ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ನಲ್ಲಿ ಆರ್ಸಿಬಿಯ ಈ 11 ಆಟಗಾರ್ತಿಯರು ಕಣಕ್ಕಿಳಿದ್ರೆ ಈ ಸಲ ಕಪ್ ನಮ್ದೇ!
RCB vs DC 2024 Playing XI : ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ಹೀಗಿದೆ ನೋಡಿ.

ಮಹಿಳೆಯರ ಪ್ರೀಮಿಯರ್ ಲೀಗ್ (Womens Premier League) 2024ರ ಬಹು ನಿರೀಕ್ಷಿತ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರ (Royal Challengers Bangalore vs Delhi capitals) ನಡುವೆ ಮಾರ್ಚ್ 17ರ ಭಾನುವಾರದಂದು ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅತ್ಯಂತ ಯಶಸ್ವಿಯಾಗಿ 16 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್, 17ನೇ ಆವೃತ್ತಿಗೆ ಕಾಲಿಡುತ್ತಿದೆ. ಆದರೂ ಆರ್ಸಿಬಿ ಪುರುಷರ ತಂಡವು ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಎರಡನೇ ಆವೃತ್ತಿಯಲ್ಲೇ ಚೊಚ್ಚಲ ಟ್ರೋಫಿಯ ಕನಸಿನಲ್ಲಿದೆ.
ಎಲಿಮಿನೇಟರ್ನಲ್ಲಿ ಮುಂಬೈ ವಿರುದ್ಧ ಗೆಲುವು
ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ 5 ರನ್ಗಳ ಅಂತರದಿಂದ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಸ್ಮೃತಿ ಮಂಧಾನ ಪಡೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಈ ಗುರಿ ಹಿಂಬಾಲಿಸಿದ ಮುಂಬೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಕಲೆ ಹಾಕಲು ಮಾತ್ರ ಶಕ್ತವಾಯಿತಷ್ಟೆ. ಹಾಗಾಗಿ 5 ರನ್ಗಳಿಂದ ಸೋಲನುಭವಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಡೈರೆಕ್ಟ್ ಫೈನಲ್ಗೆ
ವುಮೆನ್ಸ್ ಪ್ರೀಮಿಯರ್ ಲೀಗ್ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ 12 ಅಂಕ ಸಂಪಾದಿಸಿದೆ. ಮುಂಬೈ ಇಂಡಿಯನ್ಸ್ 10 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿತ್ತು. ಆರ್ಸಿಬಿ 8 ಅಂಕ ಪಡೆದು 3ನೇ ಸ್ಥಾನದಲ್ಲಿತ್ತು.
ಕಳೆದ ಬಾರಿ ಮುಂಬೈ ಚಾಂಪಿಯನ್
2023ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಫೈನಲ್ನಲ್ಲಿ ಡೆಲ್ಲಿ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಆರ್ಸಿಬಿ ಅಥವಾ ಡೆಲ್ಲಿ ಯಾವ ತಂಡ ಗೆದ್ದರೂ ಹೊಸ ಚಾಂಪಿಯನ್ ಆಗಲಿದೆ. ಎರಡು ತಂಡಗಳಲ್ಲಿ ಯಾರು ಗೆದ್ದರೂ ಹೊಸ ಇತಿಹಾಸ. ಏಕೆಂದರೆ ಐಪಿಎಲ್ನಲ್ಲೂ ಈ ಎರಡೂ ತಂಡಗಳು ಪ್ರಶಸ್ತಿ ಗೆದ್ದೇ ಇಲ್ಲ.
ಉಭಯ ತಂಡಗಳ ಪ್ಲೇಯಿಂಗ್ XI ಹೇಗಿರಲಿದೆ?
ಡೆಲ್ಲಿ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಅಲೀಸ್ ಕ್ಯಾಪ್ಸಿ, ಜೆಮಿಮಾ ರೊಡ್ರಿಗಸ್, ಮಾರಿಜಾನ್ನೆ ಕಾಪ್, ಜೆಸ್ ಜೋನಾಸನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ.
ಆರ್ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭನಾ, ಶ್ರದ್ದಾ ಪೋಖರ್ಕರ್, ರೇಣುಕಾ ಸಿಂಗ್.
ಅರುಣ್ ಜೇಟ್ಲಿ ಸ್ಟೇಡಿಯಂ ಪಿಚ್ ವರದಿ
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ ಪಿಚ್‌ಗೆ ಹೆಸರುವಾಸಿಯಾಗಿದೆ. ಕಿರಿದಾದ ಬೌಂಡರಿಗಳಿದ್ದು, ಹಿಟ್ಟರ್ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ 2ನೇ ಹಂತದ ಡಬ್ಲ್ಯುಪಿಎಲ್ ಈ ಮೈದಾನದಲ್ಲೇ ನಡೆದಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆದ್ದಿವೆ. ಹಾಗಾಗಿ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ನಡೆಸಲಿವೆ.
