2016ರಲ್ಲಿ ಇದೇ ರೀತಿ ಪ್ಲೇಆಫ್ ಪ್ರವೇಶಿಸಿತ್ತು ಆರ್ಸಿಬಿ; 2024ರಲ್ಲೂ ಕುದುರುತ್ತಾ ಅದೇ ಲಕ್? ಆದರೆ ಅಸಾಧ್ಯವಂತೂ ಅಲ್ಲ!
Royal challengers Bengaluru : 2016ರ ಐಪಿಎಲ್ ಅನ್ನು ಸ್ಫೂರ್ತಿಯಾಗಿ ಪಡೆದು ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು ಅಸಾಧ್ಯವಾದದ್ದನ್ನು ಸಾಧಿಸಿ ಪ್ಲೇಆಫ್ ಪ್ರವೇಶಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಇದೆ ಅವಕಾಶ.

ಹೊಸ ಅಧ್ಯಾಯವೆಂದು 2024ರ ಐಪಿಎಲ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bengaluru) ಸತತ ಸೋಲುಗಳೊಂದಿಗೆ ಮುಖಭಂಗಕ್ಕೆ ಒಳಗಾಗಿದೆ. ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತು 1ರಲ್ಲಿ ಮಾತ್ರ ಗೆದ್ದಿದೆ. ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ. ಇದು ಪ್ಲೇಆಫ್ ಹಾದಿ ದುರ್ಗಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಉಳಿದ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆದ್ದರಷ್ಟೆ ಉಳಿಗಾಲ. ಹಾಗಂತ ಇದು ಅಸಾಧ್ಯವೇನು ಅಲ್ಲ. 2016ರಲ್ಲೂ ಇದೇ ರೀತಿ ಫೈನಲ್ ಪ್ರವೇಶಿಸಿತ್ತು ಎಂಬುದನ್ನು ಇಲ್ಲಿ ಮರೆಯುವಂತಿಲ್ಲ.
ಪ್ರಸ್ತುತ ಪ್ಲೇಆಫ್ ಹಾದಿ ತೀವ್ರ ಕಠಿಣವಾಗಿದೆ. ಬಾಕಿ ಉಳಿದಿರುವ 8 ಪಂದ್ಯಗಳಲ್ಲಿ 7ರಲ್ಲಿ ಜಯದ ನಗೆ ಬೀರುವುದು ಅನಿವಾರ್ಯ. ಈಗಾಗಲೇ ಒಂದು ಪಂದ್ಯ ಗೆದ್ದಿರುವ ಕಾರಣ, ಉಳಿದ 8ರಲ್ಲಿ 7 ಗೆದ್ದರೆ ಒಟ್ಟು 16 ಅಂಕಗಳೊಂದಿಗೆ ಅಗ್ರ-4ರಲ್ಲಿ ಸ್ಥಾನ ಪಡೆಯಲಿದೆ. ಇದು ಕಠಿಣವಾದರೂ 7 ಜಯ ಸಾಧಿಸುವುದು ಅಸಾಧ್ಯವೇನಲ್ಲ. ಏಕೆಂದರೆ 2016ರ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಇಂತಹದ್ದೇ ಪರಿಸ್ಥಿತಿ ಎದುರಿಸಿತ್ತು. ಆದರೂ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಫೈನಲ್ಗೂ ಎಂಟ್ರಿಕೊಟ್ಟಿತ್ತು. 2016ರ ಆವೃತ್ತಿಯನ್ನು ಸ್ಫೂರ್ತಿಯಾಗಿ ಪಡೆದು ಲಯಕ್ಕೆ ಮರಳಬೇಕಿದೆ.
2016ರಲ್ಲೂ 7ರಲ್ಲಿ ಗೆದ್ದಿದ್ದೇ 2ರಲ್ಲಿ!
2016ರ ಸೀಸನ್ನಲ್ಲೂ ಆರ್ಸಿಬಿ ಉತ್ತಮ ಆರಂಭ ಹೊಂದಿರಲಿಲ್ಲ. ಮೊದಲ ಪಂದ್ಯದಲ್ಲಿ ಜಯದ ನಗೆ ಬೀರಿತ್ತಾದರೂ ತನ್ನ ಆರಂಭಿಕ 7 ಪಂದ್ಯಗಳಲ್ಲಿ ಗೆದ್ದಿದ್ದೇ 2ರಲ್ಲಿ. 5ರಲ್ಲಿ ಸೋತಿತ್ತು. ಅಂಕಪಟ್ಟಿಯಲ್ಲೂ ಕೊನೆಯಲ್ಲಿತ್ತು. ಈ 7 ಪಂದ್ಯಗಳಲ್ಲೂ ವಿರಾಟ್ ಕೊಹ್ಲಿಯೇ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಎಬಿ ಡಿವಿಲಿಯರ್ಸ್, ಕೊಹ್ಲಿ ಸಖತ್ ಸಾಥ್ ನೀಡಿದ್ದರು. ಆ ಬಳಿಕ ಲಯಕ್ಕೆ ಮರಳಿದ ಆರ್ಸಿಬಿ, ಉಳಿದಿದ್ದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಬೀಗಿತ್ತು. ಇದರೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. ತಂಡಗಳಲ್ಲಿ ನಡುಕ ಹುಟ್ಟಿಸಿತ್ತು ಆರ್ಸಿಬಿ.
ಒಟ್ಟು 14 ಪಂದ್ಯಗಳಲ್ಲಿ 8ರಲ್ಲಿ ವಿಜಯ ಸಾಧಿಸಿ 16 ಅಂಕ ಪಡೆದಿತ್ತು. +0.932 ರನ್ ರೇಟ್ ಪಡೆದಿತ್ತು. ಅಂದು ಅಗ್ರಸ್ಥಾನಿಗಳಾದ ಆರ್ಸಿಬಿ ಮತ್ತು ಗುಜರಾತ್ ಲಯನ್ಸ್ ತಂಡಗಳು ಮೊದಲ ಕ್ವಾಲಿಫೈಯರ್ನಲ್ಲಿ ಕಣಕ್ಕಿಳಿದಿದ್ದವು. ಆರ್ಸಿಬಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಆದರೆ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 8 ರನ್ಗಳ ಅಂತರದಿಂದ ಆರ್ಸಿಬಿ ಸೋಲನುಭವಿಸಿತ್ತು. ಹಾಗಾಗಿ ತಮ್ಮ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತ್ತು. ಅದೇ ರೀತಿ 2024ರಲ್ಲೂ ಮಿಂಚಿ ಹೊಸ ಅಧಾಯ ಆರಂಭಿಸಲು ಆರ್ಸಿಬಿಗೆ ಇದು ಉತ್ತಮ ಅವಕಾಶ.
ಆರ್ಸಿಬಿಗೆ ಈಗಲೂ ಅವಕಾಶ ಇದೆ!
ಹೌದು, 17ನೇ ಆವೃತ್ತಿಯಲ್ಲಿ ಆರ್ಸಿಬಿ ಆಟ ಇನ್ನೂ ಮುಗಿದಿಲ್ಲ. ಬೆಂಗಳೂರಿಗೆ ಅಗ್ರ 4ರಲ್ಲಿ ಸ್ಥಾನ ಪಡೆಉಯಲು ಇನ್ನೂ ಅವಕಾಶ ಇದೆ. ಈಗಲೂ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಸಿಡಿದೆದ್ದು ಲಯಕ್ಕೆ ಮರಳಿದರೆ, ಉಳಿದ 8 ಪಂದ್ಯಗಳನ್ನೂ ಗೆಲ್ಲಬಹುದು. 2016ರ ಸ್ಫೂರ್ತಿ ಪಡೆದು ಆಡಿದರೆ, ಇದು ಅಸಾಧ್ಯವೇ ಅಲ್ಲ. 8ಕ್ಕೆ ಎಂಟೂ ಗೆದ್ದರೆ ಒಟ್ಟು 18 ಅಂಕಗಳೊಂದಿಗೆ ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ. 7ರಲ್ಲಿ ಗೆಲುವು ದಾಖಲಿಸಿದರೆ, ಒಟ್ಟು 16 ಅಂಕ ಪಡೆದು ಪ್ಲೇಆಫ್ಗೆ ಪ್ರವೇಶಿಸಲಿದೆ. ಆದರೆ ನೆಟ್ ರನ್ ರೇಟ್ ಮತ್ತು ಉಳಿದ ತಂಡಗಳ ಫಲಿತಾಂಶವೂ ಇಲ್ಲಿ ಪರಿಣಾಮ ಬೀರುತ್ತದೆ.
ಕ್ರ.ಸಂ | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1 | ರಾಜಸ್ಥಾನ್ ರಾಯಲ್ಸ್ | 6 | 5 | 1 | 10 | +0.767 |
2 | ಕೋಲ್ಕತ್ತಾ ನೈಟ್ ರೈಡರ್ಸ್ | 4 | 3 | 1 | 6 | +1.528 |
3 | ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 6 | +0.666 |
4 | ಲಕ್ನೋ ಸೂಪರ್ ಜೈಂಟ್ಸ್ | 5 | 3 | 2 | 6 | +0.436 |
5 | ಸನ್ ರೈಸರ್ಸ್ ಹೈದರಾಬಾದ್ | 5 | 3 | 2 | 6 | +0.344 |
6 | ಗುಜರಾತ್ ಟೈಟಾನ್ಸ್ | 6 | 3 | 3 | 6 | -0.637 |
7 | ಮುಂಬೈ ಇಂಡಿಯನ್ಸ್ | 5 | 2 | 3 | 4 | -0.073 |
8 | ಪಂಜಾಬ್ ಕಿಂಗ್ಸ್ | 6 | 2 | 4 | 4 | -0.218 |
9 | ದೆಹಲಿ ರಾಜಧಾನಿಗಳು | 6 | 2 | 4 | 4 | -0.975 |
10 | ರಾಯಲ್ ಚಾಲೆಂಜರ್ಸ್ ಬೆಂಗಳೂರು | 6 | 1 | 5 | 2 | -1.124 |
