ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್‌ಕೆಗೆ ನಡುಕ ಶುರು; ಮೇ 18ರಂದು ಆರ್‌ಸಿಬಿ ಅಜೇಯ; ವಿರಾಟ್ ಕೊಹ್ಲಿ ಅಮೋಘ ದಾಖಲೆ
ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಆರನೇ ಸ್ಥಾನದಲ್ಲಿದೆ. ಪ್ಲೇಆಫ್ ರೇಸ್‌ನಲ್ಲಿರುವ ತಂಡವು, ಮೇ 18ರಂದು ಸಿಎಸ್‌ಕೆ ತಂಡವನ್ನು ಎದುರಿಸಲು ಸಜ್ಜಾಗಿದೆ. ಈವರೆಗೆ ಮೇ 18ರಂದು ಆರ್‌ಸಿಬಿ ತಂಡ ಯಾವ ರೀತಿ ಪ್ರದರ್ಶನ ನೀಡಿದೆ ಎಂಬುದನ್ನು ನೋಡೋಣ.
ಐಪಿಎಲ್ 2024ರಲ್ಲಿ ಸದ್ಯ ಆರ್‌ಸಿಬಿ ತಂಡ ಪ್ರಚಂಡ ಫಾರ್ಮ್‌ನಲ್ಲಿದೆ. ಮೇಲಿಂದ ಮೇಲೆ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದೀಗ ಸತತ ಐದು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್ ರೇಸ್‌ಗೆ ಹತ್ತಿರವಾಗಿದೆ. ಸದ್ಯ ತಂಡದ ಮುಂದೆ ಮೇ 18ರ ಶನಿವಾರದಂದು ಮಹತ್ವದ ಹಾಗೂ ನಿರ್ಣಾಯಕ ಪಂದ್ಯವಿದೆ. ಅದು ಸಿಎಸ್‌ಕೆ ವಿರುದ್ಧ. ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಾಫ್ ಡುಪ್ಲೆಸಿಸ್ ಬಳಗವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯವು ಬಹುತೇಕ ಎಲಿಮನೇಟರ್ ಪಂದ್ಯದಂತಾಗಿದ್ದು, ಬೃಹತ್ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಸಂಪಾದಿಸಿದರೆ, ಆರ್‌ಸಿಬಿಯು ಪ್ಲೇಆಫ್ ಪ್ರವೇಶ ಪಡೆಯಲಿದೆ. ಸೋತರೆ ಎಲಿಮನೇಟ್ ಆಗಲಿದೆ.
ಡೆಲ್ಲಿ ಹಾಗೂ ಲಕ್ನೋ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸುವುದರೊಂದಿಗೆ, ಪ್ಲೇಆಫ್ ಲೆಕ್ಕಾಚಾರ ಸರಳವಾಗಿದೆ. ಹೀಗಾಗಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ಹರಿದಿದೆ. ಉಭಯ ತಂಡಗಳು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ಇಲ್ಲಿ ಗೆದ್ದರೆ ಪ್ಲೇಆಫ್ ಸ್ಥಾನ ಖಚಿತವಾಗಲಿದ್ದು, ಆರ್‌ಸಿಬಿಯ ತವರಿನ ಅಭಿಮಾನಿಗಳು ಗೆಲುವಿಗಾಗಿ ಕಾಯುತ್ತಿದ್ದಾರೆ.
ಈಗಾಗಲೇ ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿವೆ. ಚೆಪಾಕ್‌ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಿತ್ತು. ಇದೀಗ ಮೇ 18ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳು ಎರಡನೇ ಬಾರಿ ಎದುರಾಗುತ್ತಿವೆ. ಇಲ್ಲಿ ಗೆಲ್ಲುವ ಮೂಲಕ ಚೆನ್ನೈ ತಂಡವನ್ನು ಟೂರ್ನಿಯಿಂದ ಹೊರಹಾಕಿ, ತಾನು ಪ್ಲೇಆಫ್ ಪ್ರವೇಶಿಸುವ ಇರಾದೆಯಲ್ಲಿದೆ.
ಮೇ 18ರಂದು ಸೋತೇ ಇಲ್ಲ ಆರ್‌ಸಿಬಿ
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದು ಆರ್‌ಸಿಬಿ ಫ್ಯಾನ್ಸ್ ಪಾಲಿಗೆ ವಿಶೇಷ. ಏಕೆಂದರೆ, ಐಪಿಎಲ್ ಇತಿಹಾಸದಲ್ಲಿ ಮೇ 18ರಂದು ಆಡಿದ ಪಂದ್ಯದಲ್ಲಿ ಆರ್‌ಸಿಬಿ ಸೋತೇ ಇಲ್ಲ. ಸಿಎಸ್‌ಕೆ ವಿರುದ್ಧವೂ ಈ ದಿನ ಆಡಿದ ಪಂದ್ಯದಲ್ಲಿ ಬೆಂಗಳೂರು ತಂಡ ಅಜೇಯವಾಗಿದೆ.
ವಿರಾಟ್ ಕೊಹ್ಲಿ ಪ್ರಚಂಡ ಪ್ರದರ್ಶನ
2013ರಿಂದ ಆರ್‌ಸಿಬಿ ತಂಡವು ಮೇ 18ರಂದು ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಇದುವರೆಗೂ ಒಂದು ಪಂದ್ಯವನ್ನೂ ಸೋತಿಲ್ಲ. ಇನ್ನೂ ವಿಶೇಷವೆಂದರೆ, ವಿರಾಟ್ ಕೊಹ್ಲಿ ಮೇ 18ರಂದು ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿದ್ದಾರೆ. ಈ ದಿನ ವಿರಾಟ್ ಹಾಗೂ ಆರ್‌ಸಿಬಿ ಪಾಲಿಗೆ ಅದೃಷ್ಟದ ದಿನ ಎನ್ನಲಾಗಿದೆ. ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ ಕೂಡಾ 18 ಆಗಿದ್ದು, ಈ ಬಾರಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ
2013 ಮತ್ತು 2014ರಲ್ಲಿ ಆರ್‌ಸಿಬಿ ತಂಡವು ಮೇ 18ರಂದು ಹಳದಿ ಆರ್ಮಿ ವಿರುದ್ಧ ಆಡಿತ್ತು. 2013ರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 56 ರನ್ ಸಿಡಿಸುವ ಮೂಲಕ ತಂಡವನ್ನು ಗೆಲ್ಲಿಸಿದ್ದರು. ಆ ಬಳಿಕ 2014ರ ಪಂದ್ಯದಲ್ಲಿ 27 ರನ್ ಗಳಿಸಿದ್ದರು.
ಎರಡು ಶತಕ
2016ರ ಮೇ 18ರಂದು ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರ್‌ಸಿಬಿ 82 ರನ್‌ಗಳಿಂದ ಭರ್ಜರಿ ವಿಜಯ ಸಾಧಿಸಿತು. ವಿರಾಟ್ ಕೊಹ್ಲಿ ಕೇವಲ 50 ಎಸೆತಗಳಲ್ಲಿ 113 ರನ್ ಗಳಿಸುವ ಮೂಲಕ ಶತಕ ಸಾಧನೆ ಮಾಡಿದರು. ಕೊನೆಯ ಬಾರಿಗೆ ಕಳೆದ ಆವೃತ್ತಿಯಲ್ಲಿ, ಅಂದರೆ 2023ರಲ್ಲಿ ಮೇ 18ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಆರ್‌ಸಿಬಿ 8 ವಿಕೆಟ್‌ಗಳಿಂದ ಮಣಿಸಿತ್ತು. ವಿರಾಟ್ ಕೊಹ್ಲಿ 100 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಇದೀಗ ಈ ಬಾರಿ ಇದೇ ಮೇ 18ರಂದು ಆರ್‌ಸಿಬಿಯು ಸಿಎಸ್‌ಕೆ ತಂಡವನ್ನು ಎದುರಿಸುತ್ತಿದೆ. ಮೇ 18ರಂದು ಆರ್‌ಸಿಬಿ ಅಜೇಯವಾಗಿದೆ. ಅಲ್ಲದೆ ಎರಡು ಬಾರಿ ಸಿಎಸ್‌ಕೆ ತಂಡವನ್ನು ಮಣಿಸಿದ ದಾಖಲೆ ಹೊಂದಿದೆ. ಇದೇ ವೇಳೆ ಈ ದಿನಾಂಕದಲ್ಲಿ ವಿರಾಟ್ ಕೊಹ್ಲಿ ಕೂಡಾ ಪ್ರಚಂಡ ಪ್ರದರ್ಶನ ನೀಡಿದ್ದಾರೆ.