ಸಿಎಸ್ಕೆ ವಿರುದ್ಧ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ತಂಡ; ಈ 11 ಆಟಗಾರರು ಕಣಕ್ಕಿಳಿದರೆ ಚೆನ್ನೈ ಶೇಕ್ ಆಗೋದು ಪಕ್ಕಾ!
RCB Probable Playing 11 IPL 2024: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ XI ನಲ್ಲಿ ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಎಂಬುದನ್ನು ಈ ಮುಂದೆ ನೋಡೋಣ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ (Indian Premier League 2024) ದಿನಗಣನೆ ಶುರುವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (CSK vs RCB) ಎದುರಿಸಲು ಸಜ್ಜಾಗಿದೆ. ಚೆನ್ನೈ ತವರು ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಉಭಯ ತಂಡಗಳು ಬಯಸುತ್ತಿವೆ.
ಅಭಿಮಾನಿಗಳು ಕೂಡ ಐಪಿಎಲ್ 17ನೇ ಸೀಸನ್ಗಾಗಿ ಕಾತರದಿಂದ ಕಾಯುತ್ತಿದ್ದು, ಪ್ರಶಸ್ತಿಯ ರುಚಿ ಕಾಣದ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಮಿನಿ ಹರಾಜಿನ ಬಳಿಕ ಆರ್ಸಿಬಿ ತಂಡದಲ್ಲಿ ಬದಲಾವಣೆಯಾಗಿದ್ದು, ಸಿಎಸ್ಕೆ ವಿರುದ್ಧ ಪಂದ್ಯಕ್ಕೆ ಪ್ಲೇಯಿಂಗ್ XI ನಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ನೋಡೋಣ.
ಆರಂಭಿಕರಾಗಿ ಕೊಹ್ಲಿ-ಫಾಫ್ ಕಣಕ್ಕೆ
ಹೆಚ್ಚಿನ ಅನುಭವ ಹೊಂದಿರುವ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನಲ್ಲೂ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ಆರ್ಸಿಬಿಗೆ 17.5 ಕೋಟಿಗೆ ಟ್ರೇಡ್ ಆದ ಕ್ಯಾಮರೂನ್ ಗ್ರೀನ್, 3ನೇ ಸ್ಥಾನದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸುವ ಜವಾಬ್ದಾರಿ ಅವರ ಮೇಲಿರಲಿದೆ. ಗಾಯದ ಕಾರಣ ಕಳೆದ ಋತುವಿನಲ್ಲಿ ಆಡದ ರಜತ್ ಪಾಟೀದಾರ್ 4ನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ.
5ನೇ ಸ್ಥಾನದಲ್ಲಿ ಮ್ಯಾಕ್ಸಿ ಮತ್ತು ಡಿಕೆ ಫಿನಿಷರ್
ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಕೆಲವೇ ಎಸೆತಗಳಲ್ಲಿ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವರಲ್ಲಿದೆ. ಕಳೆದ ಆವೃತ್ತಿಗಳಲ್ಲಿ ಮ್ಯಾಕ್ಸಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಹಾಗಾಗಿ ಈ ಬಾರಿಯೂ ಅದೇ ಸ್ಥಾನದಲ್ಲಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಆಗ ಗ್ರೀನ್ 5ನೇ ಸ್ಥಾನದಲ್ಲಿ ಅವಕಾಶ ಪಡೆಯಬಹುದು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 6ನೇ ಸ್ಥಾನದಲ್ಲಿದ್ದು ಫಿನಿಷರ್ ಸ್ಥಾನ ನಿಭಾಯಿಸಲಿದ್ದಾರೆ.
ಮಹಿಪಾಲ್ ಲೊಮ್ರೋರ್ಗೆ ಅವಕಾಶ
ಮಹಿಪಾಲ್ ಲೊಮ್ರೋರ್ 7ನೇ ಕ್ರಮಾಂಕದಲ್ಲಿ ಆಡಬಹುದು. ಆದರೆ ಅವರು ಕಳೆದ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. 12 ಪಂದ್ಯಗಳಲ್ಲಿ ಕೇವಲ 135 ರನ್ ಗಳಿಸಿದ್ದರು. ರಾಜಸ್ಥಾನ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಮಹಿಪಾಲ್ ಲೊಮ್ರೋರ್ ಬಿಗ್ ಹಿಟ್ಟರ್ಗಳಿಗೆ ಹೆಸರುವಾಸಿ. ಆದರೆ ಐಪಿಎಲ್ನಲ್ಲಿ ಇನ್ನೂ ಆಟ ಹೊರಬಂದಿಲ್ಲ. ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗ ತುಂಬಾ ವೀಕ್ ಇದೆ.
ಬೌಲಿಂಗ್ ವಿಭಾಗದಲ್ಲಿ ಗ್ರೀನ್ ಜೊತೆಗೆ ಅಲ್ಜಾರಿ ಜೋಸೆಫ್ ಅಥವಾ ಲಾಕಿ ಫರ್ಗುಸನ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತದೆ. ವಿಜಯ್ ಕುಮಾರ್ ವೈಶಾಕ್, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಬಹುದು. ಗ್ಲೆನ್ ಮ್ಯಾಕ್ಸ್ವೆನ್ ಕೂಡ ಬೌಲಿಂಗ್ (ಸ್ಪಿನ್) ಮಾಡಲಿದ್ದಾರೆ. ಹೆಚ್ಚು ವೇಗದ ಬೌಲಿಂಗ್ಗೆ ಆದ್ಯತೆ ನೀಡಲು ಆರ್ಸಿಬಿ ಮುಂದಾಗಿದೆ. ಆದರೆ ಯಾರಿಗೆ ಅವಕಾಶ ಸಿಗುತ್ತದೋ ಎಂಬುದನ್ನು ಕಾದುನೋಡೋಣ.
ಇಂತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ 11
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮೆರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಅಲ್ಜಾರಿ ಜೋಸೆಫ್/ಲಾಕಿ ಫರ್ಗುಸನ್, ವಿಜಯ್ ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.