ಕನ್ನಡ ಸುದ್ದಿ  /  Cricket  /  Ruturaj Gaikwad To Lead Chennai Super Kings In Ipl 2024 As Ms Dhoni Steps Down As Csk Captain Indian Premier League Jra

ಎಂಎಸ್ ಧೋನಿ ನಾಯಕತ್ವ ಯುಗಾಂತ್ಯ; ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ನೂತನ ಕ್ಯಾಪ್ಟನ್​ ನೇಮಕ

CSK Captain Ruturaj Gaikwad: ಸಿಎಸ್‌ಕೆ ತಂಡದ ನಾಯಕತ್ವದಿಂದ ಎಂಎಸ್‌ ಧೋನಿ ಕೆಳಗಿಳಿದಿದ್ದಾರೆ. ಐಪಿಎಲ್‌ 2024ರ ಆವೃತ್ತಿಗೆ ರುತುರಾಜ್‌ ಗಾಯಕ್ವಾಡ್‌ ಅವರಿಗೆ ನಾಯಕತ್ವ ವಹಿಸಲಾಗಿದೆ. ಈ ಬಾರಿ ಹೊಸ ನಾಯಕನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಕಣಕ್ಕಿಳಿಯಲಿದೆ.

ನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ನೂತನ ಕ್ಯಾಪ್ಟನ್​ ನೇಮಕ
ನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ನೂತನ ಕ್ಯಾಪ್ಟನ್​ ನೇಮಕ (AP)

ಐಪಿಎಲ್‌ ಆರಂಭಕ್ಕೂ ಮುನ್ನ ಸಿಎಸ್‌ಕೆ ತಂಡದ ನಾಯಕ ಬದಲಾಗಿದ್ದಾರೆ. ದಿಗ್ಗಜ ಆಟಗಾರ ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದೀಗ ಅಚ್ಚರಿ ಎಂಬಂತೆ, ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ನೂತನ ನಾಯಕನಾಗಿ ಐಪಿಎಲ್ 2024ರ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತು ಐಪಿಎಲ್‌ ಹಾಗೂ ಸಿಎಸ್‌ಕೆ ಫ್ರಾಂಚೈಸ್ ಖಚಿತಪಡಿಸಿದೆ. ಧೋನಿ ತಮ್ಮ ನಾಯಕತ್ವವನ್ನು ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ ಎಂದು ಫ್ರಾಂಚೈಸ್‌ ಟ್ಟೀಟ್‌ ಮಾಡಿದೆ.

2019ರಿಂದ ಗಾಯಕ್ವಾಡ್ ಸಿಎಸ್‌ಕೆ ಪರ ಆಡುತ್ತಿದ್ದಾರೆ. ಎಲ್ಲೋ ಆರ್ಮಿ ಪರ ಈವರೆಗೆ 52 ಪಂದ್ಯಗಳನ್ನು ಆಡಿರುವ ಋತು, ಆರಂಭಿಕನಾಗಿ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. 2021ರಲ್ಲಿ ಫ್ರಾಂಚೈಸಿಯು ನಾಲ್ಕನೇ ಟ್ರೋಫಿಗೆ ಮುತ್ತಿಡುವಲ್ಲಿ ನೆರವಾಗಿದ್ದ ಗಾಯಕ್ವಾಡ್‌, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದೀಗ, ತಂಡದ ಯಶಸ್ವಿ ಆಟಗಾರನಾದ ಮಹಾರಾಷ್ಟ್ರ ಮೂಲಕ ಬ್ಯಾಟರ್‌ಗೆ ಐಪಿಎಲ್‌ನ ಯಶಸ್ವಿ ತಂಡವೊಂದನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಸಿಕ್ಕಿದೆ.

ಭಾರತ ಕಂಡ ಶ್ರೇಷ್ಠ ನಾಯಕ ಹಾಗೂ ವಿಕೆಟ್‌ ಕೀಪರ್‌ ಆಗಿರುವ ಎಂಎಸ್‌ ಧೋನಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದಲೂ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. 42 ವರ್ಷದ ಮಾಹಿ ಪ್ರತಿ ಆವೃತ್ತಿಯಲ್ಲಿಯೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆ ಫ್ರಾಂಚೈಸಿಯನ್ನು ಅಮಾನತುಗೊಳಿಸಲಾಗಿತ್ತು. ಆ ಎರಡು ವರ್ಷ ಹಾಗೂ 2022ರ ಋತುವಿನ ಆರಂಭದಲ್ಲಿ ರವೀಂದ್ರ ಜಡೇಜಾ ನಾಯಕತ್ವ ವಹಿಸಿದ್ದರು. ಆದರೆ, ಎಂಟು ಪಂದ್ಯಗಳ ನಂತರ ಮತ್ತೆ ಮಾಹಿ ನಾಯಕನಾಗಿ ಮರಳಿದರು.

ಐಪಿಎಲ್‌ ಹಾಗೂ ಸಿಎಸ್‌ಕೆ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ಶ್ರೇಯಸ್ಸು ಹೊಂದಿರುವ ಧೋನಿ, ಬರೋಬ್ಬರಿ 212 ಐಪಿಎಲ್ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 128 ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ.

ಹೊಸ ಪಾತ್ರ ವಹಿಸುವ ಸುಳಿವು

ಪ್ರಸಕ್ತ ಆವೃತ್ತಿಯ ಆರಂಭದಲ್ಲೇ ತಾವು ಹೊಸ ಪಾತ್ರ ನಿರ್ವಹಿಸುವುದಾಗಿ ಧೋನಿ ಸುಳಿವು ನೀಡಿದ್ದರು. ಈ ಬಗ್ಗೆ ಅಭಿಮಾನಿಗಳಿಗೆ ಗೊಂದಲವಿತ್ತು. ಇದೀಗ ಮಾಹಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಮುಂದೆ ಚೆನ್ನೈ ತಂಡದ ಕೋಚ್‌ ಆಗಿ ಮುಂದುವರೆಯುವ ಸಾಧ್ಯತೆ ಇದೆ ಎಂಬ ವರದಿಗಳಿವೆ.

ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಅಲ್ಲದೆ ಆವೃತ್ತಿಯ ಬಳಿಕ ಧೋನಿ ಐಪಿಎಲ್‌ಗೆ ವಿದಾಯ ಹೇಳುತ್ತಾರೆ ಎಂದೇ ‌ ಭಾವಿಸಲಾಗಿತ್ತು. ಆದರೆ, ತಮ್ಮ ಅಭಿಮಾನಿಗಳಿಗಾಗಿ ಮತ್ತೊಂದು ಆವೃತ್ತಿಯಲ್ಲಿ ಆಡುವುದಾಗಿ ಮಾಹಿ ತಿಳಿಸಿದರು. ಅಹಮದಾಬಾದ್‌ನಲ್ಲಿ ನಡೆದ 2023ರ ಐಐಪಿಎಲ್‌ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ಸಿಎಸ್‌ಕೆ ತಂಡ, ಐದನೇ ಐಪಿಎಲ್ ಟ್ರೋಫಿ ಡತ್ತಿ ಹಿಡಿಯಿತು. ಯಶಸ್ವಿ ನಾಯಕ ಇದೀಗ ತಮ್ಮ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ | ಜಿಯೋ ಸಿನಿಮಾದಲ್ಲಿ ಐಪಿಎಲ್‌ ಉಚಿತ ಲೈವ್‌ ಸ್ಟ್ರೀಮಿಂಗ್; 12 ಭಾಷೆಗಳಲ್ಲಿ ಕಾಮೆಂಟರಿ‌, ಕನ್ನಡ ವೀಕ್ಷಕ ವಿವರಣೆಕಾರರು ಇವರೇ

2020ರ ಆಗಸ್ಟ್ 15ರಂದು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ ಮಾಹಿ, ಶೀಘ್ರದಲ್ಲೇ ಐಪಿಎಲ್‌ಗೆ ವಿದಾಯ ಹೇಳಿದರೂ ಅಚ್ಚರಿಯಿಲ್ಲ. ಇದೇ ವೇಳೆ ಸಿಎಸ್‌ಕೆ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ. ಭಾರತವನ್ನು 2007ರ ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯತ್ತ ಮುನ್ನಡಸಿದ ಯಶಸ್ವಿ ನಾಯಕನ ಅನುಭವದ ನಾಯಕತ್ವವನ್ನು ಸಿಎಸ್‌ಕೆ ತಂಡ ಮುಂದಿನ ದಿನಗಳಲ್ಲಿ ಕಳೆದುಕೊಳ್ಳುವುದಂತೂ ಖಚಿತ.

IPL_Entry_Point