Explainer: ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಎಲಿಮನೇಟರ್ ಮುಖಾಮುಖಿ ಬಹುತೇಕ ಖಚಿತ; ಹೀಗಿದೆ ಲೆಕ್ಕಾಚಾರ
WPL 2024: ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ರಸಕ್ತ ಆವೃತ್ತಿಯ ಡಬ್ಲ್ಯೂಪಿಎಲ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಪ್ಲೇ ಆಫ್ ಪ್ರವೇಶಿಸಿರುವ ಸ್ಮೃತಿ ಮಂಧಾನ ಪಡೆಯು, ಹರ್ಮನ್‌ಪ್ರೀತ್ ಕೌರ್ ಬಳಗದ ವಿರುದ್ಧವೇ ಎಲಿಮನೇಟರ್ ಪಂದ್ಯವಾಡಲಿದೆ. ಇದು ಹೇಗೆ ಸಾಧ್ಯ? ಇಲ್ಲಿದೆ ಉತ್ತರ.
ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ 7 ವಿಕೆಟ್‌ಗಳ ಜಯ ಸಾಧಿಸಿದ ಆರ್‌ಸಿಬಿ ತಂಡವು, ವಿಮೆನ್ಸ್ ಪ್ರೀಮಿಯರ್ ಲೀಗ್ ಎರಡನೇ ಆವತ್ತಿಯ ಪಂದ್ಯಾವಳಿಯ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಮೂರನೇ ತಂಡವಾಗಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟ ಸ್ಮೃತಿ ಮಂಧಾನ ಪಡೆಯು, ಎಲಿಮನೇಟರ್ ಪಂದ್ಯ ಆಡಲಿದೆ. ಮಾರ್ಚ್ 13ರ ಬುಧವಾರ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದ್ದು, ಈ ಪಂದ್ಯದ ಬಳಿಕ ಪ್ಲೇ ಆಫ್ ಹಂತದ ಪಂದ್ಯ ಹಾಗೂ ತಂಡಗಳ ಅಂತಿಮ ಚಿತ್ರಣ ಸಿಗಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಎಲಿಮನೇಟರ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುವುದು ಬಹುತೇಕ ಖಚಿತ.
ಡಬ್ಲ್ಯೂಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ನೇರವಾಗಿ ಫೈನಲ್ ಪ್ರವೇಶಿಸುತ್ತದೆ. ಎರಡು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಎಲಿಮನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಲ್ಲಿ ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಹೀಗಾಗಿ ಅಗ್ರ ಸ್ಥಾನಕ್ಕೆ ಹೆಚ್ಚು ಮನ್ನಣೆ ಇದೆ.
ಮುಂಬೈ ವಿರುದ್ಧ ಗೆದ್ದು ಆರ್‌ಸಿಬಿ ತಂಡವು ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸುವುದರೊಂದಿಗೆ, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ ಈ ಎರಡೂ ತಂಡಗಳು ಇದೀಗ ಆಟದಿಂದ ಹೊರಗಿವೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಪಡೆಯಲು ಮುಂಬೈ ಮತ್ತು ಡೆಲ್ಲಿಗೆ ಮಾತ್ರ ಅವಕಾಶವಿದೆ. ಇದರಲ್ಲಿ ಡೆಲ್ಲಿ ತಂಡವೇ ಅಗ್ರಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ | ಎಲ್ಲಿಸ್ ಪೆರ್ರಿ ಆಲ್‌ರೌಂಡ್ ಆಟ; ಮುಂಬೈ ಇಂಡಿಯನ್ಸ್ ಮಣಿಸಿ ಡಬ್ಲ್ಯುಪಿಎಲ್ ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ
ಪ್ರಸ್ತುತ ಡಬ್ಲ್ಯೂಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಆಡಿದ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಸೋಲು ಕಂಡಿರುವ ಲ್ಯಾನಿಂಗ್ ಬಳಗವು, 10 ಅಂಕ ಪಡೆದಿದೆ. ಭರ್ಜರಿ +0.918 ನೆಟ್ ರನ್ ರೇಟ್‌ನೊಂದಿಗೆ ಮುಂಬೈಗಿಂತ ಭಾರಿ ಅಂತರದಲ್ಲಿದೆ. ತಂಡದ ಮುಂದೆ ಇನ್ನೂ ಒಂದು ಪಂದ್ಯವಿದೆ. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿರುವ ಡೆಲ್ಲಿ, ಅಲ್ಲಿಯೂ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಸಣ್ಣ ಅಂತರದಲ್ಲಿ ಸೋತರೂ ತಂಡ ನೆಟ್ ರನ್ ರೇಟ್ ನೆರವಿನೊಂದಿಗೆ ಸುಲಭವಾಗಿ ಫೈನಲ್‌ಗೆ ಪ್ರವೇಶಿಸಲಿದೆ.
ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಮುಂಬೈ ಇಂಡಿಯನ್ಸ್ ಕಳೆದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ತಂಡವು 10 ಅಂಕ ಪಡೆದಿದೆ. ಆದರೆ +0.024 ನೆಟ್ ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ ನೆಟ್ ರನ್ ರೇಟ್‌ನಲ್ಲಿ ಭಾರಿ ಅಂತರವಿದೆ.
ಹೀಗಿದೆ ನೆಟ್ ರನ್ ರೇಟ್ ಲೆಕ್ಕಾಚಾರ
ಒಂದು ವೇಳೆ ಮುಂಬೈ ತಂಡವು ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಬೇಕಾದರೆ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮ್ಯಾಜಿಕ್ ನಡೆಯಬೇಕು. ಡೆಲ್ಲಿ ತಂಡವು ಗುಜರಾತ್ ವಿರುದ್ಧ ಹೀನಾಯವಾಗಿ ಸೋಲಬೇಕು. ರನ್‌ಗಳ ಅಂತರದಲ್ಲಿ ಹೇಳುವುದಾದರೆ, 120 ರನ್ ಅಂತರದಿಂದ ಡೆಲ್ಲಿ ಸೋತರೆ ಮುಂಬೈ ತಂಡಕ್ಕೆ ಅಗ್ರಸ್ಥಾನ ಸಿಗಲಿದೆ. ಅತ್ತ ಗುಜರಾತ್ ತಂಡವೇನಾದರೂ, 90 ಎಸೆತಗಳನ್ನು ಉಳಿಸಿ ಕೇವಲ 5 ಓವರ್‌ಗಳಲ್ಲೇ ಚೇಸಿಂಗ್ ಮಾಡಿ ಪಂದ್ಯ ಗೆದ್ದರೂ ಮುಂಬೈಗೆ ವರದಾನವಾಗಲಿದೆ. ಆಗ ಮಾತ್ರ ನೆಟ್ ರನ್ ರೇಟ್ ಹೆಚ್ಚಳವಾಗಿ ಮುಂಬೈ ಅಗ್ರಸ್ಥಾನ ಪಡೆಯಲಿದೆ. ಇದು ಅಸಾಧ್ಯವಂತೂ ಅಲ್ಲ. ಆದರೆ, ಸದ್ಯ ಮೆಗ್ ಲ್ಯಾನಿಂಗ್ ಪಡೆ ಇರುವ ಸ್ಫೋಟಕ ಫಾರ್ಮ್ ನೋಡಿದರೆ ಕಷ್ಟಸಾಧ್ಯ ಎನ್ನಬಹುದು.
ಹೀಗಾಗಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಮತ್ತೆ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಮಾರ್ಚ್ 15ರ ಶುಕ್ರವಾರ ಉಭಯ ತಂಡಗಳ ನಡುವೆ ಎಲಿಮನೇಟರ್ ಪಂದ್ಯ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್ ಕಬಳಿಸಿದ ಎಲ್ಲಿಸ್ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)