ರಣಜಿ ಟ್ರೋಫಿ: ಮುಂದುವರೆದ ರೋಹಿತ್ ಶರ್ಮಾ ಕಳಪೆ ಪ್ರದರ್ಶನ, ಒಂದಂಕಿಗೆ ಔಟಾಗ್ತಿದ್ದಂತೆ ಮೈದಾನ ತೊರೆದ ಫ್ಯಾನ್ಸ್
Rohit Sharma: ರಣಜಿ ಟ್ರೋಫಿಯಲ್ಲೂ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ. ಹಿಟ್ಮ್ಯಾನ್ ಒಂದಂಕಿಗೆ ಔಟಾಗ್ತಿದ್ದಂತೆ ಅಭಿಮಾನಿಗಳು ಮೈದಾನ ತೊರೆದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 10 ವರ್ಷಗಳ ನಂತರ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದರೂ ಮತ್ತದೇ ನಿರಾಶಾದಾಯಕ ಓಟ ಮುಂದುವರೆಸಿದ್ದಾರೆ. ಜಮ್ಮು ಕಾಶ್ಮೀರ ವಿರುದ್ಧ ಕಣಕ್ಕಿಳಿದ ಸೂಪರ್ ಸ್ಟಾರ್ ಬ್ಯಾಟರ್ ತಾನು ಎದುರಿಸಿದ 19 ಎಸೆತಗಳಲ್ಲಿ 3 ರನ್ಗಳಿಗೆ ಔಟ್ ಆಗಿ ತೀವ್ರ ನಿರಾಸೆ ಮೂಡಿಸಿದರು. ಕೆಟ್ಟ ಫಾರ್ಮ್ ಮುಂದುವರೆಸಿರುವ ಹಿಟ್ಮ್ಯಾನ್, ಬಿಜಿಟಿ ಸರಣಿಯಲ್ಲಿ 3 ಪಂದ್ಯಗಳಲ್ಲಿ 31 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದರು. ಇದೀಗ ದೇಶೀಯ ಕ್ರಿಕೆಟ್ನಲ್ಲೇ ಮತ್ತದೇ ರಾಗ ಎನ್ನುವಂತಾಗಿದೆ.
ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಕೆಟ್ಟ ಆರಂಭ ಪಡೆಯಿತು. ಬಿಸಿಸಿಐ ಆದೇಶದ ಮೇರೆಗೆ 2015ರ ನಂತರ ರಣಜಿ ಆಡಿದ ರೋಹಿತ್ ಶರ್ಮಾ, ಉಮರ್ ನಜೀರ್ ಬೌಲಿಂಗ್ನಲ್ಲಿ ಪರಾಸ್ ಡೋಂಗ್ರಾ ಅವರಿಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಹಿಟ್ಮ್ಯಾನ್ ಮಾತ್ರವಲ್ಲ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರರು ಸಹ ವೈಫಲ್ಯ ಅನುಭವಿಸಿದರು. ಯಶಸ್ವಿ ಜೈಸ್ವಾಲ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಹಾರ್ದಿಕ್ ತೋಮರ್ 7, ನಾಯಕ ಅಜಿಂಕ್ಯ ರಹಾನೆ 12, ಶ್ರೇಯಸ್ ಅಯ್ಯರ್ 11, ಶಿವಂ ದುಬೆ 0, ಶಾಮ್ಸ್ ಮುಲಾನಿ ಸೊನ್ನೆ ಸುತ್ತಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
17.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡ ಮುಂಬೈ 47 ರನ್ ಗಳಿಸಿ ನೂರರೊಳಗೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ 8ನೇ ವಿಕೆಟ್ಗೆ ಜೊತೆಯಾದ ಶಾರ್ದೂಲ್ ಠಾಕೂರ್ ಮತ್ತು ತನುಷ್ ಕೋಟ್ಯಾನ್ ಅರ್ಧಶತಕದ ಜೊತೆಯಾಟವಾಡಿದರು. ಭೋಜನ ವಿರಾಮಕ್ಕೂ ಮುನ್ನ ಮುಂಬೈ 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಶಾರ್ದೂಲ್ 39 ಎಸೆತಗಳಲ್ಲಿ 41 ರನ್ ಸಿಡಿಸಿದ್ದರೆ, ತನುಷ್ 34 ಎಸೆತಗಳಲ್ಲಿ 26 ರನ್ ಬಾರಿಸಿ ಅಜೇಯರಾಗಿದ್ದರು. ಜಮ್ಮು ಕಾಶ್ಮೀರ ಪರ ಉಮರ್ ನಜೀರ್ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು.
ರೋಹಿತ್ ಔಟ್, ಮೈದಾನ ತೊರೆದ ಫ್ಯಾನ್ಸ್
10 ವರ್ಷಗಳ ನಂತರ ರಣಜಿಯಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರ ಆಟವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಯಿತು. ತಮ್ಮ ನೆಚ್ಚಿನ ಆಟಗಾರ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಿರೀಕ್ಷೆ ಹುಸಿಯಾಯಿತು. ರೋಹಿತ್ ಔಟ್ ಆಗುತ್ತಿದ್ದಂತೆ ಅಭಿಮಾನಿಗಳು ಮೈದಾನ ತೊರೆದು ಹೊರ ನಡೆದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಎರಡನೇ ಇನ್ನಿಂಗ್ಸ್ನಲ್ಲಾದರೂ ರೋಹಿತ್ ಲಯಕ್ಕೆ ಮರಳುತ್ತಾರಾ ಎಂಬುದನ್ನು ಕಾದುನೋಡಬೇಕು.
ಜಾಲತಾಣಗಳಲ್ಲಿ ಹಿಟ್ಮ್ಯಾನ್ ಟ್ರೋಲ್
ಒಂದೆಡೆ ಅಭಿಮಾನಿಗಳು ಮೈದಾನ ತೊರೆದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿ ಲೀಗ್ ಆಡುವಂತೆ ವ್ಯಂಗ್ಯವಾಗಿ ಪೋಸ್ಟ್ ಹಾಕುತ್ತಿದ್ದಾರೆ. ಚಿಂತಿಸಬೇಡಿ! ಶೀಘ್ರದಲ್ಲೇ ರೋಹಿತ್ ಶರ್ಮಾ ಕೆಲವು ಮುಂಬೈ ಶಾಲಾ ತಂಡದ ವಿರುದ್ಧ ದ್ವಿಶತಕ ಗಳಿಸುತ್ತಾರೆ ಎಂದೆಲ್ಲಾ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ಮುಂಬೈ ಪ್ಲೇಯಿಂಗ್ ಇಲೆವೆನ್
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಿವಂ ದುಬೆ, ಶಾರ್ದೂಲ್ ಠಾಕೂರ್, ಶಾಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ಕರ್ಶ್ ಕೊಠಾರಿ.
