ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಏನೇನು ಇರಲಿದೆ? ನೇರಪ್ರಸಾರ ವೀಕ್ಷಣೆ ಹಾಗೂ ಅತಿಥಿಗಳ ವಿವರ ಹೀಗಿದೆ-royal challengers bangalore rcb unbox 2024 event m chinnaswamy stadium live streaming details ipl 2024 bengaluru jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಏನೇನು ಇರಲಿದೆ? ನೇರಪ್ರಸಾರ ವೀಕ್ಷಣೆ ಹಾಗೂ ಅತಿಥಿಗಳ ವಿವರ ಹೀಗಿದೆ

ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಏನೇನು ಇರಲಿದೆ? ನೇರಪ್ರಸಾರ ವೀಕ್ಷಣೆ ಹಾಗೂ ಅತಿಥಿಗಳ ವಿವರ ಹೀಗಿದೆ

RCB Unbox 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ಎರಡನೇ ವರ್ಷದ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ ನಡೆಸುತ್ತಿದೆ. ನೇರಪ್ರಸಾರ ಸೇರಿದಂತೆ ಕಾರ್ಯಕ್ರಮದ ವಿವರಗಳು ಇಲ್ಲಿವೆ. ಕಾರ್ಯಕ್ರಮದಲ್ಲಿ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ.

ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ
ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ

ಚೊಚ್ಚಿಲ ಡಬ್ಲ್ಯುಪಿಎಲ್‌ ಟ್ರೋಫಿ ಗೆದ್ದ ಖುಷಿಯಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು, ಬಹುನಿರೀಕ್ಷಿತ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಆರಂಭಕ್ಕೂ ಮುಂಚಿತವಾಗಿ, ತನ್ನ ವಾರ್ಷಿಕ ಕಾರ್ಯಕ್ರಮ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ ನಡೆಸುತ್ತಿದೆ. ಕಳೆದ ವರ್ಷದ ಐಪಿಎಲ್‌ ಆವೃತ್ತಿಗೂ ಮುಂಚಿತವಾಗಿ, ಈ ಕಾರ್ಯಕ್ರಮವನ್ನು ಫ್ರಾಂಚೈಸಿಯು ಯಶಸ್ವಿಯಾಗಿ ನಡೆಸಿತ್ತು. ಇದೀಗ ಸತತ ಎರಡನೇ ಬಾರಿಗೆ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಈವೆಂಟ್‌ ನಡೆಸಲು ಮುಂದಾಗಿದೆ. ಐಪಿಎಲ್‌ 2024ಕ್ಕೂ ಮುನ್ನ ಒಂದಷ್ಟು ಬದಲಾವಣೆಗಳನ್ನು ಘೋಷಿಸುವ ನಿರೀಕ್ಷೆ ಇದೆ.

ಈ ಬಾರಿಯ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ ಇಂದು (ಮಾರ್ಚ್ 19, ಮಂಗಳವಾರ) ನಡೆಯುತ್ತಿದ್ದು, ಆರ್‌ಸಿಬಿಯ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಅದ್ಧೂರಿ ಕಾರ್ಯಕ್ರಮದ ಆತಿಥ್ಯಕ್ಕೆ ಸಿಂಗಾರಗೊಂಡಿದೆ. ಕಾರ್ಯಕ್ರಮದಲ್ಲಿ ಆರ್‌ಸಿಬಿ ಪುರುಷರ ಹಾಗೂ ವನಿತೆಯರ ತಂಡ ಭಾಗವಹಿಸುವುದು ಬಹುತೇಕ ಖಚಿತ. ಪುರುಷರ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಅತ್ತ ಡಬ್ಲ್ಯುಪಿಎಲ್‌ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಆರ್‌ಸಿಬಿಗೆ ಟ್ರೋಫಿ ಗೆದ್ದುಕೊಟ್ಟ ಆರ್‌ಸಿಬಿ ವನಿತೆಯರ ತಂಡವು ಕಾರ್ಯಕ್ರಮದಲ್ಲಿ ಹಾಜರಿರುವುದು ಖಚಿತವಾಗಿದೆ. ಅಲ್ಲದೆ ನಾರಿಯರ ಬಳಗವನ್ನು ಫ್ರಾಂಚೈಸಿ ಕಡೆಯಿಂದ ಸನ್ಮಾನಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ | ಆರ್‌ಸಿಬಿ ಅಭಿಮಾನಿಗಳಿಗೆ ಶುಭಸುದ್ದಿ; ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್, ಬಿಳಿ ಗಡ್ಡ ಕಂಡು ಅಚ್ಚರಿ

ಬಹುತೇಕ ಎಲ್ಲಾ ಫ್ರಾಂಚೈಸಿಗಳು 2024ರ ಋತುವಿಗೆ ತಂಡದ ಜೆರ್ಸಿ ಬಿಡುಗಡೆ ಮಾಡಿವೆ. ಆರ್‌ಸಿಬಿ ಇನ್ನೂ ತಂಡದ ಜೆರ್ಸಿ ಬಿಡುಗಡೆಗೊಳಿಸಿಲ್ಲ. ಹೀಗಾಗಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಹೊಸ ಜೆರ್ಸಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಇದೇ ವೇಳೆ, ಅಭಿಮಾನಿಗಳ ನಿರೀಕ್ಷೆಯಂತೆ ತಂಡದ ಹೆಸರು ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ. ಫ್ರಾಂಚೈಸಿ ನೀಡಿರುವ ಹಲವು ಸುಳಿವುಗಳ ಪ್ರಕಾರ, ಫ್ರಾಂಚೈಸಿ ಹೆಸರಿನಲ್ಲಿರುವ ಆಂಗ್ಲ ಪದ ಬ್ಯಾಂಗಲೂರ್‌ ಬದಲಿಗೆ ಕನ್ನಡದ ಬೆಂಗಳೂರು ಎಂಬುದಾಗಿ ಬದಲಾಯಿಸುವ ಸಾಧ್ಯತೆ ಇದೆ. ಈ ಕುರಿತು, ಫ್ರಾಂಚೈಸಿಯು ಹಲವು ವಿಡಿಯೋ ಟೀಸರ್‌ಗಳನ್ನು ಬಿಡುಗಡೆ ಮಾಡಿ ತಿಳಿಸಿದೆ. ನಟ ರಿಷಬ್‌ ಶೆಟ್ಟಿ, ಶಿವರಾಜ್‌ ಕುಮಾರ್‌, ಸುದೀಪ್‌, ನಟಿ ರಶ್ಮಿಕಾ ಮಂದಣ್ಣ ಈ ಕುರಿತು ಭಿನ್ನ ರೀತಿಯಲ್ಲಿ ಸುಳಿವು ನೀಡಿದ್ದರು.

ಕಾರ್ಯಕ್ರಮದಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಅಲನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಸೇರಿದಂತೆ ಕೆಲವು ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರ. ಹೀಗಾಗಿ ಅಭಿಮಾನಿಗಳಿಗೆ ಮನರಂಜನೆ ಖಚಿತ.

ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಯಾವಾಗ ಪ್ರಾರಂಭವಾಗುತ್ತದೆ?

ಮಾರ್ಚ್ 19ರ ಮಂಗಳವಾರ ಸಂಜೆ 4 ಗಂಟೆಗೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ ಆರಂಭವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಗೇಟ್‌ ತೆರೆಯಲಾಗುತ್ತದೆ. ಆರ್‌ಸಿಬಿ ಪುರುಷರ ತಂಡದ ಫುಲ್‌ ಸ್ಕ್ವಾಡ್‌ ಅಭ್ಯಾಸ ಕೂಡಾ ನಡೆಯಲಿದೆ.

ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಏನೇನು ನಡೆಯಬಹುದು?

ಪ್ರಸಕ್ತ ಐಪಿಎಲ್‌ ಆವೃತ್ತಿಗೆ ತಂಡದ ಜೆರ್ಸಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದೇ ವೇಳೆ ಫ್ರಾಂಚೈಸಿ ಹೆಸರಿನಲ್ಲಿರುವ ಬೆಂಗಳೂರು ಪದವನ್ನು ಬದಲಾಯಿಸುವ ಸಾಧ್ಯತೆ ಇದೆ.

ಕಾರ್ಯಕ್ರಮದಲ್ಲಿ ಯಾರ್ಯಾರು ಪ್ರದರ್ಶನ ನೀಡುತ್ತಾರೆ?

ಅಲನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ ಜೋರ್ಡಾನ್, ಬರ್ಫಿ ಕಚೇರಿ.

ಕಾರ್ಯಕ್ರಮದಲ್ಲಿ ಭಾಗಿಯಾಗುವ ಸೆಲೆಬ್ರಿಟಿಗಳು ಯಾರು?

ರಿಷಭ್ ಶೆಟ್ಟಿ, ಅಶ್ವಿನಿ ಪುನೀತ್, ಶಿವರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆಯಿದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಅಭಿಮಾನಿಗಳು ಆರ್‌ಸಿಬಿ ವೆಬ್‌ಸೈಟ್‌ ಮತ್ತು ಅಪ್ಲಿಕೇಶನ್‌ನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ವೀಕ್ಷಿಸಬಹುದು. ಆದರೆ, 99 ರೂಪಾಯಿ ಪಾವತಿಸಬೇಕಾಗುತ್ತದೆ.