ಸಚಿನ್ ಆ ಒಂದು ಮೈಲಿಗಲ್ಲು ತಲುಪಲು ತೆಗೆದುಕೊಂಡದ್ದು 71 ಟೆಸ್ಟ್, 10 ವರ್ಷ; ಆದರೆ ತಿಂಗಳೊಳಗೆ ಸಾಧಿಸಿದ್ರು ವಿನೋದ್ ಕಾಂಬ್ಳಿ!
Sachin Tendulkar: ವಿಶ್ವ ಕ್ರಿಕೆಟ್ ಅನ್ನು ಆಳಿರುವ ದಿಗ್ಗಜ ಸಚಿನ್ ತೆಂಡೂಲ್ಕರ್ ತನ್ನ ಹೆಸರಿನಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದುಕೊಂಡಿದ್ದಾರೆ. ಇಂತಹ ಕ್ರಿಕೆಟಿಗ ಆ ಒಂದು ಮೈಲಿಗಲ್ಲು ತಲುಪಲು ತೆಗೆದುಕೊಂಡಿದ್ದು 10 ವರ್ಷ.
![ಸಚಿನ್ ಆ ಒಂದು ಮೈಲಿಗಲ್ಲು ತಲುಪಲು ತೆಗೆದುಕೊಂಡದ್ದು 10 ವರ್ಷ; ಆದರೆ, ತಿಂಗಳೊಳಗೆ ಸಾಧಿಸಿದ್ರು ವಿನೋದ್ ಕಾಂಬ್ಳಿ! ಸಚಿನ್ ಆ ಒಂದು ಮೈಲಿಗಲ್ಲು ತಲುಪಲು ತೆಗೆದುಕೊಂಡದ್ದು 10 ವರ್ಷ; ಆದರೆ, ತಿಂಗಳೊಳಗೆ ಸಾಧಿಸಿದ್ರು ವಿನೋದ್ ಕಾಂಬ್ಳಿ!](https://images.hindustantimes.com/kannada/img/2024/12/13/550x309/sachin_kambli1_4_1734095348585_1734095356531.png)
ಸಚಿನ್ ತೆಂಡೂಲ್ಕರ್... ನಿವೃತ್ತರಾದರೂ ಈಗಲೂ ವಿಶ್ವ ಕ್ರಿಕೆಟ್ಗೆ ಅಧಿಪತಿ. ಅತ್ಯಧಿಕ ರನ್, ಶತಕ, ಅರ್ಧಶತಕ, ಪಂದ್ಯ, ಪಂದ್ಯಶ್ರೇಷ್ಠ.. ಹೀಗೆ ಒಂದಾ, ಎರಡಾ ಅದೆಷ್ಟೋ ದಾಖಲೆಗಳ ಒಡೆಯ. ಅಸಾಧ್ಯ ಎನ್ನುತ್ತಿದ್ದ ದಾಖಲೆಗಳನ್ನೇ ನಿರ್ಮಿಸಿದ್ದಾರೆ ಈ ಶತಕಗಳ ಸರದಾರ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ ಅವರು, ಅದೆಷ್ಟೋ ಯುವ ಕ್ರಿಕೆಟಿಗರಿಗೆ ರೋಲ್ ಮಾಡೆಲ್. 16ನೇ ವಯಸ್ಸಿಗೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟು 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಆಳಿರುವ ಸಚಿನ್, ಅದೊಂದು ಮೈಲಿಗಲ್ಲು ತಲುಪಲು ತೆಗೆದುಕೊಂಡ ಸಮಯ 10 ವರ್ಷ. ಅಂದರೆ 71 ಟೆಸ್ಟ್, 111 ಇನ್ನಿಂಗ್ಸ್, 20 ಶತಕ ಸಿಡಿಸಿದ ನಂತರ! ಆದರೆ ಅವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಕ್ರಿಕೆಟ್ಗೆ ಕಾಲಿಟ್ಟ ತಿಂಗಳೊಳಗೆ ಸಾಧಿಸಿದ್ದು ವಿಶೇಷ.
ಸಚಿನ್ ಟೆಸ್ಟ್ನಲ್ಲಿ ದ್ವಿಶತಕ ಸಿಡಿಸಲು ತೆಗೆದುಕೊಂಡಿದ್ದು, 10 ವರ್ಷ.! 1989ರ ನವೆಂಬರ್ 15ರಂದು ಪದಾರ್ಪಣೆ ಮಾಡಿದ್ದ ಸಚಿನ್ ತನ್ನ ಮೊದಲ ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿದ್ದು, 1999ರಲ್ಲಿ. ಆದರೆ ಇವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1991ರಲ್ಲಿ. ಅದು ಕೂಡ ಏಕದಿನ ಕ್ರಿಕೆಟ್ಗೆ. ಆದರೆ, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1993ರಲ್ಲಿ. ಅವಕಾಶ ಸಿಕ್ಕ ಒಂದು ತಿಂಗಳೊಳಗೆ ಅವರು ಒಂದಲ್ಲ 2 ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದರು. 1993ರ ಫೆಬ್ರವರಿ 19ರಂದು ಇಂಗ್ಲೆಂಡ್ ವಿರುದ್ಧ, 1993ರ ಮಾರ್ಚ್ 13ರಂದು ಜಿಂಬಾಬ್ವೆ ವಿರುದ್ಧ 227 ರನ್ ಸಿಡಿಸಿದ್ದರು. ಸಚಿನ್ಗಿಂತಲೂ ಹಿಂದೆ ಬಂದ ಕಾಂಬ್ಳಿ, ನಾಲ್ಕು ಮತ್ತು ಐದನೇ ಇನ್ನಿಂಗ್ಸ್ಗಳಲ್ಲಿ ಇನ್ನೂರು ಮುಟ್ಟಿದ್ದರು. ಈ ಸಾಧನೆ ಮಾಡಲು ಸಚಿನ್ ತೆಗೆದುಕೊಂಡಿದ್ದು, 71 ಟೆಸ್ಟ್ನ ಪಂದ್ಯಗಳ ಪೈಕಿ 111 ಇನ್ನಿಂಗ್ಸ್ಗಳು ಅಂದರೆ 10 ವರ್ಷ. ಇದು ಕಾಂಬ್ಳಿ ಸಾಮರ್ಥ್ಯ ಎಂಥಹದ್ದು ಎಂಬುದನ್ನು ಸಾಬೀತುಪಡಿಸುತ್ತದೆ.
ತೆಂಡೂಲ್ಕರ್ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಪದಾರ್ಪಣೆಗೈದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1990ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ದಾಖಲಿಸಿದ್ದರು. ಆದರೆ ಅದೇ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಒಂದು ದಶಕ ಬೇಕಾಯಿತು. ಸಚಿನ್ 1999ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ತಮ್ಮ ಮೊದಲ ಟೆಸ್ಟ್ ದ್ವಿಶತಕ ಸಿಡಿಸಿದ್ದರು. 1995ರಲ್ಲಿ ಕಿವೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ ಕಾಂಬ್ಳಿ, ತನ್ನ ನಾಲ್ಕನೇ ಇನ್ನಿಂಗ್ಸ್ನಲ್ಲೇ ದ್ವಿಶತಕ ಸಿಡಿಸಿದ್ದರು. ಅದ್ಭುತ ಸಾಮರ್ಥ್ಯ ಹೊಂದಿದ್ದ ಕಾಂಬ್ಳಿ ಅವರು ದುಶ್ಚಟಗಳಿಗೆ ಒಳಗಾಗಿ ತನ್ನ ವೃತ್ತಿಜೀವನವನ್ನು ತಾನೇ ಅಂತ್ಯಗೊಳಿಸಿಕೊಂಡರು. ಉಭಯ ಆಟಗಾರರ ಟೆಸ್ಟ್ ಕ್ರಿಕೆಟ್ ಅಂಕಿ-ಅಂಶಗಳು ಹೇಗಿವೆ?
ಸಚಿನ್ ತೆಂಡೂಲ್ಕರ್ ಟೆಸ್ಟ್ ಪ್ರದರ್ಶನ
ಪಂದ್ಯ - 200
ರನ್ - 15921
ಸರಾಸರಿ - 53.78
50/100 - 68/51
ವಿನೋದ್ ಕಾಂಬ್ಳಿ ಟೆಸ್ಟ್ ಪ್ರದರ್ಶನ
ಪಂದ್ಯ - 17
ರನ್ - 1084
ಸರಾಸರಿ - 54.20
50/100 - 03/04
ಇತ್ತೀಚೆಗೆ ಭೇಟಿಯಾಗಿದ್ದ ಸಚಿನ್-ಕಾಂಬ್ಳಿ
ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಬಾಲ್ಯ ಸ್ನೇಹಿತಾದ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಪರಸ್ಪರ ಮುಖಾಮುಖಿ ಆಗಿದ್ದರು. ಈ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಇಬ್ಬರು ಸಹ ರಮಾಕಾಂತ್ ಅಚ್ರೇಕರ್ ಅವರ ವಿದ್ಯಾರ್ಥಿಗಳು. ಕಾಂಬ್ಳಿ-ಸಚಿನ್ ಬಾಲ್ಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ತನಕ ಉತ್ತಮ ಸ್ನೇಹಿತರು. ಆದರೆ ಸಚಿನ್ ಶಿಸ್ತು ಕ್ರಮ ಜೀವನವನ್ನು ಅಳವಡಿಸಿಕೊಂಡರೆ, ಕಾಂಬ್ಳಿ ಕುಡಿತದ ವ್ಯಸನಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಂಡರು. ಶಾಲಾ ಕ್ರಿಕೆಟ್ನಲ್ಲಿ ಸೇಂಟ್ ಕ್ಸೇವಿಯರ್ ಕಾಲೇಜು ವಿರುದ್ಧ ಶಾರದಾಶ್ರಮ ಶಾಲೆಯ ಪರ ಸಚಿನ್-ಕಾಂಬ್ಳಿ ಜೋಡಿ ಬರೋಬ್ಬರಿ 664 ರನ್ಗಳ ಜೊತೆಯಾಟವಾಡಿತ್ತು.
![Whats_app_banner Whats_app_banner](https://kannada.hindustantimes.com/static-content/1y/wBanner.png)