2009ರಿಂದ ಸುಮ್ಮನಿದ್ದ ಆರ್​ಸಿಬಿ ಈಗ ಹಿಂದಿ ಖಾತೆ ತೆರೆದು ವಿವಾದ; ಸಿಡಿದೆದ್ದ ಕನ್ನಡಪರ ಸಂಘಟನೆಗಳು, ನೋಟಿಸ್ ಕೊಡ್ತಿನೆಂದ ಸಚಿವ
ಕನ್ನಡ ಸುದ್ದಿ  /  ಕ್ರಿಕೆಟ್  /  2009ರಿಂದ ಸುಮ್ಮನಿದ್ದ ಆರ್​ಸಿಬಿ ಈಗ ಹಿಂದಿ ಖಾತೆ ತೆರೆದು ವಿವಾದ; ಸಿಡಿದೆದ್ದ ಕನ್ನಡಪರ ಸಂಘಟನೆಗಳು, ನೋಟಿಸ್ ಕೊಡ್ತಿನೆಂದ ಸಚಿವ

2009ರಿಂದ ಸುಮ್ಮನಿದ್ದ ಆರ್​ಸಿಬಿ ಈಗ ಹಿಂದಿ ಖಾತೆ ತೆರೆದು ವಿವಾದ; ಸಿಡಿದೆದ್ದ ಕನ್ನಡಪರ ಸಂಘಟನೆಗಳು, ನೋಟಿಸ್ ಕೊಡ್ತಿನೆಂದ ಸಚಿವ

RCB Hindi Page: ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಇರಲಾರದೆ ಇರುವೆ ಬಿಟ್ಟುಕೊಂಡು ವಿವಾದವನ್ನು ಮೈಮೇಲೆ ಎಳದುಕೊಂಡಿದೆ. ಹಿಂದಿ ಖಾತೆ ತೆರೆಯುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

2009ರಿಂದ ಸುಮ್ಮನಿದ್ದ ಆರ್​ಸಿಬಿ ಈಗ ಹಿಂದಿ ಖಾತೆ ತೆರೆದು ವಿವಾದ; ಸಿಡಿದೆದ್ದ ಕನ್ನಡಪರ ಸಂಘಟನೆಗಳು, ನೋಟಿಸ್ ಕೋಡ್ತಿನೆಂದ ಸಚಿವ
2009ರಿಂದ ಸುಮ್ಮನಿದ್ದ ಆರ್​ಸಿಬಿ ಈಗ ಹಿಂದಿ ಖಾತೆ ತೆರೆದು ವಿವಾದ; ಸಿಡಿದೆದ್ದ ಕನ್ನಡಪರ ಸಂಘಟನೆಗಳು, ನೋಟಿಸ್ ಕೋಡ್ತಿನೆಂದ ಸಚಿವ

ಬೆಂಗಳೂರು: ಸೌದಿ ಅರೇಬಿಯಾದ ಜೆದ್ದಾದಲ್ಲಿ ಎರಡು ದಿನಗಳ ಕಾಲ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​​ 2025 ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಆಟಗಾರರನ್ನು ಖರೀದಿಸಿದೆ. ರಿಟೈನ್ ಮಾಡಿಕೊಂಡಿದ್ದ ಮೂವರು ಸೇರಿ ಒಟ್ಟು 22 ಆಟಗಾರರ ತಂಡ ನಿರ್ಮಾಣವಾಗಿದೆ. ಆದರೆ ಹಲವು ವರ್ಷಗಳಿಂದ ಸುಮ್ಮನಿದ್ದ ಆರ್​​ಸಿಬಿ, ಇದೀಗ ಇರಲಾರದೆ ಇರುವೆ ಬಿಟ್ಟುಕೊಂಡು ವಿವಾದವನ್ನು ಮೈಮೇಲೆ ಎಳದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 2009ರಿಂದ ಸುಮ್ಮನಿದ್ದ ಆರ್​ಸಿಬಿ ಇದೀಗ ತನ್ನ ಹೆಸರಿನಲ್ಲಿ ಹಿಂದಿ ಖಾತೆ ತೆರೆದಿದೆ. ಏಕೆಂದರೆ 2009ರಲ್ಲಿ ಟ್ವಿಟರ್​ ಹೊಸದಾಗಿ ತೆರೆದಿತ್ತು.

2025ರ ಐಪಿಎಲ್​ಗೆ ಸಿದ್ದತೆಗಳು ಪ್ರಾರಂಭವಾಗುತ್ತಿದ್ದಂತೆ ಕರ್ನಾಟಕ ಮೂಲದ ಫ್ರಾಂಚೈಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. 2008 ರಿಂದ ಐಪಿಎಲ್ ಟ್ರೋಫಿಯನ್ನು ಗೆಲ್ಲದಿದ್ದರೂ ಅಚಲ ಬೆಂಬಲವನ್ನು ಹೊಂದಿರುವ ತಂಡವು ತನ್ನ ಇತ್ತೀಚಿನ ನಿರ್ಧಾರಗಳಿಂದ ಟೀಕೆಗಳನ್ನು ಎದುರಿಸುತ್ತಿದೆ. ಮೊದಲೇ ಹರಾಜಿನಲ್ಲಿ ಆಟಗಾರರ ಆಯ್ಕೆಯ ಬಗ್ಗೆ ಅತೃಪ್ತ ವ್ಯಕ್ತಪಡಿಸಿದ್ದ ಅಭಿಮಾನಿಗಳು, ಆರ್​ಸಿಬಿ ಹಿಂದಿ ಹೇರಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಿಂದಿ ಖಾತೆಯನ್ನು ತೆರೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಆರ್​ಸಿಬಿ, ಹಿಂದಿಗಿಂತ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಅಭಿಮಾನಿಗಳು ಮೊದಲಿನಿಂದಲೂ ಒಕ್ಕೊರಲಿನಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಇದರ ನಡುವೆಯೂ @RCBinHindi ಈ ಹೆಸರಿನಲ್ಲಿ ಹಿಂದಿಯನ್ನು ಉತ್ತೇಜಿಸುವ ಸಲುವಾಗಿ ತೆರೆಯಲಾಗಿದೆ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ಕನ್ನಡದಲ್ಲೂ ಪುಟ ಆರಂಭಿಸಿದೆ. ಆದರೆ ಇದು ನೆಪಮಾತ್ರಕ್ಕೆ ಎನ್ನುತ್ತಿದ್ದಾರೆ ಕನ್ನಡಿಗರು. ಇವೆರಡಕ್ಕಿಂತ ಮೊದಲು ಇಂಗ್ಲೀಷ್ ಖಾತೆ ಇತ್ತು. ಹೀಗಾಗಿ, ಮೂರು ಪ್ರತ್ಯೇಕ ಖಾತೆ ನಿರ್ವಹಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಆರ್​ಸಿಬಿ ಖಾತೆಗಳು

1. @RCBTweets - ಇಂಗ್ಲಿಷ್ ಖಾತೆ

2. @RCBinKannada - ಕನ್ನಡ ಖಾತೆ

3. @RCBinHindi - ಹಿಂದಿ ಖಾತೆ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ಸೇರಿ ಉಳಿದ ಐಪಿಎಲ್ ತಂಡಗಳು ಒಂದೇ ಖಾತೆಯಲ್ಲಿ ನಿರ್ವಹಿಸುತ್ತಿವೆ. ಪ್ರಾದೇಶಿಕ ಭಾಷೆಗಳನ್ನು ಹೊಂದಿರುವ ಸಿಎಸ್​ಕೆ, ಎಸ್​ಆರ್​ಹೆಚ್​ ತಂಡಗಳು ಮೂರ್ನಾಲ್ಕು ಖಾತೆಗಳನ್ನು ತೆರೆಯದೆ ಬಹು ಭಾಷೆಗಳಲ್ಲಿ ಪೋಸ್ಟ್ ಮಾಡುತ್ತಿವೆ ಎಂದಿರುವ ಕನ್ನಡಿಗರು ಇತರ ಭಾಷೆಗಳ ಜೊತೆಗೆ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸುವ ಬೆಂಗಳೂರು ಎಫ್‌ಸಿ (ಫುಟ್‌ಬಾಲ್) ಮತ್ತು ಬೆಂಗಳೂರು ಬುಲ್ಸ್ (ಪ್ರೊ ಕಬಡ್ಡಿ) ನಂತಹ ಇತರ ಬೆಂಗಳೂರು ಮೂಲದ ಫ್ರಾಂಚೈಸ್ ಉಲ್ಲೇಖಿಸಿ ಕಿಡಿಕಾರಿದ್ದಾರೆ.

ರೂಪೇಶ್ ರಾಜಣ್ಣ ಆಕ್ರೋಶ

ಆರ್​​ಸಿಬಿ ಅಭಿಮಾನಿಗಳು ಜಗತ್ತಿನಲ್ಲೆಡೆ ಇದ್ದಾರೆ. ಹಾಗಾದರೆ ಉಳಿದ ತಂಡಗಳ ಅಭಿಮಾನಿಗಳು ಸಹ ಕರ್ನಾಟಕದಲ್ಲಿದ್ದಾರೆ. ಚೆನ್ನೈ, ಮುಂಬೈ, ಗುಜರಾತ್ ಸೇರಿದಂತೆ ಎಲ್ಲಾ ತಂಡಗಳು ಅಭಿಮಾನಿಗಳೂ ನಮ್ಮದಲ್ಲಿದ್ದಾರೆ. ಕರ್ನಾಟಕದಲ್ಲಿ ನಮ್ಮ ಅಭಿಮಾನಿಗಳಿದ್ದಾರೆ ಎಂದು ಈ ತಂಡಗಳು ಏಕೆ ಖಾತೆ ತೆರೆಯಲಿಲ್ಲ. ಈ ಫ್ರಾಂಚೈಸಿಗಳು ಮಾಡದ ಕೆಲಸವನ್ನು ಆರ್​ಸಿಬಿ ಮಾಡಿದ್ದೇಕೆ? ಹಿಂದಿಯಲ್ಲೇ ಏಕೆ ತೆರೆಯಬೇಕಿತ್ತು. ಹಾಗಿದ್ದರೆ ಭಾರತದಲ್ಲಿ ಮಾತನಾಡುವ ಎಲ್ಲಾ ಭಾಷೆಗಳಲ್ಲಿ ಖಾತೆ ತೆರೆಯಬೇಕಿತ್ತು. ನಮಗೆ ನಮ್ಮ ಭಾಷೆಯಲ್ಲಿ ಸೇವೆ ಕೊಡಿ ಎಂದು ಕೇಳುತ್ತಿದ್ದೇವೆ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟಿಸ್ ಕೊಡುತ್ತೇವೆ ಎಂದ ಸಚಿವ

ಆರ್​ಸಿಬಿ ಮೇಲೆ ಕರ್ನಾಟಕ ಜನರಿಗೆ ವಿಶೇಷ ಗೌರವ ಇದೆ. ಆರ್​ಸಿಬಿ ಅಂದರೆ ಕರ್ನಾಟಕ ತಂಡ, ಬೆಂಗಳೂರು ತಂಡ ಎನ್ನುವ ಭಾವನೆ ಇದೆ. ನಿಮ್ಮಲ್ಲಿ ವಿನಂತಿಸುವುದು ಏನೆಂದರೆ, ಕನ್ನಡದ ಮನಸ್ಸುಗಳಿಗೆ ನೋವು ಮಾಡದಂತೆ ನೋಡಿಕೊಳ್ಳಿ. ಇಂಗ್ಲಿಷ್ ಪುಟದ ಹಿಂದಿ ಪೇಜ್ ತೆರೆದಿರುವುದೇಕೆ? ಕನ್ನಡದ ಮನಸ್ಸುಗಳನ್ನು ಗೆಲ್ಲಿ. ಇಲ್ಲದಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಟಿಸ್ ನೀಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಖಾಸಗಿ ಮಾಧ್ಯಮದಲ್ಲಿ ಹೇಳಿದ್ದಾರೆ.

ಹಿಂದಿ ಪುಟವನ್ನು ಶೀಘ್ರದಲ್ಲೇ ಮುಚ್ಚುವಂತೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸುವ ಮೂಲಕ ಆರ್​ಸಿಬಿ ಫ್ರಾಂಚೈಸಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದಿ ಹೇರಿಕೆ ಸಲ್ಲದು, ಖಾತೆ ರದ್ದುಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಕನ್ನಡ ಭಾಷಿಕರನ್ನು ಗೌರವಿಸುವತ್ತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

Whats_app_banner