ಸಿಎಸ್‌ಕೆ ನಾಯಕತ್ವಕ್ಕೆ ಯುವ ವಿಕೆಟ್ ಕೀಪರ್ ವಾಪಸ್; ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್‌ಕೆ ನಾಯಕತ್ವಕ್ಕೆ ಯುವ ವಿಕೆಟ್ ಕೀಪರ್ ವಾಪಸ್; ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು

ಸಿಎಸ್‌ಕೆ ನಾಯಕತ್ವಕ್ಕೆ ಯುವ ವಿಕೆಟ್ ಕೀಪರ್ ವಾಪಸ್; ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು

CSK IPL 2025: ಸಿಎಸ್‌ಕೆ ತಂಡದಿಂದ ಹೊರಬಿದ್ದ ನಂತರ ರುತುರಾಜ್ ಗಾಯಕ್ವಾಡ್ ಮಾತನಾಡಿದ್ದಾರೆ. ಎಂಎಸ್‌ ಧೋನಿ ಮತ್ತೆ ನಾಯಕನಾಗುವ ಬಗ್ಗೆ ಹೇಳಿದ ಅವರು, ಯುವ ವಿಕೆಟ್‌ ಕೀಪರ್‌ ನಾಯಕತ್ವಕ್ಕೆ ಮರಳುತ್ತಿದ್ದಾರೆ ಎಂದಿದ್ದಾರೆ.

ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು
ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು (PTI)

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಮೊಣಕೈ ಮೂಳೆ ಮುರಿತದಿಂದಾಗಿ ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ಐಪಿಎಲ್ 2025ರ ಆವೃತ್ತಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಇಂದಿನಿಂದ (ಏಪ್ರಿಲ್ 11) ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಳಿದ ಪಂದ್ಯಗಳಲ್ಲಿ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಯೆಲ್ಲೋ ಆರ್ಮಿ ಸತತ ನಾಲ್ಕು ಪಂದ್ಯಗಳಲ್ಲಿ ಸೋತು ಸಂಕಷ್ಟ ಅನುಭವಿಸಿದೆ. ಇದರ ನಡುವೆ ನಾಯಕನ ನಿರ್ಗಮನ ಅಭಿಮಾನಿಗಳಿಗೆ ಬೇಸರವಾಗಿದೆ. ಇದೇ ವೇಳೆ ರುತುರಾಜ್ ಗಾಯಕ್ವಾಡ್ ಅವರ ಭರವಸೆ ಭಗ್ನಗೊಂಡಿವೆ.

ಒಂದೆಡೆ ತಂಡವು ಸತತ ನಾಲ್ಕು ಸೋಲಿನಿಂದ ಕಂಗೆಟ್ಟು ಗೆಲುವಿಗಾಗಿ ಹೆಣಗಾಡುತ್ತಿದೆ. ಈ ನಡುವೆ ಗಾಯಕ್ವಾಡ್‌ಗೆ ಗಾಯವು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಾಯಕ್ವಾಡ್ ಅಲಭ್ಯತೆ ಕುರಿತು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ದೃಢಪಡಿಸಿದ್ದಾರೆ. ಗಾಯಕ್ವಾಡ್ ಅವರನ್ನು ಹೊರಗಿಟ್ಟಿರುವುದರಿಂದ, ಇದೀಗ ಎಲ್ಲರ ಕಣ್ಣುಗಳು ಎಂಎಸ್ ಧೋನಿಯತ್ತ ನೆಟ್ಟಿವೆ. ಅವರು ಸಿಎಸ್‌ಕೆ ತಂಡವನ್ನು ಐಪಿಎಲ್ 2023ರ ಆವೃತ್ತಿಯ ಫೈನಲ್‌ಗೆ ಮುನ್ನಡೆಸಿದ್ದರು. ಅದಾದ ನಂತರ ಮೊದಲ ಬಾರಿಗೆ ನಾಯಕತ್ವಕ್ಕೆ ಮರಳಿದ್ದಾರೆ.

ಚೆನ್ನೈ ತಂಡದಿಂದ ಹೊರಬಿದ್ದ ಬಗ್ಗೆ 28 ವರ್ಷದ ಗಾಯಕ್ವಾಡ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಎಸ್‌ಕೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದೆ. “ದುರದೃಷ್ಟವಶಾತ್ ಮೊಣಕೈ ಗಾಯದಿಂದಾಗಿ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲು ನಾನು ನಿಜಕ್ಕೂ ಬೇಸರವಾಗುತ್ತಿದೆ. ಇಲ್ಲಿಯವರೆಗೆ ನಿಮ್ಮ ಬೆಂಬಲಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಬೆಂಬಲ ನನಗೆ ತುಂಬಾ ದೊಡ್ಡದು” ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಧೋನಿ ಯುವ ವಿಕೆಟ್ ಕೀಪರ್

ತಮ್ಮ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ತಂಡವನ್ನು "ಯುವ ವಿಕೆಟ್ ಕೀಪರ್" ಮುನ್ನಡೆಸುತ್ತಾರೆ ಎಂದು ಗಾಯಕ್ವಾಡ್‌ ಹೇಳಿಕೊಂಡಿದ್ದಾರೆ. “ಇದು ನಮಗೆ ಸವಾಲಿನ ಋತುವಾಗಿದೆ. ಆದರೆ ನಮ್ಮ ತಂಡವನ್ನು ಈಗ ಯುವ ವಿಕೆಟ್ ಕೀಪರ್ ಮುನ್ನಡೆಸುತ್ತಾರೆ. ತಂದ ಅದೃಷ್ಟ ಬದಲಾಗುತ್ತದೆ ಎಂದು ನಾವು ಆಶಿಸುತ್ತೇವೆ. ನಾನು ಕೂಡಾ ತಂಡದೊಂದಿಗೆ ಇರುತ್ತೇನೆ. ಡಗೌಟ್‌ನಿಂದ ಅವರನ್ನು ಬೆಂಬಲಿಸುತ್ತೇನೆ,” ಎಂದು ಗಾಯಕ್ವಾಡ್‌ ಮುಗುಳ್ನಗೆಯೊಂದಿಗೆ ಹೇಳಿದ್ದಾರೆ.‌

ಕೆಕೆಆರ್‌ ವಿರುದ್ಧ ಸಿಎಸ್‌ಕೆ ಸಂಭಾವ್ಯ ತಂಡ

ರಚಿನ್ ರವೀಂದ್ರ, ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ಶಿವಂ ದುಬೆ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್‌ ಕೀಪರ್), ಆರ್ ಅಶ್ವಿನ್, ನೂರ್ ಅಹ್ಮದ್, ಮಥೀಶ ಪತಿರಾನ, ಖಲೀಲ್ ಅಹ್ಮದ್, ಮುಖೇಶ್ ಚೌಧರಿ/ ಅನ್ಶುಲ್ ಕಾಂಬೋಜ್.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner