ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಸುವ ಪ್ಲೇಯಿಂಗ್ 11 ಹೇಗಿರಲಿದೆ; ಆರ್ಸಿಬಿ ವೇಳಾಪಟ್ಟಿ, ತಂಡ ಇಲ್ಲಿದೆ ನೋಡಿ
Royal Challengers Bangalore : ಕಳೆದ ಒಂದು ವಾರದಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೆಬ್ರವರಿ 24ರಿಂದ ಡಬ್ಲ್ಯುಪಿಎಲ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಫೆಬ್ರವರಿ 23ರಿಂದ ಮಹಿಳಾ ಪ್ರೀಮಿಯರ್ ಲೀಗ್ (WPL 2024) ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು (MI-W vs DC-W) ಸೆಣಸಾಡಲಿವೆ. ಆದರೆ, ಎಲ್ಲರ ಕಣ್ಣಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮೇಲೆ. ಏಕೆಂದರೆ 16 ವರ್ಷಗಳಿಂದ ಕಪ್ ಗೆಲ್ಲದ ಆರ್ಸಿಬಿ ಈ ಬಾರಿಯಾದರೂ ಟ್ರೋಫಿಗೆ ಮುತ್ತಿಕ್ಕಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.
ಕಳೆದ ಬಾರಿಯ ಡಬ್ಲ್ಯುಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಆರ್ಸಿಬಿ, ಈ ಸಲ ಪುಟಿದೇಳುವ ಲೆಕ್ಕಾಚಾರದಲ್ಲಿದೆ. ಹರಾಜಿನ ಬಳಿಕ ಮತ್ತಷ್ಟು ಬಲಿಷ್ಠವಾಗಿರುವ ಸ್ಮೃತಿ ಮಂಧಾನ ಪಡೆ ತವರಿನ ಬೆಂಗಳೂರು ಮೈದಾನದಲ್ಲಿ ಸಿಡಿದೆದ್ದು ಟ್ರೋಫಿ ಗೆಲ್ಲಲು ಪಣತೊಟ್ಟಿದೆ. ಹಾಗಾದರೆ ಫೆಬ್ರವರಿ 24ರಿಂದ ಅಭಿಯಾನ ಆರಂಭಿಸುವ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ? ವೇಳಾಪಟ್ಟಿ, ತಂಡ ಹೇಗಿದೆ ಎಂಬುದರ ಚಿತ್ರಣ ಇಲ್ಲಿದೆ ನೋಡಿ.
ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?
ಆರಂಭಿಕರಾಗಿ ಕಳೆದ ಬಾರಿ ಅಬ್ಬರಿಸಿದ್ದ ಸೋಫಿ ಡಿವೈನ್ ಮತ್ತು ನಾಯಕಿ ಸ್ಮೃತಿ ಮಂಧಾನ ಆಡುವುದು ಖಚಿತವಾಗಿದೆ. ಆದರೆ ಮೂರನೇ ಕ್ರಮಾಂಕದಲ್ಲಿ ಎಲಿಸ್ ಪೆರ್ರಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದಿಶಾ ಕಸತ್, ರಿಚಾ ಘೋಷ್, ಕನಿಕಾ ಅಹುಜಾ ಬ್ಯಾಟಿಂಗ್ ನಡೆಸಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೇರ್‌ಹ್ಯಾಮ್, ಆಶಾ ಶೋಭನಾ, ಕೇಟ್ ಕ್ರಾಸ್ ಅವರು ಆಲ್ರೌಂಡರ್ಗಳಾಗಿ ಕಣಕ್ಕಿಳಿಯಲಿದ್ದಾರೆ.
ವೇಗದ ಬೌಲಿಂಗ್ ಕೋಟಾದಲ್ಲಿ ರೇಣುಕಾ ಸಿಂಗ್ ಆಡುವುದು ಖಚಿತ. ತಂಡದಲ್ಲಿ ಪೆರ್ರಿ, ಸೋಫಿ ಡಿವೈನ್ ಸಹ ಆಲ್ರೌಂಡರ್ಗಳಾಗಿದ್ದಾರೆ. ಅಲ್ಲದೆ, ವಿದೇಶಿ ಆಟಗಾರರ ಪೈಕಿ ಇಬ್ಬರ ಜೊತೆಗೆ ಕೇಟ್ ಕ್ರಾಸ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಕಣಕ್ಕಿಳಿಯಲಿದ್ದಾರೆ. ವಿಶೇಷ ಅಂದರೆ ಇವರು ಸಹ ಆಲ್ರೌಂಡರ್ಗಳು. ಮತ್ತೊಬ್ಬರಾದ ಶುಭಾ ಸತೀಶ್ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದರೂ ಅಚ್ಚರಿ ಇಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್.
ಆರ್ಸಿಬಿ ಸಂಪೂರ್ಣ ವೇಳಾಪಟ್ಟಿ
ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ -ಬೆಂಗಳೂರು
ಫೆಬ್ರವರಿ 27 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ -ಬೆಂಗಳೂರು
ಫೆಬ್ರವರಿ 29 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ -ಬೆಂಗಳೂರು
ಮಾರ್ಚ್ 2 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ -ಬೆಂಗಳೂರು
ಮಾರ್ಚ್ 4 - ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಬೆಂಗಳೂರು
ಮಾರ್ಚ್ 6 - ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ
ಮಾರ್ಚ್ 10 - ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ
ಮಾರ್ಚ್ 12 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ
ಕಳೆದ ಡಬ್ಲ್ಯುಪಿಎಲ್ನಲ್ಲಿ ಕಳಪೆ ಪ್ರದರ್ಶನ
ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ತಂಡ ನಿರಾಸೆ ಮೂಡಿಸಿತ್ತು. ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬಳಿಕ ಉಳಿದ ಮೂರು ಪಂದ್ಯಗಳಲ್ಲಿ ಎರಡು ಗೆದ್ದ ಸ್ಮೃತಿ ಮಂಧಾನ ಪಡೆ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಆಡಿದ 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 6ರಲ್ಲಿ ಸೋತು 4 ಅಂಕ ಪಡೆದಿತ್ತು.