ಅಜೇಯ ಡೆಲ್ಲಿಗೆ ಆರ್​ಸಿಬಿ ಸವಾಲು, ತವರಿನಲ್ಲಿ ಅಗ್ನಿಪರೀಕ್ಷೆ; ಪಿಚ್, ಹವಾಮಾನ ಸೇರಿ 10 ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಅಜೇಯ ಡೆಲ್ಲಿಗೆ ಆರ್​ಸಿಬಿ ಸವಾಲು, ತವರಿನಲ್ಲಿ ಅಗ್ನಿಪರೀಕ್ಷೆ; ಪಿಚ್, ಹವಾಮಾನ ಸೇರಿ 10 ಪ್ರಮುಖ ಅಂಶಗಳು

ಅಜೇಯ ಡೆಲ್ಲಿಗೆ ಆರ್​ಸಿಬಿ ಸವಾಲು, ತವರಿನಲ್ಲಿ ಅಗ್ನಿಪರೀಕ್ಷೆ; ಪಿಚ್, ಹವಾಮಾನ ಸೇರಿ 10 ಪ್ರಮುಖ ಅಂಶಗಳು

RCB vs DC, IPL 2025: 18ನೇ ಆವೃತ್ತಿಯ ಐಪಿಎಲ್​ನಲ್ಲಿ ಏಪ್ರಿಲ್ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಅಜೇಯ ಡೆಲ್ಲಿಗೆ ಆರ್​ಸಿಬಿ ಸವಾಲು, ತವರಿನಲ್ಲಿ ಅಗ್ನಿಪರೀಕ್ಷೆ; ಪಿಚ್, ಹವಾಮಾನ ಸೇರಿ 10 ಪ್ರಮುಖ ಅಂಶಗಳು
ಅಜೇಯ ಡೆಲ್ಲಿಗೆ ಆರ್​ಸಿಬಿ ಸವಾಲು, ತವರಿನಲ್ಲಿ ಅಗ್ನಿಪರೀಕ್ಷೆ; ಪಿಚ್, ಹವಾಮಾನ ಸೇರಿ 10 ಪ್ರಮುಖ ಅಂಶಗಳು

2025ರ ಇಂಡಿಯನ್ ಪ್ರೀಮಿಯರ್ ಲೀಗ್​ 24ನೇ ಪಂದ್ಯದಲ್ಲಿ ಅಜೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲಿಗೆ ಸಜ್ಜಾಗಿದೆ. ಆರ್​ಸಿಬಿ ತವರಿನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸುವ ಗುರಿ ಹೊಂದಿದೆ. ಮತ್ತೊಂದೆಡೆ ತವರಿನ ಅಭಿಮಾನಿಗಳ ಮುಂದೆ ರಾಯಲ್ ಚಾಲೆಂಜರ್ಸ್ ಮೊದಲ ಜಯದ ಹಂಬಲದಲ್ಲಿದೆ. ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಮೂರು ಬಾರಿಯ ಫೈನಲಿಸ್ಟ್‌ ಬೆಂಗಳೂರು ಅದ್ಭುತ ಫಾರ್ಮ್‌ನಲ್ಲಿದ್ದು, ಟೂರ್ನಿಯ ಆರಂಭಿಕ ಹಂತದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. ತಮ್ಮ ಹಿಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳಿಂದ ಗೆದ್ದು ಬೀಗಿದೆ. ಆದರೆ ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಹೀನಾಯ ಸೋಲು ಕಂಡಿತ್ತು.

ಡೆಲ್ಲಿಯು ಟೂರ್ನಿಯಲ್ಲಿ ಸೋಲೇ ಇಲ್ಲದೆ ಸರದಾರನಾಗಿ ಟೇಬಲ್ ಟಾಪರ್​ ಆಗಿರುವ ಡೆಲ್ಲಿ, ಸಂಘಟಿತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದೆ. ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಹೊಸತನದೊಂದಿಗೆ ಕಾಣುತ್ತಿದೆ. ತನ್ನ ಎರಡನೇ ತವರು ವಿಶಾಖಪಟ್ಟಣದಲ್ಲಿ 2 ಗೆಲುವು, ಚೆನ್ನೈನಲ್ಲಿ 1 ಗೆಲುವು ಸಾಧಿಸಿರುವ ಡಿಸಿ, ಬೆಂಗಳೂರಿನಲ್ಲೂ ಮತ್ತೊಂದು ಗೆಲುವಿನ ಕನಸಿನಲ್ಲಿದೆ.

1. ಆರ್‌ಸಿಬಿ ಮತ್ತು ಡಿಸಿ ತಂಡಗಳು ಇದುವರೆಗೆ 31 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆರ್‌ಸಿಬಿ 19 ಪಂದ್ಯಗಳಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಹೊಂದಿದ್ದರೆ, ಡಿಸಿ 11 ಬಾರಿ ಜಯ ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

2. ಆರ್​​ಸಿಬಿ ಹಾಗೂ ಡೆಲ್ಲಿ ನಡುವಿನ ಪಂದ್ಯವು ಏಪ್ರಿಲ್‌ 10ರ ಸಂಜೆ 7:30ಕ್ಕೆ ಆರಂಭವಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೋ ಹಾಟ್‌ಸ್ಟಾರ್‌ ಮೂಲಕ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸಬಹುದು.

3. ಕೆಎಲ್​ ರಾಹುಲ್​ಗೆ ಬೆಂಗಳೂರು ತವರಿನ ಪಿಚ್. ಅಲ್ಲದೆ, ಆರ್​ಸಿಬಿ ವಿರುದ್ಧವೂ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ ಫಾಫ್ ಡು ಪ್ಲೆಸಿಸ್ ಕಳೆದ ಮೂರು ಐಪಿಎಲ್​ಗಳಲ್ಲಿ ಆರ್​ಸಿಬಿ ಪರವೇ ಆಡಿದ್ದರು. ಹೀಗಾಗಿ ತಂಡದ ತಂತ್ರಗಳನ್ನು ಅರಿಯಬಹುದು.

4. ಡೆಲ್ಲಿ ಬೌಲಿಂಗ್ ವಿಭಾಗ ಅದ್ಭುತವಾಗಿದೆ. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಸ್ಪಿನ್ ಮೋಡಿ ಮಾಡಲಿದ್ದರೆ, ಮಿಚೆಲ್ ಸ್ಟಾರ್ಕ್, ಮೋಹಿತ್​ ಶರ್ಮಾ ವೇಗದ ಬೌಲಿಂಗ್ ಮೂಲಕ ಆರ್​ಸಿಬಿ ಬ್ಯಾಟರ್​ಗಳನ್ನು ಕಾಡಬಹುದು.

5. ಬ್ಯಾಟಿಂಗ್​ನಲ್ಲಿ ರಾಹುಲ್ ಫಾರ್ಮ್​ನಲ್ಲಿದ್ದು, ತಂಡದ ಬಲ ಹೆಚ್ಚಿಸಿದೆ. ಮತ್ತೊಂದೆಡೆ ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್ ಕೂಡ ಲಯದಲ್ಲಿದ್ದು, ಬೃಹತ್ ಸ್ಕೋರ್ ಇದ್ದರೂ ಚೇಸ್ ಮಾಡುವ ಸಾಮರ್ಥ್ಯ ಅವರಲ್ಲಿದೆ. ಆದರೆ ಜೇಕ್​ಫ್ರೇಸರ್, ಅಕ್ಷರ್ ಲಯಕ್ಕೆ ಮರಳುವುದು ಅಗತ್ಯ.

6. ಆರ್​ಸಿಬಿ ಬೌಲಿಂಗ್ ವಿಭಾಗದ ಡೆಲ್ಲಿಗೆ ಹೋಲಿಸಿದರೆ ಚೆನ್ನಾಗಿದೆ. ಭುವನೇಶ್ವರ್​ ಕುಮಾರ್, ಜೋಶ್ ಹೇಜಲ್​ವುಡ್, ಯಶ್ ದಯಾಳ್ ವಿಕೆಟ್ ಪಡೆಯುವುದರ ಜೊತೆಗೆ ರನ್​ ನಿಯಂತ್ರಣದಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ಕೃನಾಲ್ ಪಾಂಡ್ಯ ಮಾತ್ರ ಸ್ಪಿನ್ನರ್​ಗಳಲ್ಲಿ ಮೋಡಿ ಮಾಡುತ್ತಿದ್ದಾರೆ. ಆದರೆ ಸುಯಾಶ್ ಶರ್ಮಾ ದುಬಾರಿಯಾಗುತ್ತಿದ್ದಾರೆ.

7. ಬ್ಯಾಟಿಂಗ್​ನಲ್ಲೂ ಆರ್​​ಸಿಬಿ ಉತ್ತಮವಾಗಿದೆ. ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಪಡಿಕ್ಕಲ್, ರಜತ್ ಪಾಟೀದಾರ್, ಲಿವಿಂಗ್​ಸ್ಟೋನ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ವಿಕೆಟ್ ತಕ್ಕಂತೆ ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

8. ಬೆಂಗಳೂರು ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದ ಪಿಚ್​ ಬ್ಯಾಟರ್​ಗಳ ಪಾಲಿಗೆ ಸ್ವರ್ಗ. ಇದೇ ಪಿಚ್​ನಲ್ಲಿ ಕಳೆದ ವರ್ಷ ಎಸ್​ಆರ್​ಹೆಚ್ 287 ರನ್ ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಆರ್​​ಸಿಬಿ 260+ ರನ್ ಗಳಿಸಿತ್ತು. ಇಲ್ಲಿ ವೇಗಿಗಳು ಕೊಂಚ ದುಬಾರಿಯಾಗಬಹುದು. ಆದರೆ ಸ್ಪಿನ್ನರ್​ಗಳು ಪಂದ್ಯದಲ್ಲಿ ಕೊಂಚ ಮೇಲುಗೈ ಸಾಧಿಸಬಹುದು.

9. ಡೆಲ್ಲಿ ಮತ್ತು ಆರ್​​ಸಿಬಿ ನಡುವಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಳೆ ಬರಬಹುದು ಎಂದು ಹೇಳಲಾಗಿದೆ. ಏಪ್ರಿಲ್ 9ರಂದೇ ಮೋಡ ಕವಿದ ವಾತಾವರಣ ಇತ್ತು. ಜೊತೆಗೆ ಅಲ್ಲಲ್ಲಿ ಮಳೆಯೂ ಆಗಿತ್ತು. ಇಂದು ಮಳೆ ಸುರಿಯುವ ಸಾಧ್ಯತೆ ಇದೆ.

10. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

11. ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಭಿಷೇಕ್ ಪೊರೆಲ್, ಅಕ್ಸರ್ ಪಟೇಲ್ (ನಾಯಕ), ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner