್ವಾಲ್ ಅವರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ಗುಣಗಾನ ಮಾಡಿದ್ದ ಹಳೆಯ ಪೋಸ್ಟ್ವೊಂದು 162 ವಾರಗಳ ನಂತರ ಭಾರಿ ವೈರಲ್ ಆಗುತ್ತಿದೆ. ಜೈಸ್ವಾಲ್ ಅವರನ್ನು ಸೂಪರ್ ಸ್ಟಾರ್ ಎಂದು ರೋಹಿತ್ ಕರೆದಿರುವ ಪೋಸ್ಟ್ ಹರಿದಾಡುತ್ತಿದೆ. ಮುಂಬೈ ಪರ ಜೈಸ್ವಾಲ್ ಶತಕ ಬಾರಿಸಿದಾಗ ರೋಹಿತ್ ಈ ಟ್ವೀಟ್ ಮಾಡಿದ್ದರು. ವಿಜಯ್ ಹಜಾರೆಯಲ್ಲಿ ಶತಕ ಸಿಡಿಸಿದ ನಂತರ ಜೈಸ್ವಾಲ್, ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ್ದರು. ಅದಕ್ಕೆ ರೋಹಿತ್, ಮುಂದಿನ ಸೂಪರ್‌ಸ್ಟಾರ್ ಎಂದು ಕಮೆಂಟ್ ಮಾಡಿದ್ದರು.
ಜೈಸ್ವಾಲ್ ಆಟವನ್ನು ಸಖತ್ ಖುಷಿಪಟ್ಟ ರೋಹಿತ್
ರೋಹಿತ್ ಶರ್ಮಾ 41 ಎಸೆತಗಳಲ್ಲಿ 14 ರನ್ ಗಳಿಸಿ ಬೇಗನೇ ಡಗೌಟ್ ಸೇರಿದರು. ಆ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಕೂತು ಆಟಗಾರರ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅದರಲ್ಲೂ ಜೈಸ್ವಾಲ್ ಆಟವನ್ನು ಸಖತ್ ಎಂಜಾಯ್ ಮಾಡಿದರು. ಯುವ ಆಟಗಾರ ಬೌಂಡರಿ ಸಿಕ್ಸರ್ ಏನೇ ಬಾರಿಸಲಿ ರೋಹಿತ್ ಖುಷಿಪಡುತ್ತಿದ್ದರು. ಶತಕ ಸಿಡಿಸಿದ ಸಂದರ್ಭದಲ್ಲಿ ರೋಹಿತ್ ಮೊಗದಲ್ಲಿ ಮಂದಹಾಸ ಎದ್ದುಕಾಣುತ್ತಿತ್ತು. ಯುವ ಆಟಗಾರರನ್ನು ಸದಾ ಬೆಂಬಲಿಸುವ ಗುಣ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್.
ಶತಕದ ನಂತರ ಜೈಸ್ವಾಲ್ ಹೇಳಿದ್ದೇನು?
ಮೊದಲ ದಿನದಾಟ ಮುಗಿಸಿದ ನಂತರ ಯಶಸ್ವಿ ಜೈಸ್ವಾಲ್, ತನ್ನ ಶತಕದ ಕುರಿತು ಮಾತನಾಡಿದರು. ಸೆಷನ್ ಬೈ ಸೆಷನ್ ಆಡಲು ಬಯಸುತ್ತೇನೆ. ಸೆಂಚುರಿಯನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ನಾನು ಇಷ್ಟಪಡುತ್ತೇನೆ. ಆರಂಭದಲ್ಲಿ ವಿಕೆಟ್ ತೇವವಾಗಿತ್ತು. ಮತ್ತು ಸ್ಪಿನ್, ಬೌನ್ಸ್ ಇತ್ತು. ನಾನು ತಂಡದ ಕೊನೆಯವರೆಗೂ ಕ್ರೀಸ್ನಲ್ಲಿರಲು ಬಯಸುತ್ತೇನೆ. ಸದ್ಯ ಶತಕ ಸಿಡಿಸಿರುವುದನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ರಾಹುಲ್ ಸರ್ ಮತ್ತು ರೋಹಿತ್ ಭಾಯ್ ನನಗೆ ಆತ್ಮವಿಶ್ವಾಸವನ್ನು ನೀಡುತ್ತಿದ್ದರು. ಇದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಮತ್ತು ಕೊನೆಯವರೆಗೂ ಉಳಿಯಲು ನನಗೆ ಸಂದೇಶ ರವಾನಿಸಿದ್ದರು ಎಂದು ಜೈಸ್ವಾಲ್ ಹೇಳಿದರು. ಜೈಸ್ವಾಲ್ ತನ್ನ ಆರಂಭವನ್ನು ಬೃಹತ್ ಸ್ಕೋರ್ ಆಗಿ ಪರಿವರ್ತಿಸಿದರೆ, ಶುಭ್ಮನ್ (34), ಶ್ರೇಯಸ್ ಅಯ್ಯರ್ (27), ರಜತ್ ಪಾಟೀದಾರ್ (32), ಅಕ್ಷರ್ ಪಟೇಲ್ (27), ಕೆಎಸ್ ಭರತ್ (17) ಕಳಪೆ ಆಟವಾಡಿದರು.