ಕನ್ನಡ ಸುದ್ದಿ  /  Cricket  /  Royal Challengers Bangalore Women Vs Gujarat Giants Wpl 2024 Head To Head And Live Streaming Details Rcb Vs Gg Jra

WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ; ಲೈವ್‌ ಸ್ಟ್ರೀಮಿಂಗ್‌ ವಿವರ

WPL 2024: ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡವು, ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಮೊದಲ ಗೆಲುವು ಕಾಣಲು ಬೆತ್‌ ಮೂನಿ ನಾಯಕತ್ವದ ಗುಜರಾತ್‌ ಜೈಂಟ್ಸ್‌ ಸಜ್ಜಾಗಿದೆ.

ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ
ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ (Womens Premier League 2024) ಫೆಬ್ರುವರಿ 27ರ ಮಂಗಳವಾರ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವ ನಿರೀಕ್ಷೆಯಿದೆ. ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವನಿತೆಯರ ತಂಡಕ್ಕೆ ಗುಜರಾತ್‌ ಜೈಂಟ್ಸ್‌ (Royal Challengers Bangalore Women vs Gujarat Giants) ಸವಾಲೊಡ್ಡಲಿದೆ. ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಸ್ಮೃತಿ ಮಂಧಾನ ಪಡೆಯು, ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಮೊದಲ ಗೆಲುವು ಕಾಣಲು ಬೆತ್‌ ಮೂನಿ ಪಡೆ ಎದುರು ನೋಡುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ ಮುಖಾಮುಖಿ ದಾಖಲೆ

ಡಬ್ಲ್ಯೂಪಿಎಲ್‌ನ ಪ್ರಸಕ್ತ ಆವೃತ್ತಿಯು ಎರಡನೇ ಆವೃತ್ತಿಯಾಗಿದ್ದು, ಕಳೆದ ಬಾರಿ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಮೊದಲ ಆವೃತ್ತಿ ನಡೆದಿತ್ತು. ಕಳೆದ ವರ್ಷ ಡಬ್ಲ್ಯೂಪಿಎಲ್‌ನಲ್ಲಿ ಸ್ಮೃತಿ ಮಂಧಾನ ಹಾಗೂ ಬೆತ್‌ ಮೂನಿ ಪಡೆ ಎರಡು ಬಾರಿ ಮುಖಾಮುಖಿಯಾಗಿವೆ. ಈ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಹಣಾಹಣಿಯಲ್ಲಿ ಗುಜರಾತ್ ತಂಡ 11 ರನ್‌ಗಳಿಂದ ಗೆದ್ದಿತ್ತು. ಎರಡನೇ ಬಾರಿಗೆ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಎಂಟು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ | ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್, ಸತತ ಎರಡನೇ ಸೋಲು ಕಂಡ ಯುಪಿ ವಾರಿಯರ್ಸ್; ಅಂಕಪಟ್ಟಿಯಲ್ಲಿ ಕುಸಿದ ಆರ್​​​ಸಿಬಿ

ಮೊದಲ ಪಂದ್ಯದಲ್ಲಿ, ಗುಜರಾತ್ ಜೈಂಟ್ಸ್ ಮೊದಲು ಬ್ಯಾಟ್ ಮಾಡಿ 201/7 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆರ್‌ಸಿಬಿ ತಂಡವು 190/6 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಎರಡನೇ ಬಾರಿಗೆ, ಗುಜರಾತ್‌ 188/4 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಸೋಫಿ ಡಿವೈನ್ ಸ್ಫೋಟಕ ಆಟದ ನೆರವಿಂದ (36 ಎಸೆತಗಳಲ್ಲಿ 99 ರನ್) ಆರ್‌ಸಿಬಿಯು ಸುಲಭವಾಗಿ 189 ರನ್ ಚೇಸ್‌ ಮಾಡಿ ಭರ್ಜರಿಯಾಗಿ 8 ವಿಕೆಟ್‌ಗಳಿಂದ ಗೆದ್ದು ಬೀಗಿತು.

  • ಆಡಿದ ಪಂದ್ಯಗಳು - 2
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು - 1
  • ಗುಜರಾತ್ ಜೈಂಟ್ಸ್ ಗೆಲುವು - 1

ಇದನ್ನೂ ಓದಿ | ಸೋತು-ಗೆದ್ದವರ ನಡುವೆ ಪೈಪೋಟಿ, 2ನೇ ಗೆಲುವಿನ ಮೇಲೆ ಕಣ್ಣಿಟ್ಟ ಬೆಂಗಳೂರು; ಆರ್​ಸಿಬಿ-ಗುಜರಾತ್​ ಪ್ಲೇಯಿಂಗ್​ XI ಹೀಗಿರಲಿದೆ

ಲೈವ್‌ ಸ್ಟ್ರೀಮಿಂಗ್‌ ವಿವರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಸಂಪೂರ್ಣ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಅಲ್ಲದೆ ನಮ್ಮ ಇಂಟರ್ನೆಟ್‌ ವೇಗಕ್ಕೆ ಅನುಗುಣವಾಗಿ ಗುಣಮಟ್ಟದ ವಿಡಿಯೋ ವೀಕ್ಷಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್​), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.

ಗುಜರಾಜ್ ಜೈಂಟ್ಸ್‌ ಸಂಭಾವ್ಯ ತಂಡ

ಬೆತ್ ಮೂನಿ (ನಾಯಕ ಮತ್ತು ವಿಕೆಟ್‌ಕೀಪರ್), ವೇದಾ ಕೃಷ್ಣಮೂರ್ತಿ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಆಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ, ತನುಜಾ ಕನ್ವರ್, ಕ್ಯಾಥರೀನ್ ಬ್ರೈಸ್, ಲೀ ತಹುಹು, ಮೇಘನಾ ಸಿಂಗ್.

ಇದನ್ನೂ ಓದಿ | 30 ವರ್ಷಗಳ ನಂತರ ಪಾಕಿಸ್ತಾನ ಸುದೀರ್ಘ ದಾಖಲೆ ಮುರಿದ ಭಾರತ; ವೆಸ್ಟ್ ಇಂಡೀಸ್​​ ರೆಕಾರ್ಡ್ ಕೂಡ ಧೂಳೀಪಟ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point