ಕನ್ನಡ ಸುದ್ದಿ  /  Cricket  /  Ruturaj Gaikwad On Ms Dhoni Captaincy Ahead Of India Vs Nepal Asian Games 2023 Clash Csk Cricket News In Kannada Jra

ಧೋನಿಯಂತೆ ತಂಡ ಮುನ್ನಡೆಸುವುದಿಲ್ಲ; ನನ್ನ ನಾಯಕತ್ವ ಶೈಲಿಯೇ ಬೇರೆ ಎಂದ ರುತುರಾಜ್ ಗಾಯಕ್ವಾಡ್

India vs Nepal: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡವನ್ನು ತಮ್ಮದೇ ಶೈಲಿಯಲ್ಲಿ ಮುನ್ನಡೆಸುವುದಾಗಿ ನಾಯಕ ರುತುರಾಜ್ ಗಾಯಕ್ವಾಡ್‌ ತಿಳಿಸಿದ್ದಾರೆ.

ರುತುರಾಜ್‌ ಗಾಯಕ್ವಾಡ್‌, ಎಂಎಸ್‌ ಧೋನಿ
ರುತುರಾಜ್‌ ಗಾಯಕ್ವಾಡ್‌, ಎಂಎಸ್‌ ಧೋನಿ

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರನಾಗಿ ಅಬ್ಬರಿಸಿರುವ ರುತುರಾಜ್ ಗಾಯಕ್ವಾಡ್, ಇದೀಗ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಬುಧವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡವು ನೇಪಾಳ ತಂಡವನ್ನು ಎದುರಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಸಿಎಸ್‌ಕೆ ತಂಡದ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ಡ್ರೆಸಿಂಗ್‌ ರೂಮ್‌ ಹಂಚಿಕೊಂಡಿರುವ ಗಾಯಕ್ವಾಡ್‌, ಮಾಹಿ ನಾಯಕತ್ವದಲ್ಲಿ ಹಲವಾರು ವಿಷಯಗಳನ್ನು ಕಲಿತಿದ್ದಾರೆ. ಐಪಿಎಲ್ 2021ರ ಆವೃತ್ತಿಯ ಬಳಿಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರದ ನಾಯಕನಾಗಿ ಆಡಿದ್ದ ಗಾಯಕ್ವಾಡ್‌, ಇದೀಗ ಭಾರತ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಧೋನಿ ಗರಡಿಯಲ್ಲಿ ಪಳಗಿದ ಅನುಭವವಿರುವ ಅವರು ಇದೀಗ ನಾಯಕನಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಪಡೆದಿದ್ದಾರೆ.

ಧೋನಿಯ ನಾಯಕತ್ವ ಶೈಲಿ ಅನುಸರಿಸುವುದಿಲ್ಲ

ಪಂದ್ಯಾವಳಿಯಲ್ಲಿ ರುತುರಾಜ್ ಅವರು ಧೋನಿಯ ನಾಯಕತ್ವ ಶೈಲಿಯನ್ನು ಅನುಕರಿಸಬಹುದು ಎಂಬುದು ಬಹುತೇಕರ ನಿರೀಕ್ಷೆ. ಆದರೆ, ಭಾರತ ತಂಡವನ್ನು ತಮ್ಮದೇ ಶೈಲಿಯಲ್ಲಿ ಮುನ್ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

“ನಾನು ಧೋನಿ ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಆದರೆ ಪ್ರತಿಯೊಬ್ಬ ವ್ಯಕ್ತಿ ಕೂಡಾ ಅವರದ್ದೇ ಆದ ಭಿನ್ನ ವಿಭಿನ್ನ ಶೈಲಿಯನ್ನು ಹೊಂದಿರುತ್ತಾರೆ. ಮಾಹಿ ಅವರ ಶೈಲಿಯೇ ವಿಭಿನ್ನ. ಅವರ ವ್ಯಕ್ತಿತ್ವ ಬೇರೆ, ನನ್ನ ವ್ಯಕ್ತಿತ್ವ ಬೇರೆ,” ಎಂದು ಗಾಯಕ್ವಾಡ್ ಭಾರತ ತಂಡದ ಮೊದಲ ಪಂದ್ಯಕ್ಕೂ ಮುನ್ನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನಾನು ನಾನಾಗಿರಲು ಪ್ರಯತ್ನಿಸುತ್ತೇನೆ. ಮಾಹಿ ತಂಡವನ್ನು ಹೇಗೆ ನಿಭಾಯಿಸುತ್ತಾರೋ ಹಾಗೆ ನಾನು ಕೂಡಾ ನಿಜವಾಗಿಯೂ ಮಾಡುವುದಿಲ್ಲ. ಖಂಡಿತವಾಗಿಯೂ ಅವರು ಅನುಸರಿಸುತ್ತಿದ್ದ ಕೆಲವು ವಿಷಯಗಳನ್ನು ನಾನು ಕೂಡಾ ಮಾಡಬೇಕಾಗುತ್ತದೆ. ಅವರು ಹೇಗೆ ಸನ್ನಿವೇಶಗಳನ್ನು ನಿಭಾಯಿಸುತ್ತಾರೆ, ಪಂದ್ಯದ ಸಮಯದಲ್ಲಿ ಕೆಲವು ನಿರ್ದಿಷ್ಟ ಆಟಗಾರರನ್ನು ಹೇಗೆ ನಿಭಾಯಿಸುತ್ತಾರೆ ಎಂಬದುನ್ನು ನಾನು ಕೂಡಾ ಅನುಸರಿಸುತ್ತೇನೆ. ಒಟ್ಟಾರೆಯಾಗಿ, ನಾನು ಬಯಸಿದ ರೀತಿಯಲ್ಲಿ ತಂಡವನ್ನು ಮುನ್ನಡೆಸಲು ನಾನು ಪ್ರಯತ್ನಿಸುತ್ತೇನೆ. ಆಟಗಾರರು ಅವರವರ ಆಟವಾಡಲು ಬೇಕಾದ ಸ್ವಾತಂತ್ರ್ಯವನ್ನು ಕೊಡುವುದು ನನಗೆ ತುಂಬಾ ಮುಖ್ಯ,” ಎಂದು ಗಾಯಕ್ವಾಡ್‌ ಹೇಳಿದ್ದಾರೆ.

ಈಗಾಗಲೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವು ಚಿನ್ನ ಗೆದ್ದಿದೆ. ಇದೀಗ ಭಾರತೀಯರ ಚಿತ್ತ ಪುರುಷರ ಕ್ರಿಕೆಟ್‌ ತಂಡದ ಮೇಲಿದೆ. ಮಂಗಳವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ನೇಪಾಳ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ಅಭಿಯಾನ ಆರಂಭಿಸುತ್ತಿದೆ. ಎಲ್ಲಾ ಆಟಗಾರರು ಮಹಿಳಾ ಆಟಗಾರರಂತೆ ಚಿನ್ನದ ಪದಕ ಗೆಲ್ಲಲು ಉತ್ಸುಕರಾಗಿದ್ದಾರೆ ಎಂದು ಗಾಯಕ್ವಾಡ್ ಹೇಳಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಭಾರತ ಮತ್ತು ನೇಪಾಳ ನಡುವಿನ ಏಷ್ಯನ್‌ ಗೇಮ್ಸ್‌ ಪಂದ್ಯವು ಮಂಗಳವಾರ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಪಂದ್ಯವು ಅಕ್ಟೋಬರ್ 3ರ ಮಂಗಳವಾರ ಬೆಳಗ್ಗೆ 6:30 ಗಂಟೆಗೆ ಪ್ರಾರಂಭವಾಗುತ್ತದೆ.‌ ಪಂದ್ಯವನ್ನು ಮೊಬೈಲ್‌ ಮೂಲಕ SonyLIV ಅಪ್ಲಿಕೇಶನ್ ಮೂಲಕ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಟಿವಿ ಮೂಲಕ ಸೋನಿ ಸ್ಪೋರ್ಟ್ಸ್‌ (Sony Sports Ten 2 SD & HD) ಮತ್ತು Sony Sports Ten 3 SD & HD (ಹಿಂದಿ) ಟಿವಿ ಚಾನೆಲ್‌ಗಳ ಮೂಲಕ ನೇರ ಪ್ರಸಾರ ನೋಡಬಹುದು.

ಏಷ್ಯನ್ ಗೇಮ್ಸ್ 2023ರ ಭಾರತ ಕ್ರಿಕೆಟ್ ತಂಡ

ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್‌ ಕೀಪರ್)‌.

ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.

ಸಂಬಂಧಿತ ಲೇಖನ

ಕ್ರಿಕೆಟ್ ಪ್ರೇಮಿಗಳೇ Cricket News, Live Score ಮತ್ತು Kannada News ಮತ್ತು ಸಂಬಂಧಿಸಿದ ಬರಹಗಳನ್ನು ಓದಿ.