ಕನ್ನಡ ಸುದ್ದಿ  /  Cricket  /  Royal Challengers Bangalore To 3rd Consecutive Win In Wpl 2024 Rcb Women Vs Delhi Capitals Womens Premier League Jra

ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಗುರಿ; ಸ್ಮೃತಿ ಮಂಧಾನ ಪಡೆ ವಿರುದ್ಧ ಅಜೇಯ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸಜ್ಜು

WPL 2024: ಆರ್‌ಸಿಬಿ ವನಿತೆಯರ ವಿರುದ್ಧ ‌ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮೇಲುಗೈ ಸಾಧಿಸಿದೆ. ಮೆಗ್‌ ಲ್ಯಾನಿಂಗ್‌ ಪಡೆಯು ಸ್ಮೃತಿ ಮಂಧಾನ ಬಳಗದ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಡಬ್ಲ್ಯೂಪಿಎಲ್‌ ಮೊದಲ ಆವೃತ್ತಿಯಲ್ಲಿ ಉಭಯ ತಂಡಗಳು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿ ಡಿಸಿ ಗೆದ್ದಿದೆ.

ಆರ್‌ಸಿಬಿ ವಿರುದ್ಧ ಅಜೇಯ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸಜ್ಜು
ಆರ್‌ಸಿಬಿ ವಿರುದ್ಧ ಅಜೇಯ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸಜ್ಜು

ತವರು ಮೈದಾನ ಚಿನ್ನಸ್ವಾಮಿ ಅಂಗಳದಲ್ಲಿ ಸತತ ಮೂರನೇ ಪಂದ್ಯ ಆಡಲು ಆರ್‌ಸಿಬಿ ವನಿತೆಯರ ತಂಡ ಸಜ್ಜಾಗಿದೆ. ಫೆಬ್ರವರಿ 29ರ ಗುರುವಾರ ನಡೆಯಲಿರುವ ಡಬ್ಲ್ಯೂಪಿಎಲ್‌ (Women's Premier League 2024) ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ರನ್ನರ್‌ ಅಪ್ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ವನಿತೆಯರ ಬಳಗವನ್ನು ಎದುರಿಸಲು ಸಜ್ಜಾಗಿದೆ. ಎರಡನೇ ಆವೃತ್ತಿಯ ಡಬ್ಲ್ಯೂಪಿಎಲ್‌ ಪಂದ್ಯಾವಳಿಯಲ್ಲಿ ಸತತ ಎರಡು ಗೆಲುವುಗಳೊಂದಿಗೆ ಅಬ್ಬರಿಸುತ್ತಿರುವ ಸ್ಮೃತಿ ಮಂಧಾನ (Smriti Mandhana) ನೇತೃತ್ವದ ಆರ್‌ಸಿಬಿ, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ತವಕದಲ್ಲಿದೆ.

ಅತ್ತ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತು, ಯುಪಿ ವಾರಿಯರ್ಸ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹಾಕಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಫೈನಲ್‌ ಪಂದ್ಯದಲ್ಲಿ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್, ಈ ಬಾರಿ ಟ್ರೋಫಿ ಗೆಲ್ಲುವ ತವಕದಲ್ಲಿದೆ.

ಯುಪಿ ವಾರಿಯರ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತವರಿನ ಅಭಿಮಾನಿಗಳ ಅಗಣಿತ ಬೆಂಬಲದಿಂದಾಗಿ ಅದಮ್ಯ ಉತ್ಸಾಹದಿಂದ ಆಡುತ್ತಿರುವ ತಂಡವು, ಈ ಬಾರಿ ನಾಕೌಟ್‌ ಹಂತಕ್ಕೆ ಬೇಗನೆ ಲಗ್ಗೆ ಹಾಕುವ ಗುರಿಯಲ್ಲಿದೆ.

ಮುಖಾಮುಖಿ ದಾಖಲೆ

ಡೆಲ್ಲಿ ವಿರುದ್ಧ ಆರ್‌ಸಿಬಿಯು ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿ ಮೆಗ್‌ ಲ್ಯಾನಿಂಗ್‌ ಪಡೆ ಗೆದ್ದು ಬೀಗಿದೆ.

ಇದನ್ನೂ ಓದಿ | MIW vs UPW: ಮುಂಬೈ ಇಂಡಿಯನ್ಸ್‌ ತಂಡಕ್ಕೆ ಕೌರ್‌ ಬದಲು ಸಿವರ್‌ ಬ್ರಂಟ್‌ ನಾಯಕಿ; ಯುಪಿ ತಂಡದಲ್ಲೂ ಒಂದು ಬದಲಾವಣೆ

ಕಳೆದ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ, 20 ಓವರ್‌ಗಳಲ್ಲಿ 223/2 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆರ್‌ಸಿಬಿಯು 163 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಕ್ಯಾಪಿಟಲ್ಸ್ 60 ರನ್‌ಗಳ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಆರ್‌ಸಿಬಿಯು ಮೊದಲು ಬ್ಯಾಟಿಂಗ್‌ ಮಾಡಿ 150 ರನ್‌ ಗಳಿಸಿತು. ಆದರೆ ಡೆಲ್ಲಿ ತಂಡವು 6 ವಿಕೆಟ್‌ಗಳಿಂದ ಪಂದ್ಯ ಗೆದ್ದಿತು.

ಚಿನ್ನಸ್ವಾಮಿ ಮೈದಾನದ ಪಿಚ್ ವರದಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್‌ ಮಳೆ ಹರಿಯುವುದು ಹೊಸದೇನಲ್ಲ. ಈ ಬಾರಿಯ ಡಬ್ಲ್ಯೂಪಿಎಲ್‌ ಆವೃತ್ತಿಯಲ್ಲಿ ಇದುವರೆಗೆ ಮೈದಾನದಲ್ಲಿ 6 ಪಂದ್ಯಗಳು ನಡೆದಿವೆ. ಟಾಸ್‌ ಗೆದ್ದ ತಂಡಗಳು ಬೌಲಿಂಗ್‌ಗೆ ಆದ್ಯತೆ ನೀಡಿವೆ. ಈ ಪಿಚ್‌ ಚೇಸಿಂಗ್‌ ವೇಳೆ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಮೈದಾನದಲ್ಲಿ ನಡೆದ 6ರಲ್ಲಿ 5 ಪಂದ್ಯಗಳಲ್ಲಿ ಚೇಸಿಂಗ್‌ ನಡೆಸಿದ ತಂಡವೇ ಗೆದ್ದು ಬೀಗಿದೆ. ಆರ್‌ಸಿಬಿ ತಂಡ ಮಾತ್ರ ತಾನಾಡಿದ ಮೊದಲ ಪಂದ್ಯದಲ್ಲಿ ಕೇವಲ 2 ರನ್‌ ಅಂತರದಿಂದ ಯುಪಿ ತಂಡವನ್ನು ಮಣಿಸಿದೆ.

ಇನ್ನಷ್ಟು ಕ್ರಿಕೆಟ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಲೈವ್‌ ಸ್ಟ್ರೀಮಿಂಗ್‌ ವಿವರ

ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ

ಸ್ಮೃತಿ ಮಂಧಾನ (ನಾಯಕೊ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಸೋಭನ, ರೇಣುಕಾ ಠಾಕೂರ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಝನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ.

ಡಬ್ಲ್ಯೂಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point