ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿಗೆ 47 ರನ್​ಗಳ ಗೆಲುವು; ಸತತ 5ನೇ ಜಯದೊಂದಿಗೆ ಪ್ಲೇಆಫ್​ ಆಸೆ ಜೀವಂತ
ಕನ್ನಡ ಸುದ್ದಿ  /  ಕ್ರಿಕೆಟ್  /  ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿಗೆ 47 ರನ್​ಗಳ ಗೆಲುವು; ಸತತ 5ನೇ ಜಯದೊಂದಿಗೆ ಪ್ಲೇಆಫ್​ ಆಸೆ ಜೀವಂತ

ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿಗೆ 47 ರನ್​ಗಳ ಗೆಲುವು; ಸತತ 5ನೇ ಜಯದೊಂದಿಗೆ ಪ್ಲೇಆಫ್​ ಆಸೆ ಜೀವಂತ

RCB vs DC Highlights: 17ನೇ ಆವೃತ್ತಿಯ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 47 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಪ್ಲೇಆಫ್​ ಜೀವಂತವಾಗಿರಿಸಿದೆ.

ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿಗೆ 47 ರನ್​ಗಳ ಗೆಲುವು; ಸತತ 5ನೇ ಜಯದೊಂದಿಗೆ ಪ್ಲೇಆಫ್​ ಆಸೆ ಜೀವಂತ
ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿಗೆ 47 ರನ್​ಗಳ ಗೆಲುವು; ಸತತ 5ನೇ ಜಯದೊಂದಿಗೆ ಪ್ಲೇಆಫ್​ ಆಸೆ ಜೀವಂತ (ANI)

ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಆಲ್​ರೌಂಡ್ ಪ್ರದರ್ಶನ ತೋರಿದ ಆರ್​ಸಿಬಿ, ಸತತ 5ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆರ್​ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ಈ ಪಂದ್ಯ ನಡೆಯಲಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿತು. ಮೊದಲ 10 ಓವರ್​ಗಳಲ್ಲಿ ಅಬ್ಬರಿಸಿ ಕೊನೆಯಲ್ಲಿ ರನ್ ಗಳಿಸಲು ತಡಬಡಾಯಿತು. ಆದರೂ 20 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಆರ್​​ಸಿಬಿ ಬೌಲರ್​​ಗಳ ಮಾರಕ ದಾಳಿಗೆ ತತ್ತರಿಸಿತು. 19.1 ಓವರ್​​ಗಳಲ್ಲಿ 140ಕ್ಕೆ ಆಲೌಟ್ ಆಯಿತು.

ಅಕ್ಷರ್ ಪಟೇಲ್​ ಹೋರಾಟ ವ್ಯರ್ಥ

188 ರನ್​ಗಳ ಸವಾಲು ಬೆನ್ನಟ್ಟಿದ ಡಿಸಿ, ಪವರ್​​ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡೇವಿಡ್ ವಾರ್ನರ್, ಅಭಿಷೇಕ್ ಪೊರೆಲ್, ಜೇಕ್​ ಫ್ರೇಸರ್​ ಮೆಕ್​ಗುರ್ಕ್​, ಕುಮಾರ್ ಕುಶಾಗ್ರ ತಂಡದ ಮೊತ್ತ 30 ರನ್​ ಆಗಿದ್ದಾಗಲೇ ಔಟಾದರು. ಆದರೆ ಶಾಯ್ ಹೋಪ್ ಮತ್ತು ಅಕ್ಷರ್ ಪಟೇಲ್​ ಕೆಲಹೊತ್ತು ಹೋರಾಟ ನಡೆಸಿದರು. ಆದರೆ ಹೋಪ್​ 29 ರನ್ ಗಳಿಸಿ ತನ್ನ ಹೋಪ್ ಕಳೆದುಕೊಂಡರು. ಆದರೆ ಅಕ್ಷರ್​ ಹೋರಾಟ ಮುಂದುವರೆಸಿದರು.

ಸತತ ವಿಕೆಟ್​​ಗಳ ಪತನದ ನಡುವೆಯೂ ಸ್ಫೋಟಕ ಬ್ಯಾಟಿಂಗ್​​ ನಡೆಸಿ ಭರ್ಜರಿ ಹಾಫ್​ ಸೆಂಚುರಿ ಬಾರಿಸಿದ ಅಕ್ಷರ್​, 39 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 59 ರನ್ ಸಿಡಿಸಿ ಯಶ್ ದಯಾಳ್ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಟ್ರಿಸ್ಟಾನ್ ಸ್ಟಬ್ಸ್ (3) ಅನಗತ್ಯ ರನ್​ ಗಳಿಸಲು ಯತ್ನಿಸಿ ರನೌಟ್ ಆದರು. ಬೆಂಗಳೂರು ಬೌಲರ್​​​ಗಳು ಮಾರಕ ಬೌಲಿಂಗ್ ದಾಳಿ ನಡೆಸಿದ ಪರಿಣಾಮ ಡೆಲ್ಲಿ 140 ರನ್​ಗಳಿಗೆ ಕುಸಿತ ಕಂಡಿತು. ದಯಾಳ್ 3 ವಿಕೆಟ್, ಲಾಕಿ ಫರ್ಗ್ಯುಸನ್ 2, ಸಿರಾಜ್, ಸ್ವಪ್ನಿಲ್, ಗ್ರೀನ್ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ರಜತ್​ ಪಾಟೀದಾರ್ ಮಿಂಚು

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ಬಿರುಸಿನ ಆರಂಭಕ್ಕೆ ಒತ್ತು ಕೊಟ್ಟಿತು. ಆದರೆ, ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಬೇಗನೇ ಔಟಾದರು. ಆಗ ತಂಡದ ಮೊತ್ತ 36/2. ಕೊಹ್ಲಿ 13 ಎಸೆತಗಳಲ್ಲಿ 3 ಸಿಕ್ಸರ್​, 1 ಬೌಂಡರಿ ಸಹಿತ 27 ರನ್ ಚಚ್ಚಿದರು. ಆ ಬಳಿಕ ಜೊತೆಯಾದ ರಜತ್ ಪಾಟೀದಾರ್ ಮತ್ತು ವಿಲ್ ಜಾಕ್ಸ್​, 88 ರನ್​ಗಳ ಪಾಲುದಾರಿಕೆ ಒದಗಿಸಿದರು. ಆ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಇದೇ ವೇಳೆ ರಜತ್ ಪಾಟೀದಾರ್ ಮತ್ತೊಂದು ಅರ್ಧಶತಕ ಸಿಡಿಸಿದರು.

ಪಾಟೀದಾರ್ 32 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 3 ಬೌಂಡರಿ ಸಹಿತ 52 ರನ್ ಬಾರಿಸಿದರು. ಈ ಐಪಿಎಲ್​ನಲ್ಲಿ ಅವರ 5ನೇ ಅರ್ಧಶತಕವಾಗಿದೆ. ಅಚ್ಚರಿ ಏನೆಂದರೆ, ಈ ಐದು ಅರ್ಧಶತಕಗಳಲ್ಲಿ ಒಮ್ಮೆಯೂ 60 ರ ಗಡಿ ದಾಟಿಲ್ಲ. ವಿಲ್​ ಜಾಕ್ಸ್​ ಮಹತ್ವದ 41 ರನ್ ಸಿಡಿಸಿದರೆ, ಕ್ಯಾಮರೂನ್ ಗ್ರೀನ್ ಕೊನೆಯಲ್ಲಿ ಅಜೇಯ 32 ರನ್​ಗಳ ಕಾಣಿಕೆ ನೀಡಿದರು. ಆದರೆ ಮಹಿಪಾಲ್ ಲೊಮ್ರೊರ್ (13), ದಿನೇಶ್ ಕಾರ್ತಿಕ್ (0), ಸ್ವಪ್ನಿಲ್ ಸಿಂಗ್ (0) ನಿರಾಸೆ ಮೂಡಿಸಿದರು. ಡೆಲ್ಲಿ ಪರ ಖಲೀಲ್ ಅಹ್ಮದ್, ರಸಿಖ್ ಸಲಾಮ್ ತಲಾ 2, ಕುಲ್ದೀಪ್, ಮುಕೇಶ್, ಇಶಾಂತ್ ತಲಾ 1 ವಿಕೆಟ್ ಕಬಳಿಸಿ ಮಿಂಚಿದರು.

Whats_app_banner