ಓವರ್‌ಗೆ 14 ರನ್ ಆಗಬೇಕಿದ್ದರೂ ಚೇಸ್ ಮಾಡಬಹುದು; 68 ರನ್ ಬಿಟ್ಟುಕೊಟ್ಟ ಪ್ರಸಿದ್ಧ್ ಸಮರ್ಥಿಸಿದ ರುತುರಾಜ್
Ruturaj Gaikwad on Prasidh Krishna: ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ದುಬಾರಿ ಬೌಲರ್ ಎನಿಸಿಕೊಂಡರು. ಆದರೆ, ಅವರನ್ನು ಶತಕವೀರ ರುತುರಾಜ್ ಗಾಯಕ್ವಾಡ್ ಸಮರ್ಥಿಸಿಕೊಂಡಿದ್ದಾರೆ.
ಆಸ್ಟ್ರೆಲಿಯಾ ವಿರುದ್ಧದ (India vs Australia) ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಐದು ವಿಕೆಟ್‌ಗಳ ಹೀನಾಯ ಸೋಲು ಕಂಡಿತು. 222 ರನ್‌ಗಳ ಬೃಹತ್ ಮೊತ್ತ ಗಳಿಸಿದ ಹೊರತಾಗಿಯೂ, ಪ್ರವಾಸಿ ಆಸ್ಟ್ರೇಲಿಯಾ ಚೇಸಿಂಗ್ ಮಾಡಿ ಗೆದ್ದು ಬೀಗಿತು. ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಶತಕ ಸಿಡಿಸಿ ಮತ್ತೊಮ್ಮೆ ಕಾಂಗರೂ ಬಳಗದ ಹೀರೋ ಆಗಿ ಮಿಂಚಿದರು.
ಅಂತಿಮ ಓವರ್‌ನಲ್ಲಿ ಆಸೀಸ್ ಗೆಲುವಿಗೆ ಬರೋಬ್ಬರಿ 21 ರನ್‌ಗಳ ಅಗತ್ಯವಿತ್ತು. ಉಭಯ ತಂಡಗಳಿಗೂ ಗೆಲ್ಲುವ ಅವಕಾಶವಿತ್ತು. ಕೊನೆಯ ಓವರ್ ಎಸೆಯಲು ಬಂದ ವೇಗಿ ಪ್ರಸಿದ್ಧ್ ಕೃಷ್ಣ, ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಭಾರತವು ಕೂದಲೆಳೆ ಅಂತರದಲ್ಲಿ ಪಂದ್ಯ ಕಳೆದುಕೊಂಡಿತು. ಪಂದ್ಯದ ಕೊನೆಯ ಎಸೆತದಲ್ಲಿ ಮ್ಯಾಕ್ಸ್‌ವೆಲ್ ವಿನ್ನಿಂಗ್ ಬೌಂಡರಿ ಬಾರಿಸಿದರು.
ಇದನ್ನೂ ಓದಿ | ಶತಕದೊಂದಿಗೆ ಹಲವು ದಾಖಲೆ ಬರೆದ ಗಾಯಕ್ವಾಡ್; ಆಸೀಸ್ ವಿರುದ್ಧ ಈ ಸಾಧನೆ ಮಾಡಿದ ಮೊದಲ ಭಾರತೀಯ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಪರ, ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅಜೇಯ ಶತಕ ಸಿಡಿಸಿ ಮಿಂಚಿದರು. ಕೇವಲ 57 ಎಸೆತಗಳಲ್ಲಿ 123 ಸ್ಫೋಟಿಸಿ ದಾಖಲೆ ನಿರ್ಮಿಸಿದರು. ಅಮೋಘ ಇನ್ನಿಂಗ್ಸ್ ಹೊರತಾಗಿಯೂ ಭಾರತ ಸೋತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ದುಬಾರಿ ಬೌಲರ್ ಎನಿಸಿಕೊಂಡರು. ಯಾವುದೇ ವಿಕೆಟ್ ಪಡೆಯದೆ 68 ರನ್ ಬಿಟ್ಟುಕೊಟ್ಟ ಕೃಷ್ಣ ಅವರನ್ನು ಪಂದ್ಯದ ಬಳಿಕ ಗಾಯಕ್ವಾಡ್ ಸಮರ್ಥಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುತುರಾಜ್, “ಪ್ರಸಿದ್ಧ್ ಬೌಲಿಂಗ್ ಕಳವಳಕಾರಿ ಎಂದು ನನಗೆ ಅನಿಸುತ್ತಿಲ್ಲ. ಒದ್ದೆಯಾದ ಚೆಂಡಿನೊಂದಿಗೆ ಬೌಲಿಂಗ್ ಮಾಡುವಾಗ ಹೀಗಾಗುತ್ತದೆ. ಬೌಲರ್‌ಗಳಿಗೆ ಅದು ನಿಜಕ್ಕೂ ಕಠಿಣ” ಎಂದು ಗಾಯಕ್ವಾಡ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ | ಸ್ಫೋಟಕ ಶತಕದೊಂದಿಗೆ ಭಾರತದ ಗೆಲುವು ಕಸಿದ ಮ್ಯಾಕ್ಸ್‌ವೆಲ್; ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ
“ಇಂಥಾ ಪರಿಸ್ಥಿತಿಗಳಲ್ಲಿ ಪ್ರತಿ ಓವರ್‌ಗೆ 12 ರನ್ ಅಥವಾ 13-14 ರನ್ ಸುಲಭವಾಗಿ ಗಳಿಸಬಹುದು. ಮೊದಲ ಪಂದ್ಯದಲ್ಲಿ ನಾವು ಚೇಸಿಂಗ್ ಮಾಡುವಾಗ ಕೂಡಾ ಹೀಗೇ ಆಗಿತ್ತು. 210 ರನ್ ಅನ್ನು ಸುಲಭವಾಗಿ ಚೇಸ್ ಮಾಡಿದ್ದೇವೆ. ಪರಿಸ್ಥಿತಿಗಳು ಅವರಿಗೆ ಸ್ವಲ್ಪ ಕಠಿಣವಾಗಿವೆ. ಹೀಗಾಗಿ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಮುಂದುವರಿಯಬೇಕು,” ಎಂದು ಗಾಯಕ್ವಾಡ್ ವಿವರಿಸಿದ್ದಾರೆ.
“ನಮ್ಮ ಬೌಲರ್‌ಗಳು ತಮ್ಮಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಸುತ್ತಲೂ ಸಾಕಷ್ಟು ಇಬ್ಬನಿಯೂ ಇತ್ತು. ಹೀಗಾಗಿ ಚೆಂಡು ಬಹಳಷ್ಟು ಜಾರಿಬೀಳುತ್ತಿತ್ತು. ಹಾಗಾಗಿ ಬೌಲರ್‌ಗಳಿಗೂ ಇದು ಕಠಿಣವಾಗಿತ್ತು. ನಾವು 230 ರನ್ ಗಳಿಸಿದ್ದರೂ ಆಟವು ಕೊನೆಯ ಓವರ್‌ವರೆಗೆ ಹೋಗಬಹುದು ಎಂದು ಭಾವಿಸಿದ್ದೆವು,” ಎಂದು ಅವರು ಹೇಳಿದ್ದಾರೆ.
ಸದ್ಯ ಮೂರು ಪಂದ್ಯಗಳ ಬಳಿಕ ಭಾರತವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.