ಜಿತೇಶ್ ಶರ್ಮಾ ಗುಡುಗು; ಐತಿಹಾಸಿಕ ರನ್ ಚೇಸ್ನೊಂದಿಗೆ ಮೊದಲ ಕ್ವಾಲಿಫೈಯರ್ಗೆ ಲಗ್ಗೆಯಿಟ್ಟ ಆರ್‌ಸಿಬಿ
ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಮೊದಲ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ.
ಜಿತೇಶ್ ಶರ್ಮಾ (85*) ಮತ್ತು ವಿರಾಟ್ ಕೊಹ್ಲಿ (54*) ಅವರ ಸ್ಫೋಟಕ ಆಟದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐತಿಹಾಸಿಕ ಗೆಲುವಿನೊಂದಿಗೆ 18ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ. ರಿಷಭ್ ಪಂತ್ ಪಡೆಯ ವಿರುದ್ಧ 228 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ಲೀಗ್ ಮುಗಿಸಿದೆ. ಇದೀಗ ಮೇ 29ರಂದು ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಉಳಿದಂತೆ ಎಲಿಮಿನೇಟರ್ನಲ್ಲಿ ಮೂರನೇ ಸ್ಥಾನಿ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕನೇ ಸ್ಥಾನಿ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಆದರೆ ಕೊನೆಯ ಲೀಗ್ ಪಂದ್ಯದಲ್ಲಿ ಶತಕ ಸಿಡಿಸಿ ಲಯಕ್ಕೆ ಮರಳಿದ ಹೊರತಾಗಿಯೂ ಲಕ್ನೋ ನಿರಾಸೆಯೊಂದಿಗೆ ಅಭಿಯಾನ ಮುಗಿಸಿತು.
ಇದೀಗ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯವು ಮೇ 29ರಂದು ಚಂಡೀಗಡದ ಮುಲ್ಲನ್ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ. ಆದರೆ ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರಲಿದೆ. ಎಲಿಮಿನೇಟರ್ನಲ್ಲಿ ಮುಂಬೈ ಮತ್ತು ಜಿಟಿ ನಡುವೆ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂದ ವಿರುದ್ಧ ಎರಡನೇ ಕ್ವಾಲಿಫೈಯರ್ನಲ್ಲಿ ಕಣಕ್ಕಿಳಿಯಲಿದೆ. ಇಲ್ಲಿ ಗೆದ್ದವರು ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದೆ. ಆದರೆ ಎಲಿಮಿನೇಟರ್ನಲ್ಲಿ ಸೋತರೆ ಮನೆಗೆ ಬರಲಿದೆ. 2011 ಮತ್ತು 2016ರಲ್ಲಿ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಆ ಎರಡೂ ಬಾರಿಯೂ ಬೆಂಗಳೂರು ರನ್ನರ್ಅಪ್ ಆಗಿತ್ತು. ಇದು ಐಪಿಎಲ್ ಇತಿಹಾಸದಲ್ಲಿ 3ನೇ ಅತಿ ದೊಡ್ಡ ರನ್ ಚೇಸ್ ಆಗಿದೆ.
ಆರ್‌ಸಿಬಿ vs ಲಕ್ನೋ ಸ್ಕೋರ್ ವಿವರ..
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡವು ರಿಷಭ್ ಪಂತ್ ಶತಕದ (118*) ಸ್ಫೋಟಕ ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವು ಜಿತೇಶ್ ಶರ್ಮಾ ಅಬ್ಬರದ (85*) ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆಯೇ ಗೆದ್ದು ಬೀಗಿದೆ. ಐಪಿಎಲ್ ರನ್ ಚೇಸ್ ಅವಧಿಯಲ್ಲಿ ಆರು ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಅತ್ಯಧಿಕ ರನ್ ಗಳಿಸಿದ ಹೆಗ್ಗಳಿಕೆಗೆ ಜಿತೇಶ್ ಶರ್ಮಾ ಒಳಗಾಗಿದ್ದಾರೆ. ಕೇವಲ 33 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 85 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ತವರಿನ ಹೊರಗೆ ಆಡಿದ ಎಲ್ಲಾ 7ಕ್ಕೆ ಏಳೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಜೊತೆಗೆ ಇದು ಆರ್‌ಸಿಬಿ ಐತಿಹಾಸಿಕ ರನ್ ಚೇಸ್ ಕೂಡ ಹೌದು. ಇದಕ್ಕೂ ಮುನ್ನ 215 ರನ್‌ಗಳ ಚೇಸ್ ಮಾಡಿದ್ದದ್ದು ದಾಖಲೆಯಾಗಿತ್ತು.
ಜಿತೇಶ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ನಡುವಿನ 107* ರನ್‌ಗಳ ಜೊತೆಯಾಟವು ಆರ್‌ಸಿಬಿ ಪರ 5ನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಗಳಿಸಿದ ಗರಿಷ್ಠ ಮೊತ್ತವಾಗಿದೆ. 2016ರ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ ನಡುವಿನ 91* ರನ್‌ಗಳ ಜೊತೆಯಾಟಕ್ಕಿಂತ ಇದು ಉತ್ತಮವಾಗಿದೆ. 227 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಫಿಲ್ ಸಾಲ್ಟ್ 30 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 8ನೇ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದರು. 54 ರನ್ ಗಳಿಸಿ ಔಟಾದರು. ರಜತ್ ಪಾಟೀದಾರ್ 14, ಲಿಯಾಮ್ ಲಿವಿಂಗ್ಸ್ಟೋನ್ ಡಕೌಟ್ ಆದರು. ಬಳಿಕ ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಲಕ್ನೋ ಬೌಲರ್ಗಳನ್ನು ಬೆಂಡೆತ್ತಿದರು. ಇಬ್ಬರು ಅಜೇಯರಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಮಯಾಂಕ್ 41 ರನ್ ಗಳಿಸಿ ಅಜೇಯರಾದರು.