ಕನ್ನಡ ಸುದ್ದಿ  /  Cricket  /  Royal Challengers Bangalore Beat Mumbai Indians By 7 Wickets In Wpl 2024 To Enter Play Off Womens Premier League Jra

ಎಲ್ಲಿಸ್‌ ಪೆರ್ರಿ ಆಲ್‌ರೌಂಡ್‌ ಆಟ; ಮುಂಬೈ ಇಂಡಿಯನ್ಸ್‌ ಮಣಿಸಿ ಡಬ್ಲ್ಯುಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

WPL 2024: ಮುಂಬೈ ಇಂಡಿಯನ್ಸ್‌ ವಿರುದ್ಧ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಜಯ ಸಾಧಿಸಿದ ಆರ್‌ಸಿಬಿ ತಂಡವು, ಇದೇ ಮೊದಲ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಿದೆ. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೇವಲ ಒಂದು ರನ್‌ ಅಂತರದಿಂದ ವೀರೋಚಿತ ಸೋಲು ಕಂಡಿದ್ದ ಸ್ಮೃತಿ ಮಂಧಾನ ಪಡೆ, ಹಾಲಿ ಚಾಂಪಿಯನ್‌ ವಿರುದ್ಧ ಗೆದ್ದು ಬೀಗಿದೆ.

ಮುಂಬೈ ಇಂಡಿಯನ್ಸ್‌ ಮಣಿಸಿ ಡಬ್ಲ್ಯುಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ
ಮುಂಬೈ ಇಂಡಿಯನ್ಸ್‌ ಮಣಿಸಿ ಡಬ್ಲ್ಯುಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ (WPL-X)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊಟ್ಟಮೊದಲ ಬಾರಿಗೆ ಡಬ್ಲ್ಯೂಪಿಎಲ್‌ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎಲ್ಲಿಸ್‌ ಪೆರ್ರಿ ದಾಖಲೆಯ ಆಲ್‌ರೌಂಡ್‌ ಆಟದ ನೆರವಿನಿಂದ, ಆರ್‌ಸಿಬಿ ತಂಡ 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ವಿಮೆನ್ಸ್‌ ಪ್ರೀಮಿಯರ್ ಲೀಗ್‌ ಎರಡನೇ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್‌ ಸುತ್ತು ಪ್ರವೇಶಿಸಿದೆ. ಸ್ಮೃತಿ ಮಂಧಾನ ಬಳಗದ ಗೆಲುವಿನೊಂದಿಗೆ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಟೂರ್ನಿಯಿಂದ ನಿರ್ಗಮಿಸಿವೆ.

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಇಂಡಿಯನ್ಸ್‌, ಪೆರ್ರಿ ಮಾರಕ ದಾಳಿಗೆ ಕುಸಿದು ಕೇವಲ 113 ರನ್‌ಗಳಿಗೆ ಆಲೌಟ್‌ ಆಯ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, ಪೆರ್ರಿ ಮತ್ತು ರಿಚಾ ಘೋಷ್‌ ಆಕರ್ಷಕ ಜೊತೆಯಾಟದ ನೆರವಿಂದ ಕೇವಲ 15 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಪರ, ಸೋಫಿ ಮೊಲಿನ್ಯೂ 9 ರನ್‌ ಗಳಿಸಿ ಬೇಗನೆ ವಿಕೆಟ್‌ ಒಪ್ಪಿಸಿದರು. ಅವರ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನ ಕೂಡಾ 11 ರನ್‌ ಗಳಿಸಿ ನಿರ್ಗಮಿಸಿದರು. ಅನುಭವಿ ಆಟಗಾರ್ತಿ ಸೋಫಿ ಡಿವೈನ್‌ ಒಂದು ಬೌಂಡರಿ ಬಾರಿಸಿ ಔಟಾದರು. ಈ ವೇಳೆ ಒಂದಾದ ಪೆರ್ರಿ ಹಾಗೂ ರಿಚಾ ಆಕರ್ಷಕ ಜೊತೆಯಾಟವಾಡಿದರು. ಕಳೆದ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದ ರಿಚಾ, ಈ ಪಂದ್ಯದಲ್ಲಿ ಮತ್ತೆ ಅಬ್ಬರಿಸಿ ಅಜೇಯ 36 ರನ್‌ ಗಳಿಸಿದರು. ಬೌಲಿಂಗ್‌ ಬಳಿಕ ಬ್ಯಾಟಿಂಗ್‌ನಲ್ಲೂ ಮಿಂಚಿದ ಪೆರ್ರಿ 40 ರನ್‌ ಗಳಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ | ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್‌ ಕಬಳಿಸಿದ ಎಲ್ಲಿಸ್‌ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್‌

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಉತ್ತಮ ಆರಂಭ ಪಡೆಯಿತು. ಹೀಲಿ ಮ್ಯಾಥ್ಯೂಸ್‌ ಮತ್ತು ಎಸ್‌ ಸಜನಾ 43 ರನ್‌ಗಳ ಜೊತೆಯಾಟವಾಡಿದರು. ಮ್ಯಾಥ್ಯೂಸ್‌ 26 ರನ್‌ ಗಳಿಸಿದರೆ, ಸಜನಾ 30 ರನ್‌ ಪೇರಿಸಿದರು. ಸಜನಾ ವಿಕೆಟ್‌ ಕಬಳಿಸುವುದರೊಂದಿಗೆ ಪಂದ್ಯದಲ್ಲಿ ಎಲ್ಲಿಸ್‌ ಪೆರ್ರಿ ಅಬ್ಬರ ಶುರುವಾಯ್ತು. ಮೇಲಿಂದ ಮೇಲೆ 6 ವಿಕೆಟ್‌ ಕಬಳಿಸುವ ಮೂಲಕ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದರು.

ಪೆರ್ರಿ ಬೊಂಬಾಟ್‌ ದಾಖಲೆ

ಮೊದಲಿಗೆ ಎಸ್‌ ಸಜನಾ ಅವರನ್ನು ಕ್ಲೀನ್‌ ಬೋಲ್ಡ್‌ ಮಾಡಿದ ಪೆರ್ರಿ, ಅದರ ಬೆನ್ನಲ್ಲೇ ಎದುರಾಳಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಗೋಲ್ಡನ್‌ ಡಕ್‌ಗೆ ಬಲಿಯಾಗಿಸಿದರು. ಅಮೆಲಿಯಾ ಕೆರ್ (2), ಅಮನ್‌ಜೋತ್ ಕೌರ್ (4), ಪೂಜಾ ವಸ್ತ್ರಾಕರ್ (6) ಮತ್ತು ನ್ಯಾಟ್ ಸಿವರ್ ಬ್ರಂಟ್ (10) ಕೂಡಾ ಮೇಲಿಂದ ಮೇಲೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಡೆತ್‌ ಓವರ್‌ಗಳಲ್ಲಿ ಪ್ರಿಯಾಂಕ ಬಾಲಾ ಅಜೇಯ 19 ರನ್‌ ಗಳಿಸಿದರು. ಅಂತಿಮವಾಗಿ ಕೇವಲ 113 ರನ್‌ಗಳಿಗೆ ಹಾಲಿ ಚಾಂಪಿಯನ್‌ ತಂಡ ಆಲೌಟ್‌ ಆಯ್ತು. ಪೆರ್ರಿ ದಾಖಲೆಯ ಆಟವು ಡಬ್ಲ್ಯೂಪಿಎಲ್‌ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿತು.

ಆರ್‌ಸಿಬಿ ತಂಡದ ಗೆಲುವಿನೊಂದಿಗೆ ಯುಪಿ ವಾರಿಯರ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಡಬ್ಲ್ಯೂಪಿಎಲ್‌ 2024ರ ಆವೃತ್ತಿಯಿಂದ ಹೊರಬಿದ್ದಿವೆ. ಆರ್‌ಸಿಬಿ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದ್ದು, ಇದೇ ಮೊದಲ ಬಾರಿಗೆ ನಾಕೌಟ್‌ ಹಂತದ ಪಂದ್ಯವನ್ನಾಡಲು ಸಜ್ಜಾಗಿದೆ.

ಆರ್‌ಸಿಬಿ-ಮುಂಬೈ ಪ್ಲೇ ಆಫ್‌ ಹಣಾಹಣಿ ಬಹುತೇಕ ಖಚಿತ

ಇದೀಗ ಅಗ್ರಸ್ಥಾನಕ್ಕಾಗಿ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವೆ ಪೈಪೋಟಿ ಇದೆ. ಆದರೆ, ಈ ಸ್ಥಾನವು ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾಗುವುದು ಬಹುತೇಕ ಖಚಿತವಾಗಿದೆ. ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಮುಂಬೈ ತಂಡದ ನೆಟ್‌ ರನ್‌ ರೇಟ್‌ ಕುಸಿದಿದೆ. ಸದ್ಯ ಉತ್ತಮ ಎನ್‌ಆರ್‌ಆರ್‌ ಜೊತೆಗೆ ಕ್ಯಾಪಿಟಲ್ಸ್‌ ತಂಡ ಅಗ್ರಸ್ಥಾನದಲ್ಲಿದ್ದು, ಮುಂದಿನ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಸಣ್ಣ ಅಂತರದಲ್ಲಿ ಸೋತರೂ, ಇದೇ ಸ್ಥಾನದಲ್ಲಿ ಉಳಿಯಲಿದೆ. ಹೀಗಾಗಿ ಪ್ಲೇ ಆಫ್‌ ಎಲಿಮನೇಟರ್‌ನಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಮತ್ತೆ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point