ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮಿಂಚಿನ ಅರ್ಧಶತಕ, ಆರ್ಸಿಬಿ ಜಯಭೇರಿ; ತವರಿನಲ್ಲಿ ಕೆಕೆಆರ್ಗೆ ಮುಖಭಂಗ
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಅಭಿಯಾನ ಆರಂಭಿಸಿದೆ.
ಕೃನಾಲ್ ಪಾಂಡ್ಯ ಅವರ ಅದ್ಭುತ ಬೌಲಿಂಗ್ (29/3) ಜೊತೆಗೆ ವಿರಾಟ್ ಕೊಹ್ಲಿ (59*), ಫಿಲ್ ಸಾಲ್ಟ್ (55) ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಿದೆ. ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ತಮ್ಮ ತವರಿನ ಅಭಿಮಾನಿಗಳ ಮುಂದೆ ಮುಖಭಂಗಕ್ಕೆ ಒಳಗಾಯಿತು. ಇದರೊಂದಿಗೆ 2008ರ ಉದ್ಘಾಟನಾ ಆವೃತ್ತಿಯ ಉದ್ಘಾಟನಾ ಪಂದ್ಯದ ಸೋಲಿಗೆ ಅದೇ ಉದ್ಘಾಟನಾ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಟಾಸ್ ಗೆದ್ದು ಅಜಿಂಕ್ಯ ರಹಾನೆ ನೇತೃತ್ವದ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್ ನಡೆಸಿದ ಕೆಕೆಆರ್, ರಹಾನೆ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 174 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಕೃನಾಲ್ ಪಾಂಡ್ಯ 3, ಜೋಶ್ ಹೇಜಲ್ವುಡ್ 2 ವಿಕೆಟ್ ಕಿತ್ತು ಮಿಂಚಿದರು. 175 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ, 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು. ವಿರಾಟ್ ಕೊಹ್ಲಿ 59 (ಅಜೇಯ) ರನ್, ಫಿಲ್ ಸಾಲ್ಟ್ 55 ರನ್, ರಜತ್ ಪಾಟೀದಾರ್ 35 ರನ್ ಸಿಡಿಸಿ ಮಿಂಚಿದರು. ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸಾಲ್ಟ್, ಕೊಹ್ಲಿ ಅರ್ಧಶತಕ ಮಿಂಚು
175 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 95 ರನ್ ಹರಿದು ಬಂತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರು ಪವರ್ಪ್ಲೇನಲ್ಲಿ 80 ರನ್ ಕಲೆ ಹಾಕುವ ಮೂಲಕ ಕೆಕೆಆರ್ ಬೌಲಿಂಗ್ ಪಡೆಯನ್ನು ಧ್ವಂಸಗೊಳಿಸಿದರು. ಕಳೆದ ವರ್ಷ ಕೆಕೆಆರ್ ಪರವೇ ಆಡಿದ್ದ ಸಾಲ್ಟ್ ಇದೀಗ ಅದೇ ತಂಡದ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿ ಸ್ಫೋಟಕ ಅರ್ಧಶತಕ ಬಾರಿಸಿದರು. 31 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 56 ರನ್ಗಳ ಭರ್ಜರಿ ಅಟವಾಡುವ ಮೂಲಕ ಉತ್ತಮ ಭದ್ರಬುನಾದಿ ಹಾಕಿಕೊಟ್ಟು ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಔಟಾದರು. ಬಳಿಕ ವಿರಾಟ್ ಫಿಫ್ಟಿ ಬಾರಿಸಿದರು. 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 59 ರನ್ ಸಿಡಿಸಿದರು. ಇದು ಕೊಹ್ಲಿಯ 56ನೇ ಐಪಿಎಲ್ ಅರ್ಧಶತಕ. ಇದೇ ವೇಳೆ ಕೆಕೆಆರ್ ವಿರುದ್ಧ 1000 ರನ್ ಪೂರೈಸಿದರು. ದೇವದತ್ ಪಡಿಕ್ಕಲ್ 10 ರನ್ ಗಳಿಸಿ ನಿರಾಸೆ ಮೂಡಿಸಿದರೆ, ರಜತ್ ಪಾಟೀದಾರ್ ಬಿರು್ಗಾಳಿ ಬ್ಯಾಟಿಂಗ್ ನಡೆಸಿ 34 ರನ್ ಚಚ್ಚಿದರು. ಕೊನೆಯಲ್ಲಿ 5 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದ ಲಿಯಾಮ್ ವಿಲಿಂಗ್ಸ್ಟೋನ್, 16.2ನೇ ಓವರ್ನಲ್ಲಿ ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.
ಕೆಕೆಆರ್ ಅಬ್ಬರಕ್ಕೆ ಬ್ರೇಕ್ ಹಾಕಿದ ಕೃನಾಲ್ ಪಾಂಡ್ಯ
ತವರಿನ ಅಭಿಮಾನಿಗಳ ಮುಂದೆ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಓವರ್ನಲ್ಲಿ ಜೀವದಾನ ಪಡೆದರೂ ಕ್ವಿಂಟನ್ ಡಿ ಕಾಕ್ (4) ಅವರನ್ನು ಅದೇ ಓವರ್ನಲ್ಲಿ ಜೋಶ್ ಹೇಜಲ್ವುಡ್ ಹೊರದಬ್ಬುವ ಮೂಲಕ ಆರ್ಸಿಬಿಗೆ ಮುನ್ನಡೆ ತಂದರು. ಬಳಿಕ ನಾಯಕ ಅಜಿಂಕ್ಯ ರಹಾನೆ, ಸುನಿಲ್ ನರೇನ್ ಜೊತೆಗೂಡಿ ಆರ್ಸಿಬಿ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. 2ನೇ ವಿಕೆಟ್ಗೆ 55 ಎಸೆತಗಳಲ್ಲಿ 103 ರನ್ಗಳ ಜೊತೆಯಾಟವಾಡಿದರು. ಅದರಲ್ಲೂ ಅಜಿಂಕ್ಯ ರಹಾನೆ ಆಟ ನೆರೆದಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿತು.
ಆರಂಭದ ಎರಡು ಓವರ್ಗಳಲ್ಲಿ ಹಿಡಿತ ಸಾಧಿಸಿದ್ದ ಆರ್ಸಿಬಿ ಬೌಲರ್ಗಳು ಬಳಿಕ ಹಳಿ ತಪ್ಪಿದರು. ರಹಾನೆ ಸಿಕ್ಸರ್-ಬೌಂಡರಿಗಳ ಸುರಿಮಳೆಗೈದರು. ಕೇವಲ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಚಚ್ಚಿದರು. ಮತ್ತೊಂದು ತುದಿಯಲ್ಲಿ ನರೇನ್ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 44 ರನ್ ಗಳಿಸಿದರು. ಆದರೆ ರಹಾನೆ ಮತ್ತು ನರೈನ್ ಆಟವು ತಂಡದ ಮೊತ್ತವನ್ನು 230ರ ಗಡಿ ದಾಟಿಸುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಅದಕ್ಕೆ ಆರ್ಸಿಬಿ ಬೌಲರ್ಗಳು ಅವಕಾಶ ನೀಡಲಿಲ್ಲ. ಕೃನಾಲ್ ಪಾಂಡ್ಯ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದರು. ಆದರೆ ನರೇನ್ ಔಟಾದ ಬಳಿಕ ಆರ್ಸಿಬಿ ಮೇಲುಗೈ ಸಾಧಿಸಲು ಪ್ರಾರಂಭವಾಯಿತು.
ರಸಿಕ್ ಸಲಾಮ್ಗೆ ವೆಸ್ಟ್ ಇಂಡೀಸ್ ಆಟಗಾರ ಔಟಾದರೆ, ರಹಾನೆ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇದರ ಜೊತೆಗೆ ಕೃನಾಲ್ ಇನ್ನೆರಡು ವಿಕೆಟ್ ಕಿತ್ತರು. ವೆಂಕಟೇಶ್ ಅಯ್ಯರ್ (6), ರಿಂಕು ಸಿಂಗ್ರನ್ನು (12) ಕಡಿಮೆ ಮೊತ್ತಕ್ಕೆ ಔಟ್ ಮಾಡಿದರು. ಬಳಿಕ ಆಂಡ್ರೆ ರಸೆಲ್ (4), ರಮಣದೀಪ್ ಸಿಂಗ್ (6*) ನಿರಾಸೆ ಮೂಡಿಸಿದರು. ಇದು ಕೆಕೆಆರ್ ತಂಡದ ಮೊತ್ತ ದಿಢೀರ್ ಕುಸಿಯಲು ಕಾರಣವಾಯಿತು.
